Sunday, 15th December 2024

ನಾಲ್ವರು ಕೇಂದ್ರ ಸಚಿವರಿಗೆ ಹೆಚ್ಚುವರಿ ಖಾತೆ ಹೊಣೆ

ವದೆಹಲಿ: ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಮೂವರು ಕೇಂದ್ರ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅವರು ಹೊಂದಿದ್ದ ಖಾತೆಗಳ ಹೆಚ್ಚುವರಿ ಹೊಣೆಯನ್ನು ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಅರ್ಜುನ್ ಮುಂಡಾ ಹಾಗೂ ಭಾರತೀ ಪವಾರ್ ಗೆ ನೀಡಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಕೇಂದ್ರ ಕೃಷಿ ಹಾಗೂ ಆಹಾರ ಸಂರಕ್ಷಣೆ ಸಚಿವರಾಗಿದ್ದ ನರೇಂದ್ರ ಸಿಂಗ್ ತೋಮರ್, ಪ್ರವಾ ಸೋದ್ಯಮ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹಾಗೂ ಬುಡಕಟ್ಟು ಖಾತೆ ರಾಜ್ಯ ಸಚಿವೆ ರೇಣುಕಾ ಸಿಂಗ್ ಸರೂಟಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇವರುಗಳ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವೀಕರಿಸಿದ್ದಾರೆ. ಬಳಿಕ ಈ ಮೂವರು ಹೊಂದಿದ್ದ ಖಾತೆಗಳನ್ನು ನಾಲ್ವರಿಗೆ ಹಂಚಿಕೆ ಮಾಡಲಾಗಿದೆ. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಜಲಶಕ್ತಿ ಸಚಿವಾಲಯ ರಾಜ್ಯ ಖಾತೆ ಹೆಚ್ಚು ವರಿ ಹೊಣೆ ನೀಡಲಾಗಿದೆ.

ಕೇಂದ್ರ ಕೃಷಿ ಸಚಿವಾಲಯದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆಗೆ ಆಹಾರ ಸಂಸ್ಕರಣಾ ಸಚಿವಾಲಯದ ಹೆಚ್ಚುವರಿ ಹೊಣೆ ವಹಿಸಲಾಗಿದೆ.

ಕೇಂದ್ರ ಬುಡಕಟ್ಟು ಸಚಿವರಾಗಿದ್ದ ಅರ್ಜುನ್ ಮುಂಡಾ ಅವರಿಗೆ ಹೆಚ್ಚುವರಿಯಾಗಿ ಕೃಷಿ ಖಾತೆಯ ಹೊಣೆಗಾರಿಕೆ ನೀಡಲಾಗಿದೆ. ಆರೋಗ್ಯ ಇಲಾಖೆಯ ರಾಜ್ಯ ಖಾತೆ ಸಚಿವ ಭಾರತಿ ಪ್ರವೀಣ್ ಪವಾರ್ ಗೆ ಹೆಚ್ಚುವರಿಯಾಗಿ ಬುಡಕಟ್ಟು ಸಚಿವಾಲಯದ ರಾಜ್ಯ ಖಾತೆ ಸಚಿವೆಯಾಗಿ ನೇಮಕ ಮಾಡಲಾಗಿದೆ.