Saturday, 28th September 2024

ಭಯೋತ್ಪಾದನೆಯನ್ನು ಪೋಷಿಸುವ ಪಾಕ್‌ ಜಮ್ಮು‌‌‍ & ಕಾಶ್ಮೀರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ: ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು

United Nations

ನ್ಯೂಯಾರ್ಕ್‌: ವಿಶ್ವಸಂಸ್ಥೆ (United Nations)ಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ನೀಡಿದ ಹೇಳಿಕೆಯ ವಿರುದ್ಧ ಭಾರತ ತೀವ್ರ ವಾಗ್ದಾಳಿ ನಡೆಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79ನೇ ಅಧಿವೇಶನದ ವೇಳೆ ಶೆಹಬಾಜ್ ಷರೀಫ್ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಎತ್ತಿದ್ದಕ್ಕೆ ಪ್ರತಿಕ್ರಿಯೆಯಾಗಿ ಭಾರತ ಶುಕ್ರವಾರ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಪ್ರತಿಕ್ರಿಯೆ ನೀಡಿದೆ.

ಶೆಹಬಾಜ್ ಷರೀಫ್ ಹೇಳಿದ್ದೇನು?

“ಭಾರತ ಸರ್ಕಾರ ನಿಯಂತ್ರಣ ರೇಖೆಯನ್ನು ದಾಟಿ ಆಜಾದ್ ಕಾಶ್ಮೀರವನ್ನು ಸ್ವಾಧೀನಪಡಿಸಿಕೊಳ್ಳುವ ಬೆದರಿಕೆಯನ್ನು ಹಾಕುತ್ತಿದೆ. ಭಾರತದ ಯಾವುದೇ ಆಕ್ರಮಣದ ವಿರುದ್ಧ ಪಾಕಿಸ್ತಾನವು ಸೂಕ್ತವಾಗಿ ಪ್ರತಿಕ್ರಿಯಿಸಲಿದೆ. ಕಾಶ್ಮೀರದಲ್ಲಿ ಭಾರತವು 2019ರಲ್ಲಿ ತೆಗೆದುಕೊಂಡ ಆರ್ಟಿಕಲ್‌ 370 ರದ್ದುಪಡಿಸುವ ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮಗಳನ್ನು ಹಿಂತೆಗೆದುಕೊಳ್ಳಬೇಕು. ಯುನ್‌ ಭದ್ರತಾ ಕೌನ್ಸಿಲ್ ನಿರ್ಣಯಗಳು ಮತ್ತು ಕಾಶ್ಮೀರಿ ಜನರ ಆಶಯಗಳಿಗೆ ಅನುಗುಣವಾಗಿ ಜಮ್ಮು ಮತ್ತು ಕಾಶ್ಮೀರ ವಿವಾದದ ಶಾಂತಿಯುತ ಪರಿಹಾರಕ್ಕಾಗಿ ಸಂವಾದ ನಡೆಸಬೇಕುʼʼ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದರು.

ಭಾರತದ ದಿಟ್ಟ ಉತ್ತರ

ವಿಶ್ವಸಂಸ್ಥೆಯ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಭಾರತೀಯ ರಾಜತಾಂತ್ರಿಕ ಅಧಿಕಾರಿ ಭಾವಿಕಾ ಮಂಗಳಾನಂದನ್ ಅವರು, ಭಯೋತ್ಪಾದನೆ, ಮಾದಕವಸ್ತು ಸಾಗಾಟ, ವ್ಯಾಪಾರ ಮತ್ತು ಬಹುರಾಷ್ಟ್ರೀಯ ಅಪರಾಧಗಳಿಗೆ ಜಾಗತಿಕ ಕುಖ್ಯಾತಿಯನ್ನು ಹೊಂದಿರುವ ದೇಶವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಮೇಲೆ ದಾಳಿ ಮಾಡುವ ಧೈರ್ಯವನ್ನು ಹೊಂದಿದೆ ಎಂದು ಹೇಳಿದರು.

“ಜಗತ್ತಿಗೆ ತಿಳಿದಿರುವಂತೆ ಪಾಕಿಸ್ತಾನವು ದೀರ್ಘ ಕಾಲದಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ತನ್ನ ನೆರೆಹೊರೆಯವರ ವಿರುದ್ಧ ಅಸ್ತ್ರವಾಗಿ ಬಳಸುತ್ತಿದೆ. ಇದು ನಮ್ಮ ಸಂಸತ್ತು, ನಮ್ಮ ಆರ್ಥಿಕ ರಾಜಧಾನಿ ಮುಂಬೈ, ಮಾರುಕಟ್ಟೆಗಳು ಮತ್ತು ಯಾತ್ರಾ ಸ್ಥಳಗಳ ಮೇಲೆ ದಾಳಿ ಮಾಡಿದೆ. ದಾಳಿಯ ಪಟ್ಟಿ ಉದ್ದವಾಗಿದೆ. ಅಂತಹ ದೇಶವು ಹಿಂಸಾಚಾರದ ಬಗ್ಗೆ ಮಾತನಾಡುವುದು ಬೂಟಾಟಿಕೆಯಾಗಿದೆʼʼ ಎಂದು ಭಾವಿಕಾ ಮಂಗಳಾನಂದನ್ ತಿಳಿಸಿದರು.

