Sunday, 24th November 2024

Uttara Pradesh: 9 ವರ್ಷದ ದ್ವೇಷ; ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದವನನ್ನೇ ಕೊಂದ!

Uttara Pradesh

ಲಖನೌ : ಸುಮಾರು ಒಂಬತ್ತು ವರ್ಷಗಳ ಹಿಂದೆ ಚಪ್ಪಲಿ ಹಾರ ಕೊರಳಿಗೆ ಹಾಕಿ ಅವಮಾನ ಮಾಡಿದ್ದಕ್ಕೆ ಪ್ರತೀಕಾರವಾಗಿ ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಘಟನೆ ಉತ್ತರಪ್ರದೇಶದ(Uttara Pradesh) ಮೊರಾಬಾದ್‌ನಲ್ಲಿ ನಡೆದಿದೆ. ಮೊರಾಬಾದ್‌ನ ಮನ್ವಿತ್‌ ಕೊಲೆ ಮಾಡಿದ ಆರೋಪಿ. ಹಳೆಯ ದ್ವೇಷದ ಆಧಾರದ ಮೇಲೆ ತಾನೇ ಕೊಲೆ ಮಾಡಿರುವುದಾಗಿ ಆತ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ .

ಆರೋಪಿ ಮನ್ವೀರ್‌ ಹೇಳಿಕೆ ಪ್ರಕಾರ, ಮೊರಾಬಾದ್‌ನ ಘನಶ್ಯಾಮ್‌ ಸೈನಿ ಎಂಬಾತ ಸುಮಾರು 9 ವರ್ಷಗಳ ಹಿಂದೆ ತನ್ನ ಸೊಸೆಗೆ ಕಿರುಕುಳ ನೀಡಿರುವುದಾಗಿ ಸುಳ್ಳು ಆರೋಪ ಹೊರಿಸಿ, ಕುತ್ತಿಗೆಯಲ್ಲಿ ಚಪ್ಪಲಿ ಮಾಲೆ ಧರಿಸುವಂತೆ ಮಾಡಿದ್ದ. ಅವಮಾನದ ಪ್ರತೀಕಾರಕ್ಕಾಗಿ ಆತನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

“ಘನಶ್ಯಾಮ್‌ ತನ್ನ ಮನೆಯಲ್ಲಿ ಸಮುದಾಯದ ಸದಸ್ಯರ ಜೊತೆ ಪಂಚಾಯ್ತಿ ಕರೆದಿದ್ದ. ಅಲ್ಲಿಗೆ ನನ್ನ ಕರೆಯಿಸಿ ನನ್ನ ಮೇಲೆ ಕಿರುಕುಳದ ಆರೋಪ ಹೊರಿಸಿದ್ದ. ಶೂ ಮತ್ತು ಚಪ್ಪಲಿಯಿಂದ ಹೊಡೆದು, ಚಪ್ಪಲಿ ಹಾರ ಹಾಕಿಸಿ ಎಲ್ಲರೆದುರು ಅವಮಾನಿಸಿದ್ದರು. ಈ ಘಟನೆ ನಂತರ ನನಗೆ ಅವಮಾನದಿಂದ ಊರಿನಲ್ಲಿ ವಾಸವಾಗಿರಲು ಸಾಧ್ಯವಾಗಿಲ್ಲ. ಪ್ರತಿಯೊಬ್ಬರು ನನಗೆ ತಮಾಷೆ ಮಾಡಿ ಅವಮಾನ ಮಾಡುತ್ತಿದ್ದರು,” ಎಂದು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ : Murder Attempt: ಪಾಸ್‌ ತೋರಿಸು ಎಂದಿದ್ದಕ್ಕೆ ಕಿರಿಕ್‌; ಬಿಎಂಟಿಸಿ ಬಸ್‌ ಕಂಡಕ್ಟರ್‌ ಹತ್ಯೆಗೆ ಯತ್ನಿಸಿದ ಪ್ರಯಾಣಿಕ!

ಆ ಅವಮಾನದಿಂದ ನೊಂದು ಪಕ್ವಾರಾ ಗ್ರಾಮ ಬಿಟ್ಟು ರಾಜಸ್ಥಾನಕ್ಕೆ ತೆರಳಿ, ಅಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡಲು ಆರಂಭಿಸಿದ್ದೆ. ಆದರೆ ನಾನು ಯಾವಾಗ ಊರಿಗೆ ಬರುತ್ತೇನೋ ಆ ಸಂದರ್ಭದಲ್ಲಿ ಗ್ರಾಮಸ್ಥರು ಚಪ್ಪಲಿ ಹಾರ ಹಾಕಿದ್ದ ವಿಚಾರ ಪ್ರಸ್ತಾಪಿಸಿ ಅವಮಾನ ಮಾಡುತ್ತಿದ್ದರು. ಘನಶ್ಯಾಮ್‌ ಕೂಡಾ ಗ್ರಾಮಸ್ಥರ ಎದುರು ಆ ಘಟನೆ ಪ್ರಸ್ತಾಪಿಸಿ ಅವಮಾನಿಸುತ್ತಿದ್ದ. ಈ ಆರೋಪದಿಂದ ನನಗೆ ಮದುವೆಯಾಗಲು ಅಡ್ಡಿಯಾಗುತ್ತಿತ್ತು” ಎಂದು ಮನ್ವೀರ್‌ ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾನೆ.

“ನನಗೆ ಘನಶ್ಯಾಮ್‌ ಮೇಲೆ ವಿಪರೀತ ದ್ವೇಷ ಇತ್ತು ಅದಕ್ಕಾಗಿ ನಾನು ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದ್ದೆ. ಅಕ್ಟೋಬರ್‌ 16ರಂದು ಸೈನಿ ಗದ್ದೆಯಲ್ಲಿ ಒಬ್ಬಂಟಿಯಾಗಿರುವುದು ಕಂಡು ಚೂರಿಯಿಂದ ಕುತ್ತಿಗೆಗೆ ಇರಿದೆ. ನಂತರ ಆತನ ಮುಖ, ಕೈ, ಭುಜದ ಮೇಲೆ ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ ಎಂದಿದ್ದಾನೆ.

ನಾನು ತಪ್ಪಿಸಿಕೊಂಡು ಹೋಗುವ ಬಗ್ಗೆ ಚಿಂತಿಸಿಲ್ಲ, ಯಾಕೆಂದರೆ ಅಷ್ಟು ಹಳೆಯ ಘಟನೆಯ ಪ್ರತೀಕಾರ ಎಂದು ಯಾರೂ ಆಲೋಚಿಸುವುದಿಲ್ಲ. ಸೈನಿಯನ್ನು ಕೊಲೆ ಮಾಡಿದ ನಂತರ ಸಮೀಪದ ಗ್ರಾಮದಲ್ಲಿದ್ದ ಗೆಳೆಯನ ಮನೆಯಲ್ಲಿ ವಾಸವಾಗಿದ್ದೆಎಂದು ಮನ್ವೀರ್‌ ತನಿಖೆಯಲ್ಲಿ ತಿಳಿಸಿದ್ದಾನೆ.