Sunday, 15th December 2024

UP Shootout: ಮಕ್ಕಳನ್ನೂ ಬಿಡಲಿಲ್ಲ.. ಶಿಕ್ಷಕನ ಮನೆಗೆ ನುಗ್ಗಿ ಇಡೀ ಕುಟುಂಬವನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

shootout

ಲಕ್ನೋ: ಉತ್ತರಪ್ರದೇಶದ ಅಮೇಥಿಯಲ್ಲಿ ಗುರುವಾರ ಸಂಜೆ ಶೂಟೌಟ್‌(UP Shootout) ನಡೆದಿದ್ದು, ಪ್ರಾಥಮಿಕ ಶಾಲಾ ಶಿಕ್ಷಕ, ಅವರ ಪತ್ನಿ ಮತ್ತು ಅವರ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಕೆಲವು ಅಪರಿಚಿತ ದುಷ್ಕರ್ಮಿಗಳು ಅವರ ಮನೆಗೆ ನುಗ್ಗಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಸಂಜೆ ಅಮೇಥಿ ಜಿಲ್ಲೆಯ ಜನನಿಬಿಡ ವಸತಿ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ವಿವರ:

ಭವಾನಿ ನಗರದಲ್ಲಿರುವ ಸಿಂಗ್‌ಪುರ ಬ್ಲಾಕ್‌ನ ಪನ್ಹೋನಾ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸುನಿಲ್‌ ಕುಮಾರ್‌ ಅವರ ಮನೆಗೆ ತಡರಾತ್ರಿ ನುಗ್ಗಿದ ದುಷ್ಕರ್ಮಿಗಳ ಗುಂಪು ಏಕಾಏಕಿ ಅವರ ಮೇಲೆ ಪೈರಿಂಗ್‌ ನಡೆಸಿದೆ. ಕುಮಾರ್(35), ಅವರ ಪತ್ನಿ(33), ಆರು ಮತ್ತು ಒಂದು ವರ್ಷದ ಇಬ್ಬರು ಹೆಣ್ಣುಮಕ್ಕಳು ಶೂಟೌಟ್‌ನಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮಕ್ಕಳಿಬ್ಬರ ಶವ ಬೆಡ್‌ ರೂಂನಲ್ಲಿ ಪತ್ತೆಯಾಗಿದ್ದು, ದಂಪತಿ ಶವ ನೀರಿನ ಟ್ಯಾಪ್‌ ಬಳಿ ಪತ್ತೆಯಾಗಿವೆ.ದುರ್ಷ್ಕರ್ಮಿಗಳನ್ನು ಕಂಡೊಡನೆ ದಂಪತಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಓಡಿರುವಂತೆ ಕಂಡುಬಂದಿದೆ. ಸುನೀಲ್ ಕುಮಾರ್ ಅವರನ್ನು ಇತ್ತೀಚೆಗೆ ರಾಯ್ ಬರೇಲಿಯಿಂದ ಅಮೇಥಿಯ ಸಿಂಗ್‌ಪುರ ಬ್ಲಾಕ್‌ಗೆ ವರ್ಗಾವಣೆಗೊಂಡಿದ್ದರು ಎನ್ನಲಾಗಿದೆ.

ಇನ್ನು ದುಷ್ಕರ್ಮಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಲಕ್ನೋ ವಲಯದ ಎಡಿಜಿ ಎಸ್‌ಬಿ ಶಿರಾಡ್ಕರ್ ಮತ್ತು ಅಯೋಧ್ಯೆ ರೇಂಜ್ ಐಜಿ ಪ್ರವೀಣ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿದ್ದು, ವೈಯಕ್ತಿಕ ದ್ವೇಷವೇ ಅಪರಾಧಕ್ಕೆ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಸಿಎಂ ಯೋಗಿ ರಿಯಾಕ್ಟ್‌

ಇನ್ನು ಘಟನೆ ಬಗ್ಗೆ ಸಿಎಂ ಯೋಗಿ ಆದಿತ್ಯಾನಾಥ್‌ ಪ್ರತಿಕ್ರಿಯಿಸಿದ್ದು, ಘೋರ ಹತ್ಯೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಖಡಕ್‌ ಆದೇಶ ಹೊರಡಿಸಿದ್ದಾರೆ. ಶಿಕ್ಷಕ ಹಾಗೂ ಅವರ ಕುಟುಂಬ ಸದಸ್ಯರ ನಿಧನಕ್ಕೆ ಸಂತಾಪ ಸೂಚಿಸಿದರು.

ಈ ಸುದ್ದಿಯನ್ನೂ ಓದಿ: Delhi Shootout: ಶಾಕಿಂಗ್‌! ರೋಗಿಯ ಸೋಗಿನಲ್ಲಿ ಬಂದು ವೈದ್ಯನ ಮೇಲೆ ಫೈರಿಂಗ್‌