ಲಖನೌ: ನ್ಯಾಯಾಧೀಶರೊಬ್ಬರ ಮೇಲೆ ಕುಖ್ಯಾತ ಗ್ಯಾಂಗ್‌ಸ್ಟರ್ ತಂಡವೊಂದು ದಾಳಿಗೆ ಯತ್ನಿಸಿರುವ ಶಾಕಿಂಗ್ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ದರೋಡೆಕೋರ ಸುಂದರ್ ಭಾಟಿ ನೇತೃತ್ವದ ಗ್ಯಾಂಗ್‌ನ ಗೂಂಡಾಗಳು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಫರೂಕಾಬಾದ್‌ನ ನ್ಯಾಯಾಧೀಶರು (UP Judge Attacked) ಆರೋಪಿಸಿದ್ದಾರೆ.
ಅಕ್ಟೋಬರ್ 29 ರಂದು, ನೋಯ್ಡಾಗೆ (Noida) ಪ್ರಯಾಣಿಸುತ್ತಿದ್ದಾಗ, ಫರೂಕಾಬಾದ್‌ನ ಅಬಕಾರಿ ಕಾಯ್ದೆಯಡಿಲ್ಲಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಡಾ.ಅನಿಲ್ ಕುಮಾರ್ ಸಿಂಗ್ ಅವರ ಮೇಲೆ ಕಿಡಿಗೇಡಿಗಳು ದಾಳಿಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಖೈರ್‌ನ ಗೋಮ್ತಿ ಚೌರಾಹಾ ಬಳಿ, ಬಿಳಿ ಬಣ್ಣದ ಬೊಲೆರೋ ಎಸ್‌ಯುವಿಯಲ್ಲಿ ಬಂದ ಐವರು ತಮ್ಮ ಕಾರನ್ನು ಹಿಂಬಾಲಿಸಿದ್ದಲ್ಲದೆ ತಮಗೆ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸಿಂಗ್ ಅವರು ಹೇಳಿದ ಪ್ರಕಾರ, ಆ ವ್ಯಕ್ತಿಗಳು ನನಗೆ ಹಲವು ಬಾರಿ ಕಾರನ್ನು ನಿಲ್ಲಿಸಲು ಹೇಳಿದರು. ಆದರೆ ನಾನು ಅವರ ಮಾತನ್ನು ಕೇಳದೆ ಕಾರು ಮುಂದೆ ಚಲಾಯಿಸಿದೆ. ಅವರು ನನ್ನ ಕಾರನ್ನು ಹಿಂಬಾಲಿಸಿಕೊಂಡು ಬಂದರು ಎಂದು ಹೇಳಿದ್ದಾರೆ. ಹಿಂಬಾಲಿಸಿದ ಕಾರಿನಲ್ಲಿ ಐದು ಜನ ಇದ್ದರು. ಅವರು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದರು. ಆದರೂ ನಾನು ಕಾರು ನಿಲ್ಲಿಸಲಿಲ್ಲ ನಂತರ ಗೂಂಡಾಗಳು ತಮ್ಮ ಬಳಿ ಇರುವ ಮಾರಕಾಸ್ತ್ರಗಳನ್ನು ಝಳಪಿಸಿದರು. ನಾನು ಕಾರನ್ನು ಯು ಟರ್ನ್ ತೆಗೆದುಕೊಂಡು ಸೋಫಾ ಪೊಲೀಸ್ ಔಟ್‌ಪೋಸ್ಟ್ ಎದುರು ತೆಗೆದುಕೊಂಡು ಹೋಗುವವರೆಗೂ ಅವರು ನನಗೆ ಕಿರುಕುಳ ನೀಡಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಹಿಂದಿನ ನ್ಯಾಯಾಂಗ ತೀರ್ಪುಗಳು ದಾಳಿಗೆ ಕಾರಣವಾಯಿತಾ?
ಈ ಘಟನೆಯ ಹಿಂದೆ ಕುಖ್ಯಾತ ದರೋಡೆಕೋರ ಸುಂದರ್ ಭಾಟಿ ಗ್ಯಾಂಗ್‌ನ ಸದಸ್ಯರಿದ್ದಾರೆ ಎಂದು ಊಹೆ ಮಾಡಲಾಗಿದೆ. ಗೌತಮ್ ಬುದ್ಧ ನಗರದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ಎಡಿಜೆ) ಆಗಿದ್ದ ಅವಧಿಯಲ್ಲಿ, ಏಪ್ರಿಲ್ 5, 2021 ರಂದು ಸಿಂಗ್ ಅವರು ಈ ಗ್ಯಾಂಗ್‌ನ ಹಲವು ಸದಸ್ಯರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. ಅದೇ ದ್ವೇಷದ ಇಟ್ಟುಕೊಂಡು ಈಗ ತಮ್ಮ ಮೇಲೆ ದಾಳಿ ನಡೆಸಲು ಪ್ರಯತ್ನಪಟ್ಟಿರಬಹುದು ಎಂದು ಅವರು ಊಹಿಸಿದ್ದಾರೆ. ಶಿಕ್ಷೆಗೊಳಗಾದ ರಿಷಿಪಾಲ್ ಸಿಂಗ್, ರಾಜ್, ಯೋಗೇಶ್, ವಿಕಾಸ್ ಪಂಡಿತ್, ಕಲು ಭಾಟಿ, ದಿನೇಶ್ ಭಾಟಿ, ಅನೂಪ್ ಭಾಟಿ, ಯತೇಂದ್ರ ಚೌಧರಿ, ಸೋನು, ಬಾಬಿ ಮತ್ತು ಸುರೇಂದ್ರ ಪಂಡಿತ್ ಸೇರಿದಂತೆ ಹಲವರು ಸುಂದರ್ ಭಾಟಿ ಗ್ಯಾಂಗ್ ಜೊತೆ ಸೇರಿದ್ದಾರೆ. ಅದರ ಪ್ರತೀಕಾರವಾಗಿ ದಾಳಿ ಮಾಡಲು ಯತ್ನಿಸಿರಬಹುದು ಎಂದು ಡಾ.ಅನಿಲ್ ಕುಮಾರ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಘಟನೆಯ ನಂತರ, ಸೋಫಾ ಔಟ್‌ಪೋಸ್ಟ್ ಇನ್‌ಚಾರ್ಜ್ ಸಂದೀಪ್ ಕುಮಾರ್, ಎಸ್‌ಎಸ್‌ಪಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ಖೇರ್ ಇನ್‌ಸ್ಪೆಕ್ಟರ್ ಡಿಕೆ ಸಿಸೋಡಿಯಾ ಅವರನ್ನು ಸಂಪರ್ಕಿಸಿದ ಸಿಂಗ್ ಘಟನೆಯ ವಿವರಗಳನ್ನು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ ಅವರ ವಾಹನಕ್ಕೆ ಯಾವುದೇ ಹಾನಿಯಾಗಿಲ್ಲ.
ಇದನ್ನೂ ಓದಿ: Police Suspended: ಅಪರಾಧಗಳಿಗೆ ಕುಮ್ಮಕ್ಕು; ಪಾವಗಡದ ಮೂವರು ಪೊಲೀಸ್ ಪೇದೆಗಳು ಸಸ್ಪೆಂಡ್
ಘಟನೆಯ ಬಗ್ಗೆ ದೂರನ್ನು ಸ್ವೀಕರಿಸಿದ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಘಟನೆಯ ಸುತ್ತಲಿನ ನಿಖರವಾದ ವಿವರಗಳನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.