Tuesday, 5th November 2024

UP madarasa law: ಯುಪಿ ಮದರಸಾ ಶಿಕ್ಷಣ ಕಾಯ್ದೆ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ; ಹೈಕೋರ್ಟ್‌ ಆದೇಶ ರದ್ದು

Supreme Court

ನವದೆಹಲಿ: ಮದರಸಾ ಶಿಕ್ಷಣ ಕಾಯ್ದೆ(UP madarasa law)ಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌(Supreme Court) ಎತ್ತಿ ಹಿಡಿದಿದ್ದು, ಉತ್ತರ ಪ್ರದೇಶದ 16,000 ಮದರಸಾಗಳಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಅಸಂವಿಧಾನಿಕ ಮತ್ತು ಜಾತ್ಯತೀತತೆಯ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

ಉತ್ತರ ಪ್ರದೇಶದ ಮದರಸಾ ಕಾನೂನನ್ನು ಅಸಂವಿಧಾನಿಕ ಎಂದು ಘೋಷಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್‌, ಜಾತ್ಯತೀತ ತತ್ವವನ್ನು ಉಲ್ಲಂಘಿಸಿದರೆ ಶಾಸನವನ್ನು ರದ್ದುಗೊಳಿಸಬೇಕು ಎಂದು ಉಚ್ಚ ನ್ಯಾಯಾಲಯವು ತಪ್ಪಾಗಿ ಹೇಳಿದೆ. ರಾಜ್ಯವು ಮದರಸಾಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ನಿಯಂತ್ರಿಸಬಹುದು. ಶಿಕ್ಷಣದ ಗುಣಮಟ್ಟಕ್ಕೆ ಸಂಬಂಧಿಸಿದ ನಿಯಮಗಳು ಮದರಸಾಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.

ಶಿಕ್ಷಣದ ಗುಣಮಟ್ಟವನ್ನು ನಿಗದಿಪಡಿಸುವುದು ಸರ್ಕಾರದ ಹಕ್ಕು. ಒಂದು ವೇಳೆ ಗುಣಮಟ್ಟದ ಶಿಕ್ಷಣ ಪೂರೈಕೆ ಆಗುತ್ತಿಲ್ಲ ಎಂದೆನಿಸಿದರೆ ಸರ್ಕಾರ ಮದರಸಾಗಳ ಆಡಳಿತದಕ್ಕಿ ಹಸ್ತಕ್ಷೇಪ ಮಾಡಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ. ಈ ನಿರ್ಧಾರವು ಉತ್ತರ ಪ್ರದೇಶದ ಮದರಸಾಗಳಿಗೆ ಹೊಸ ದಿಕ್ಕನ್ನು ನೀಡಿದ್ದು, ಈ ಮೂಲಕ ತಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ಸುಧಾರಿಸಲು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಏನಿದು ಮದರಸಾ ಕಾಯಿದೆ?

ಮದರಸಾ ಕಾಯಿದೆಯು ಮದರಸಾ ಶಿಕ್ಷಣಕ್ಕೆ ಕಾನೂನು ಚೌಕಟ್ಟನ್ನು ಒದಗಿಸುತ್ತದೆ, ಅಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (NCERT) ಪಠ್ಯಕ್ರಮದ ಹೊರತಾಗಿ, ಧಾರ್ಮಿಕ ಶಿಕ್ಷಣವನ್ನು ಸಹ ನೀಡಲಾಗುತ್ತದೆ. ಈ ಕಾಯ್ದೆ ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿಯನ್ನು ರಚಿಸುತ್ತದೆ ಮತ್ತು ಇದು ಪ್ರಧಾನವಾಗಿ ಮುಸ್ಲಿಂ ಸಮುದಾಯದ ಸದಸ್ಯರನ್ನು ಒಳಗೊಂಡಿದೆ. ಮಂಡಳಿಯ ಕಾರ್ಯಗಳನ್ನು ಕಾಯಿದೆಯ ಸೆಕ್ಷನ್ 9 ರ ಅಡಿಯಲ್ಲಿ ವಿವರಿಸಲಾಗಿದೆ ಮತ್ತು ಕೋರ್ಸ್ ಸಾಮಗ್ರಿಗಳನ್ನು ಸಿದ್ಧಪಡಿಸುವುದು ಮತ್ತು ಶಿಫಾರಸು ಮಾಡುವುದು ಮತ್ತು ‘ಮೌಲ್ವಿ’ (10 ನೇ ತರಗತಿಗೆ ಸಮನಾಗಿರುತ್ತದೆ) ‘ಫಾಜಿಲ್’ (ಸ್ನಾತಕೋತ್ತರಕ್ಕೆ ಸಮಾನ) ಎಲ್ಲಾ ಕೋರ್ಸ್‌ಗಳಿಗೆ ಪರೀಕ್ಷೆಗಳನ್ನು ನಡೆಸುವುದನ್ನು ಒಳಗೊಂಡಿರುತ್ತದೆ. ಒಟ್ಟಿನಲ್ಲಿ ಮದರಸಾಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದೇ ಈ ಕಾಯ್ದೆಯ ಪ್ರಮುಖ ಉದ್ದೇಶ.

ಅಲಹಾಬಾದ್ ಹೈಕೋರ್ಟ್ ತೀರ್ಪು ಏನು?

ಮಾರ್ಚ್ 22 ರಂದು, ಅಲಹಾಬಾದ್ ಹೈಕೋರ್ಟ್ ಈ ಕಾಯಿದೆಯನ್ನು “ಅಸಂವಿಧಾನಿಕ” ಮತ್ತು ಜಾತ್ಯತೀತತೆಯ ತತ್ವದ ಉಲ್ಲಂಘನೆ ಎಂದು ಘೋಷಿಸಿತು ಮತ್ತು ಔಪಚಾರಿಕ ಶಾಲಾ ವ್ಯವಸ್ಥೆಯಲ್ಲಿ ಮದರಸಾ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವಂತೆ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿತು. ಏಪ್ರಿಲ್ 5 ರಂದು, ಸಿಜೆಐ ನೇತೃತ್ವದ ಪೀಠವು ಉತ್ತರ ಪ್ರದೇಶ ಬೋರ್ಡ್ ಆಫ್ ಮದರ್ಸಾ ಎಜುಕೇಶನ್ ಆಕ್ಟ್, 2004 ಅನ್ನು ರದ್ದುಗೊಳಿಸಿದ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡುವ ಮೂಲಕ ಸುಮಾರು 17 ಲಕ್ಷ ಮದರಸಾ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ರಿಲೀಫ್‌ ನೀಡಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಅಂಜುಮ್ ಕಡಾರಿ ಸಲ್ಲಿಸಿದ್ದ ಪ್ರಮುಖ ಅರ್ಜಿ ಸೇರಿದಂತೆ ಎಂಟು ಅರ್ಜಿಗಳ ತೀರ್ಪನ್ನು ಅಕ್ಟೋಬರ್ 22 ರಂದು ಪೀಠವು ಕಾಯ್ದಿರಿಸಿತ್ತು.

ಈ ಸುದ್ದಿಯನ್ನೂ ಓದಿ: Supreme Court: ಎಲ್ಲಾ ಖಾಸಗಿ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರ ಸರ್ಕಾರಿಗಳಿಗಿಲ್ಲ: ಸುಪ್ರೀಂ ಮಹತ್ವದ ತೀರ್ಪು