Thursday, 24th October 2024

Terror attack : ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ : ಯುಪಿ ಮೂಲದ ಕಾರ್ಮಿಕನ ಮೇಲೆ ಗುಂಡಿನ ದಾಳಿ

Terror attack

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ( Pulwama) ಜಿಲ್ಲೆಯ ತ್ರಾಲ್‌ ಪ್ರದೇಶದಲ್ಲಿ ಭಯೋತ್ಪಾದಕರು ಗುಂಡಿನ (Terror attack) ದಾಳಿ ನಡೆಸಿದ್ದು, ಉತ್ತರ ಪ್ರದೇಶ ಮೂಲದ ಕಾರ್ಮಿಕನೊಬ್ಬ ಗಾಯಗೊಂಡಿದ್ದಾನೆ. ಗಾಯಗೊಂಡವನ್ನು ಬಿಜ್ನೋರ್ ನಿವಾಸಿ ಶುಭಂ ಕುಮಾರ್ ಎಂದು ಗುರುತಿಸಲಾಗಿದೆ. ಬಟಗುಂಡ್ ಗ್ರಾಮದಲ್ಲಿ ಭಯೋತ್ಪಾದಕರು ಆತನ ಮೇಲೆ ಗುಂಡು ಹಾರಿಸಿದ್ದು, ತೋಳಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಭಂ ಕುಮಾರನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತ ಚೇತರಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಕಾಶ್ಮೀರದಲ್ಲಿ ಸ್ಥಳೀಯರಲ್ಲದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ನಡೆಸಿದ ಮೂರನೇ ದಾಳಿ ಇದಾಗಿದೆ.

ಗಂದರ್‌ಬಾಲ್ ಜಿಲ್ಲೆಯ(Ganderbal district) ಸುರಂಗ ನಿರ್ಮಾಣ ಸ್ಥಳದಲ್ಲಿ ಭಾನುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಆರು ಹೊರ ರಾಜ್ಯದ ಕಾರ್ಮಿಕರು ಮತ್ತು ಸ್ಥಳೀಯ ವೈದ್ಯರ ಮೃತಪಟ್ಟಿದ್ದಾರೆ. ಅಮೆರಿಕ ನಿರ್ಮಿತ M4 ಕಾರ್ಬನ್‌ ಮತ್ತು AK 47 ಶಸ್ತ್ರ ಹಿಡಿದು ಕಾರ್ಮಿಕರ ವಸತಿ ಪ್ರದೇಶಕ್ಕೆ ನುಗ್ಗಿದ ಎರಡು ಭಯೋತ್ಪಾದಕರು ಕಾರ್ಮಿಕರ ಮೇಲೆ ಗುಂಡಿನ ದಾಳಿ ಮಾಡಿದ್ದರು.

ಈ ದಾಳಿಯಲ್ಲಿ ಆರು ಕಾರ್ಮಿಕರು ಮೃತಪಟ್ಟಿದ್ದರು. ಭಯೋತ್ಪಾದಕರು ನಡೆಸಿದ ದಾಳಿಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತರು ಶ್ರೀನಗರ-ಸೋನಾಮಾರ್ಗ್ ಹೆದ್ದಾರಿಯಲ್ಲಿನ ಜಡ್‌ ಮೊರ್ಚ್‌( Z- Morh) ಸುರಂಗ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಪಿಸಿಒ (APCO) ಇನ್ಫ್ರಾಟೆಕ್ ಕಂಪನಿಯ ಉದ್ಯೋಗಿಗಳಾಗಿದ್ದರು. ಕಾರ್ಮಿಕರ ವಸತಿ ಪ್ರದೇಶವು ಸುರಂಗದ ಮಾರ್ಗದ ಕೆಳಗೆ ಒಂದು ಬದಿಯಲ್ಲಿ ಬಂಜರು ಪರ್ವತಗಳು ಮತ್ತು ಇನ್ನೊಂದು ಬದಿಯಲ್ಲಿ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಿಂದ ಸುತ್ತುವರಿದಿತ್ತು. ಹೀಗಾಗಿ ಉಗ್ರರು ಭದ್ರತಾ ಪಡೆಯ ಕಣ್ಣು ತಪ್ಪಿಸಿ ಒಳನುಗ್ಗಲು ಅನುಕೂಲವಾಯಿತು ಎಂದು ಹೇಳಲಾಗುತ್ತಿದೆ.

ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಬಸ್ ಕಣಿವೆಗೆ ಉರುಳಿ ಒಂಬತ್ತು ಯಾತ್ರಿಕರು ಮೃತಪಟ್ಟಿದ್ದರು. ಆ ಘಟನೆಯ ಬಳಿಕ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಣಾಂತಿಕ ದಾಳಿ ಇದಾಗಿದೆ.

ಇದನ್ನೂ ಓದಿ: DMK NRI Wing: ಜಮ್ಮು& ಕಾಶ್ಮೀರದ ಭಾಗಗಳು ಪಾಕಿಸ್ತಾನಕ್ಕೆ ಸೇರಿದ್ದು ಎಂದು ಬಿಂಬಿಸುವ ನಕ್ಷೆ ಪೋಸ್ಟ್‌ ಮಾಡಿದ ಡಿಎಂಕೆ ಎನ್‌ಆರ್‌ಐ ಘಟಕ

ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ(Farooq Abdullah)ಸೋಮವಾರ ಜಮ್ಮು ಮತ್ತು ಕಾಶ್ಮೀರದ ಗಗಾಂಗೀರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡಿಸಿದ್ದರು. ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು. ಭಾರತದೊಂದಿಗೆ ಉತ್ತಮ ಬಾಂಧವ್ಯ ಬೇಕಾದರೆ ಪಾಕಿಸ್ತಾನ(Pakistana) ಈ ಚಟುವಟಿಕೆಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ಅವರು ಹೇಳಿದ್ದರು.

ಭಾರತದೊಂದಿಗೆ ಉತ್ತಮ ಬಾಂಧವ್ಯ ಬೇಕಾದರೆ ಪಾಕಿಸ್ತಾನ ಅನಾವಶ್ಯಕವಾಗಿ ಕಾಶ್ಮೀರದ ತಂಟೆಗೆ ಬರಬಾರದು. ಪಾಕಿಸ್ತಾನ ಇದನ್ನು ಕೊನೆಗಾಣಿಸಬೇಕು ಎಂದು ಪಾಕಿಸ್ತಾನದ ನಾಯಕತ್ವಕ್ಕೆ ನಾನು ಹೇಳಲು ಬಯಸುತ್ತೇನೆ. ಕಾಶ್ಮೀರ ಪಾಕಿಸ್ತಾನ ಏನೇ ಮಾಡಿದರೂ ಕೂಡ ಕಾಶ್ಮೀರ ಎಂದಿಗೂ ಪಾಕಿಸ್ತಾನವಾಗುವುದಿಲ್ಲ. ನಾವು ಘನತೆಯಿಂದ ಬದುಕೋಣ ಮತ್ತು ಯಶಸ್ವಿಯಾಗೋಣ” ಎಂದು ಅವರು ಹೇಳಿದ್ದರು.