Saturday, 14th December 2024

ಜ.31ರಿಂದ ಸಂಸತ್ತಿನ ಬಜೆಟ್ ಅಧಿವೇಶನ, ಫೆಬ್ರವರಿ 1ರಂದು ಬಜೆಟ್ ಮಂಡನೆ

ನವದೆಹಲಿ: ಇದೇ ಜ.31ರಂದು ಸಂಸತ್ತಿನ ಬಜೆಟ್ ಅಧಿವೇಶನ ರಾಷ್ಟ್ರಪತಿಗಳು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಆರಂಭವಾಗಿ ಏಪ್ರಿಲ್ 8ಕ್ಕೆ ಮುಕ್ತಾಯವಾಗಲಿದೆ.

ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಕೋವಿಡ್ ಮೂರನೇ ಅಲೆ, ಓಮಿಕ್ರಾನ್ ರೂಪಾಂತರಿ ಹೆಚ್ಚಳ ಸಮಯದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿರುವುದು ಸಂಸತ್ ಸದಸ್ಯರಿಗೆ, ಸಿಬ್ಬಂದಿಗೆ, ಅಧಿಕಾರಿಗಳಿಗೆ ಕಠಿಣವಾಗಿದೆ. ಸೂಕ್ತ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳ ಮಧ್ಯೆ ಬಜೆಟ್ ಅಧಿವೇಶನ ನಡೆಸಬೇಕಿದೆ.

ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ನೀಡಿರುವ ಶಿಫಾರಸುಗಳ ಮೇರೆಗೆ ಬಜೆಟ್ ಅಧಿವೇಶನ ನಡೆಸುವ ನಿರ್ಧಾರ ಕೈಗೊಳ್ಳಲಾಗಿದ್ದು ಕೇಂದ್ರ ಸಾಮಾನ್ಯ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗಲಿದೆ.

ಬಜೆಟ್ ಅಧಿವೇಶನದ ಮೊದಲ ಭಾಗ ಫೆಬ್ರವರಿ 11ರಂದು ಮುಕ್ತಾಯವಾಗಿ ಒಂದು ತಿಂಗಳ ನಂತರ ಅಂದರೆ ಮಾರ್ಚ್ 14ರಿಂದ ಏಪ್ರಿಲ್ 8ರವರೆಗೆ ಎರಡನೇ ಭಾಗದ ಅಧಿವೇಶನ ನಡೆಯಲಿದೆ.

ಕೋವಿಡ್ -19 ಪ್ರಕರಣಗಳ ಹೆಚ್ಚಳ ಮತ್ತು 400ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಬಂದಿರುವುದರಿಂದ ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನಕ್ಕಾಗಿ ಉಭಯ ಸದನಗಳ(ರಾಜ್ಯಸಭೆ ಮತ್ತು ಲೋಕಸಭೆ) ಪಾಳಿಯಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.