ʼʼವಾಸ್ತವವೆಂದರೆ ಪಾಕಿಸ್ತಾನವು ನಮ್ಮ ಭೂ ಪ್ರದೇಶದ ಮೇಲೆ ದಾಳಿ ನಡೆಸುತ್ತಿದೆ ಮತ್ತು ಭಾರತದ ಅವಿಭಾಜ್ಯ ಅಂಗವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳನ್ನು ಅಡ್ಡಿಪಡಿಸಲು ಭಯೋತ್ಪಾದನೆಯನ್ನು ನಿರಂತರವಾಗಿ ಬಳಸುತ್ತಿದೆ” ಎಂದು ಕಿಡಿ ಕಾರಿದರು. ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಭಾರತ, ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದೆ.

“1971ರಲ್ಲಿ ನರಮೇಧ ನಡೆಸಿದ ಮತ್ತು ತನ್ನ ಅಲ್ಪಸಂಖ್ಯಾತರನ್ನು ನಿರಂತರವಾಗಿ ಹಿಂಸಿಸಿದ ರಾಷ್ಟ್ರವು ಅಸಹಿಷ್ಣುತೆ ಮತ್ತು ಭಯಗಳ ಬಗ್ಗೆ ಮಾತನಾಡಲು ಧೈರ್ಯ ತೋರುತ್ತಿರುವುದು ಹಾಸ್ಯಾಸ್ಪದವಾಗಿದೆ. ಪಾಕಿಸ್ತಾನ ನಿಜವಾಗಿಯೂ ಏನೆಂಬುದು ಜಗತ್ತಿಗೆ ಗೊತ್ತಿದೆ. ನಾವು ಒಸಾಮಾ ಬಿನ್ ಲಾಡೆನ್‌ಗೆ ದೀರ್ಘಕಾಲ ಆತಿಥ್ಯ ನೀಡಿದ ರಾಷ್ಟ್ರದ ಬಗ್ಗೆ ಮಾತನಾಡುತ್ತಿದ್ದೇವೆ. ಪ್ರಪಂಚದಾದ್ಯಂತದ ಅನೇಕ ಭಯೋತ್ಪಾದಕರ ಹೆಜ್ಜೆ ಗುರುತನ್ನು ಹೊಂದಿದರುವ ಆ ದೇಶ ಹೊಂದಿದೆ” ಎಂದು ಅವರು ಹೇಳಿದರು.

ಕಾಶ್ಮೀರದ ಬಗ್ಗೆ ಷರೀಫ್ ಹೇಳಿರುವುದು ಸ್ವೀಕಾರಾರ್ಹವಲ್ಲ ಎಂದ ಭಾವಿಕಾ ಮಂಗಳಾನಂದನ್ ಅವರು, ಪಾಕಿಸ್ತಾನವು ಹೆಚ್ಚಿನ ಸುಳ್ಳುಗಳೊಂದಿಗೆ ಸತ್ಯವನ್ನು ಎದುರಿಸಲು ಪ್ರಯತ್ನಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ಪಾಕಿಸ್ತಾನದ ಹೇಳಿಕೆಗೆ ಇತರ ದೇಶಗಳು ಬೆಂಬಲ ಸೂಚಿಸದಿದ್ದರೂ ಅದು ವಿಶ್ವಸಂಸ್ಥೆಯ ವೇದಿಕೆಗಳಲ್ಲಿ ಕಾಶ್ಮೀರ ವಿಷಯವನ್ನು ನಿರಂತರವಾಗಿ ಎತ್ತುತ್ತಿದೆ. ಅದಾಗ್ಯೂ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಯಾವಾಗಲೂ ದೇಶದ ಅವಿಭಾಜ್ಯ ಅಂಗ ಎಂದು ಭಾರತ ಸಮರ್ಥಿಸಿಕೊಂಡಿದೆ.

ಈ ಸುದ್ದಿಯನ್ನೂ ಓದಿ: United Nations : ವಿಶ್ವ ಸಂಸ್ಥೆಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕೆ ಫ್ರಾನ್ಸ್ ಬಳಿಕ ಇದೀಗ ಬ್ರಿಟನ್ ಬೆಂಬಲ