ಖುಂಟಿ: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕನ ಮನೆಗೆ ಸರ್ಕಾರಿ ಅಧಿಕಾರಿಗಳು ಭೇಟಿ ನೀಡಿದ್ದ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಅನುಚಿತವಾಗಿ ನಡೆದುಕೊಂಡರು ಎಂಬ ಆರೋಪದ ಮೇಲೆ ಖುಂಟಿ ಜಿಲ್ಲೆಯ ಇಬ್ಬರು ಸ್ಥಳೀಯ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
ಬ್ಲಾಕ್ ಡೆವಲಪ್ಮೆಂಟ್ ಅಧಿಕಾರಿ ಸ್ಮಿತಾ ನಾಗೇಸಿಯಾ ಮತ್ತು ಸರ್ಕಲ್ ಆಫೀಸರ್ ವಂದನಾ ಭಾರತಿ ಅವರ ದೂರಿನ ಆಧಾರದ ಮೇಲೆ ಕರ್ರಾ ಪೊಲೀಸ್ ಠಾಣೆಯಲ್ಲಿ ಪತ್ರಕರ್ತ ಸೋನು ಅನ್ಸಾರಿ ಮತ್ತು ಯೂಟ್ಯೂಬರ್ ಗುಂಜನ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
‘ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕ ವಿಜಯ್ ಹೋರೋ ಅವರ ಕುಟುಂಬವನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದು, ನಾವು ತೆರಳುವ ಮುನ್ನವೇ ಇಬ್ಬರು ವರದಿಗಾರರು ಅಲ್ಲಿ ಹಾಜರಿದ್ದರು. ಸತ್ಯಾಂಶ ಪರಿಶೀಲಿಸದೆ ವಿಡಿಯೊ ಚಿತ್ರೀಕರಿಸಲು ಪ್ರಾರಂಭಿಸಿದ್ದರು. ಸತ್ಯಾಂಶ ಪರಿಶೀಲಿಸುವಂತೆ ಕೇಳಿದಾಗ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಧಿಕಾರಿಗಳ ಆರೋಪಗಳನ್ನು ಅಲ್ಲಗಳೆದಿರುವ ವಿಜಯ್ ಮತ್ತು ಗುಂಜನ್, ‘ವಿಜಯ್ ಕುಟುಂಬದ ಪರಿಸ್ಥಿತಿಯನ್ನು ಹೊರಜಗತ್ತಿಗೆ ತಿಳಿಸಲು ವರದಿ ಮಾಡಿ ದ್ದೇವೆ. ಸುರಂಗ ಕುಸಿತವಾದ ಎರಡು ವಾರಗಳ ನಂತರ ಬಡ ಕುಟುಂಬಕ್ಕೆ ಅಧಿಕಾರಿಗಳು ಪಡಿತರ ಒದಗಿಸಿದ್ದರು’ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪತ್ರಕರ್ತರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿವಾರಿ ತಿಳಿಸಿದ್ದಾರೆ.
ಸಿಲ್ಕ್ಯಾರಾದಲ್ಲಿ ನಿರ್ಮಿಸುತ್ತಿರುವ ಸುರಂಗದ ಕೆಳಭಾಗಗಳು ಕುಸಿತದ ಘಟನೆ ನಡೆದ 17 ದಿನಗಳ ನಂತರ (ನ.28) ಕಾರ್ಮಿಕರನ್ನು ರಕ್ಷಿಸಲಾಗಿತ್ತು.