Wednesday, 20th November 2024

UP Horror: ಸಮಾಜವಾದಿ ಪಕ್ಷಕ್ಕೆ ವೋಟ್‌ ಹಾಕಲ್ಲ ಅಂದಿದ್ದಕ್ಕೆ ಕೊಂದೇ ಬಿಟ್ರಾ ದುರುಳರು? ಅರೆ ಬೆತ್ತಲೆ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ

Uttara Pradesh Horror

ಲಖನೌ : ದಲಿತ ಯುವತಿಯೊಬ್ಬಳನ್ನು ಕೊಲೆ ಮಾಡಿ, ಆಕೆಯ ದೇಹವನ್ನು ಬೆತ್ತಲೆಗೊಳಿಸಿ ಗೋಣಿ ಚೀಲದಲ್ಲಿ ತುಂಬಿ ಕಂಜಾರಾ ನದಿಯ ಸೇತುವೆಯ ಬಳಿ ಎಸೆದು ಹೋದ ಅಮಾನವೀಯ ಘಟನೆ ಉತ್ತರ ಪ್ರದೇಶದ ಕರ್ನಾಲ್‌ನಲ್ಲಿ ನಡೆದಿದೆ(UP Horror). ಮೃತ ಯುವತಿಯನ್ನು ಶಿಶುಪಾಲ್ ಎಂಬುವರ ಪುತ್ರಿ ದುರ್ಗಾ (23) ಎಂದು ಗುರುತಿಸಲಾಗಿದೆ. ಕೊಲೆಯಾದ ಯುವತಿ ಕುಟುಂಬವು ಪ್ರಶಾಂತ್ ಯಾದವ್ ಎಂಬ ವ್ಯಕ್ತಿ ಈ ಕೊಲೆಯನ್ನು ಮಾಡಿದ್ದು ಇದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಆರೋಪಿಸಿದ್ದಾರೆ.

ವರದಿಗಳ ಪ್ರಕಾರ ದುರ್ಗಾ ಮಂಗಳವಾರದಿಂದ ನಾಪತ್ತೆಯಾಗಿದ್ದಳು. ಮಂಗಳವಾರ ಮನೆಗೆ ಬಾರದೇ ಇದ್ದಾಗ ಆಕೆಯ ಮನೆಯವರು ಹುಡುಕಾಟ ಆರಂಭಿಸಿದ್ದರು. ಆಕೆ ಕೊನೆಯದಾಗಿ ಕೆಲವು ಸ್ಥಳೀಯ ನಿವಾಸಿಗಳೊಂದಿಗೆ ಕಾಣಿಸಿಕೊಂಡಿದ್ದಳು ಎನ್ನಲಾಗಿದೆ. ನಂತರ ಬುಧವಾರ ದಲಿತ ಯುವತಿಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಲೋಕಸಭೆಯ ಉಪಚುನಾವಣೆ ನಡೆಯುತ್ತಿದ್ದು, ಸಮಾಜವಾದಿ ಪಕ್ಷಕ್ಕೆ (SP) ಮತ ಹಾಕಿ ಎಂದು ಎಸ್‌ಪಿ ಬೆಂಬಲಿಗ ಪ್ರಶಾಂತ್‌ ಎಂಬುವವರು ದುರ್ಗಾ ಮನೆಯವರ ಬಳಿ ಹೇಳಿದ್ದರು. ಆದರೆ ಯುವತಿ ಹಾಗೂ ಆಕೆಯ ಕುಟುಂಬ ಬಿಜೆಪಿಗೆ (BJP) ಮತ ಹಾಕುವ ಇಂಗಿತವನ್ನು ವ್ಯಕ್ತಪಡಿಸಿತ್ತು. ಇದು ಪ್ರಶಾಂತ್ ಅವರನ್ನು ಕೆರಳಿಸಿದೆ, ಸಮಾಜವಾದಿ ಪಕ್ಷಕ್ಕೆ ಮತ ಹಾಕದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ದುರ್ಗಾಳಿಗೆ ಪ್ರಶಾಂತ್ ಬೆದರಿಕೆ ಹಾಕಿದ್ದರು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಮೃತ ಯುವತಿಯ ತಾಯಿ ಸಮಾಜವಾದಿ ಪಕ್ಷದ ಬೆಂಬಲಿಗ ಪ್ರಶಾಂತ್‌ ಹಾಗೂ ಆತನ ಸಹಚರರು ನಮ್ಮ ಪಕ್ಷಕ್ಕೆ ಮತ ಹಾಕದಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ಮೃತ ಯುವತಿ ತಾಯಿ ಆರೋಪಿಸಿದ್ದಾರೆ.

ಕರ್ಹಾಲ್ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಮತ ಹಾಕಲು ನಿರಾಕರಿಸಿದ ಕಾರಣಕ್ಕೆ ಎಸ್‌ಪಿ ಕಾರ್ಯಕರ್ತ ಪ್ರಶಾಂತ್ ಯಾದವ್ ಮತ್ತು ಆತನ ಸಹಚರರು ಯುವತಿಯನ್ನು ಕೊಲೆ ಮಾಡಿದ್ದಾರೆ ಎಂದು ಬಿಜೆಪಿಯ ಉತ್ತರ ಪ್ರದೇಶ ಘಟಕ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿ ಆರೋಪಿಸಿದೆ.

ಬಿಜೆಪಿ ನಾಯಕ ಅಮಿತ್ ಮಾಳವೀಯ ಘಟನೆಯ ಕುರಿತು ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಖಿಲೇಶ್ ಯಾದವ್ ಅವರ ರೆಡ್ ಕ್ಯಾಪ್ಡ್ ಗೂಂಡಾಗಳು ದಲಿತ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಅಖಿಲೇಶ್ ಯಾದವ್ ಅವರ ಪಕ್ಷದಲ್ಲಿರುವ ಗೂಂಡಾಗಳನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ಕಾನೂನು ಮತ್ತು ಆಡಳಿತವು ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಿಡಿ ಕಾರಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ ತೆರವಿರುವ ಕರ್ಹಾಲ್‌ ಕ್ಷೇತ್ರಲ್ಲಿ ಬುಧವಾರ ಉಪ ಚುನಾವಣೆ ನಡೆಯುತ್ತಿದೆ.

ಇದನ್ನೂ ಓದಿ : Fire Accident: ಝಾನ್ಸಿ ಆಸ್ಪತ್ರೆಯ ಬೆಂಕಿ ಅವಘಡಕ್ಕೆ ಪ್ರಧಾನಿ ಶೋಕ; ಯೋಗಿ ಸರ್ಕಾರದಿಂದ ಪರಿಹಾರ ಘೋಷಣೆ