Sunday, 8th September 2024

ಉತ್ಪಲ್ ಪರಿಕ್ಕರ್’ಗೆ ಎರಡು ಕ್ಷೇತ್ರಗಳ ಆಯ್ಕೆ ನೀಡಲಾಗಿದೆ: ಪ್ರಮೋದ್ ಸಾವಂತ್

ಪಣಜಿ: ದಿ.ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್‌ಗೆ ಪಣಜಿ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದೆ. ಉತ್ಪಲ್ ಪರಿಕ್ಕರ್‌ಗೆ ಟಿಕೆಟ್ ಕೈ ತಪ್ಪಿದ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪ್ರತಿಕ್ರಿಯೆ ನೀಡಿದ್ದಾರೆ.

“ಕೇಂದ್ರ ಬಿಜೆಪಿ ನಾಯಕರು ಉತ್ಪಲ್ ಪರಿಕ್ಕರ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಅವರಿಗೆ ಎರಡು ಕ್ಷೇತ್ರಗಳ ಆಯ್ಕೆ ನೀಡಲಾಗಿದೆ” ಎಂದರು. ಫೆಬ್ರವರಿ 14ರಂದು ವಿಧಾನಸಭೆ ಚುನಾವಣೆ ನಡೆಯಲಿದೆ.

“ಕೇಂದ್ರ ನಾಯಕರು ಉತ್ಪಲ್ ಪರಿಕ್ಕರ್ ಜೊತೆ ಸಂಪರ್ಕದಲ್ಲಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸಲು ಎರಡು ಕ್ಷೇತ್ರಗಳ ಆಯ್ಕೆ ನೀಡಲಾಗಿದೆ. ನನಗೆ ಭರವಸೆ ಇದೆ, ಈ ವಿಚಾರ ಬಗೆಹರಿಯಲಿದೆ. ಪಕ್ಷದ ಆಯ್ಕೆಯನ್ನು ಅವರು ಒಪ್ಪಿಕೊಳ್ಳಲಿದ್ದಾರೆ” ಎಂದು ಪ್ರಮೋದ್ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ 34 ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿರುವ ಬಿಜೆಪಿ ಪಣಜಿ ಕ್ಷೇತ್ರದಲ್ಲಿ ಹಾಲಿ ಶಾಸಕ ಅಟನಸಿಯೋ ಮೊನ್ನೆರ್ರೇಟ್‌ಗೆ ಟಿಕೆಟ್ ನೀಡಿದೆ. ಉತ್ಪಲ್ ಪರಿಕ್ಕರ್ ಪಣಜಿ ಕ್ಷೇತ್ರದಿಂದಲೇ ಟಿಕೆಟ್ ಬಯಸಿದ್ದರು. ಚುನಾವಣಾ ಪ್ರಚಾರವನ್ನು ಸಹ ಆರಂಭಿಸಿದ್ದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉತ್ಪಲ್ ಪರಿಕ್ಕರ್ ಎಎಪಿ ಟಿಕೆಟ್‌ನಿಂದ ಸ್ಪರ್ಧಿಸುವಂತೆ ಆಹ್ವಾನಿಸಿದ್ದರು.

‘ಗೋವಾ ವಿಧಾನಸಭೆ ಚುನಾವಣೆಗೆ ಬಿಜೆಪಿ 50 ವರ್ಷಕ್ಕಿಂತ ಕಡಿಮೆ ವಯೋಮಾನದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಯುವಕರು ಜನರೊಂದಿಗೆ ಶಾಸಕರು ಸುಲಭವಾಗಿ ಬೆರಯುತ್ತಾರೆ, ಅವರ ಬೇಡಿಕೆಗಳನ್ನು ಈಡೇರಿಸುತ್ತಾರೆ” ಎಂದು ಸಾವಂತ್ ಹೇಳಿದರು.

ಚುನಾವಣೆಯಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಾಂಕೆಲಿಮ್ ಕ್ಷೇತ್ರದಿಂದ ಮತ್ತು ಉಪ ಮುಖ್ಯಮಂತ್ರಿ ಮನೋಹರ್ ಅಜ್‌ಗಾವೋಂಕರ್‌ ಮರ್ಗಾನ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಮತದಾನ ನಡೆಯಲಿದೆ. ಶುಕ್ರವಾರ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದ್ದು, ಜನವರಿ 28ರ ತನಕ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ಫೆಬ್ರವರಿ 14ರಂದು ಚುನಾವಣೆ ನಡೆಯಲಿದ್ದು, ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಲಿದೆ.

error: Content is protected !!