Wednesday, 11th December 2024

ಉತ್ತರಾಖಂಡ: ಟೊಮ್ಯಾಟೊ ಬೆಲೆ ಏರಿಕೆ, ನೇಪಾಳಕ್ಕೆ ದೌಡು

ಡೆಹ್ರಾಡೂನ್: ಟೊಮ್ಯಾಟೊ ಬೆಲೆ ದೇಶಾದ್ಯಂತ ಏರಿಕೆಯಾದ ಹಿನ್ನೆಲೆಯಲ್ಲಿ ಉತ್ತರಾ ಖಂಡದ ಜನ ನೇಪಾಳಕ್ಕೆ ಹೋಗಿ ಟೊಮ್ಯಾಟೊ ಖರೀದಿಸಲು ತೀರ್ಮಾನಿಸಿದ್ದಾರೆ.

ಉತ್ತರಾಖಂಡದ ಪಿತೋರಾಗಢ ಜಿಲ್ಲೆಯ ನಾಗರಿಕರು ನೇಪಾಳ ಗಡಿ ದಾಟಿ, ಅಲ್ಲಿಂದ ಕಡಿಮೆ ಬೆಲೆಗೆ ಟೊಮ್ಯಾಟೊ ಖರೀದಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ದರ್ಚುಲಾ ಹಾಗೂ ಬನ್‌ಬಾಸ ಗ್ರಾಮಗಳು ನೇಪಾಳ ಗಡಿಗೆ ಹತ್ತಿರ ಇವೆ. ಹಾಗಾಗಿ, ಈ ಗ್ರಾಮಗಳ ನಾಗರಿಕರು ಅಲ್ಲಿಗೆ ಹೋಗಿ ಕಡಿಮೆ ಬೆಲೆಗೆ ಟೊಮ್ಯಾಟೊ ಖರೀದಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ನೇಪಾಳ ಗಡಿ ಪ್ರವೇಶಿಸಲು ಹೆಚ್ಚಿನ ನಿಯಮಗಳು ಇಲ್ಲದ ಕಾರಣ ಇಂತಹ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಭಾರತಕ್ಕಿಂತ ನೇಪಾಳದಲ್ಲಿ ಟೊಮ್ಯಾಟೊ ಬೆಲೆ ಕಡಿಮೆ ಇದೆ. ನೇಪಾಳಿ ರೂಪಾಯಿ ಯಲ್ಲಿ ಟೊಮ್ಯಾಟೊ ಬೆಲೆ ಕೆ.ಜಿ.ಗೆ 100 ರೂ.ನಿಂದ 110 ರೂ. ಇದೆ. ಅಂದರೆ, ಭಾರತದ 60-65 ರೂ. ನೀಡಿದರೆ ನೇಪಾಳದಲ್ಲಿ 1 ಕೆ.ಜಿ ಟೊಮ್ಯಾಟೊ ಸಿಗುತ್ತದೆ.

ಜನ ಒಮ್ಮೆ ತೆರಳಿ ನಾಲ್ಕೈದು ಕೆ.ಜಿ ಟೊಮ್ಯಾಟೊ ಖರೀದಿಸಿದರೆ 250-300 ರೂ. ಉಳಿಸಲಿದ್ದಾರೆ. ಇದರಿಂದಾಗಿ ಬ್ಯಾಗ್‌ ಹಿಡಿದು ನೇಪಾಳದತ್ತ ಹೊರಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಭಾರತದ ಬಹುತೇಕ ಕಡೆ ಟೊಮ್ಯಾಟೊ ಬೆಲೆ ಕೆ.ಜಿ.ಗೆ 100 ರೂ. ದಾಟಿರುವ ಕಾರಣ ಜನ ಟೊಮ್ಯಾಟೊ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.