Sunday, 15th December 2024

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಮಾಜವಾದಿ ಪಾರ್ಟಿ, ಕಾಂಗ್ರೆಸ್‌ ತೀವ್ರ ಪೈಪೋಟಿ

ನವದೆಹಲಿ: ಉತ್ತರ ಪ್ರದೇಶದಲ್ಲಿ 80 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ತುರುಸಿನಲ್ಲಿ ನಡೆಯುತ್ತಿದ್ದು, ಮತ ಎಣಿಕೆಯ ಸಂದರ್ಭದಲ್ಲಿ ಸಮಾಜವಾದಿ ಪಾರ್ಟಿ (SP) ಹಾಗೂ ಕಾಂಗ್ರೆಸ್‌ (Congress) ಪಕ್ಷಗಳು ಬಿಜೆಪಿಗೆ ತೀವ್ರವಾದ ಹಣಾಹಣಿ ಒಡ್ಡಿವೆ.

ಬಿಜೆಪಿ 43 ಕಡೆ ಮುನ್ನಡೆ ಸಾಧಿಸಿದ್ದರೆ, ಎಸ್‌ಪಿ- ಕಾಂಗ್ರೆಸ್‌ ಸೇರಿದಂತೆ ಇಂಡಿಯಾ ಮೈತ್ರಿಕೂಟ 36 ಕಡೆಗಳನ್ನು ಮುನ್ನಡೆ ತೋರಿಸಿದೆ.

80 ಸೀಟುಗಳನ್ನು ಹೊಂದಿರುವ ಉತ್ತರ ಪ್ರದೇಶ ರಾಜ್ಯ ರಾಜಕೀಯವಾಗಿ ನಿರ್ಣಾಯಕವಾಗಿದೆ.

ಮತ ಎಣಿಕೆಯ ಆರಂಭಿಕ ಟ್ರೆಂಡ್‌ಗಳ ಪ್ರಕಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ದಿನೇಶ್ ಸಿಂಗ್ ಅವರ ಕುಟುಂಬದ ಭದ್ರಕೋಟೆ ರಾಯ್ ಬರೇಲಿಯಲ್ಲಿ 28,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಠಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾಗಿಂತ 15,000ಕ್ಕೂ ಹೆಚ್ಚು ಮತಗಳಿಂದ ಹಿಂದುಳಿದಿದ್ದಾರೆ.

ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ 80 ಸ್ಥಾನಗಳ ಪೈಕಿ 62-65 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿದ್ದವು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭಾರಿ ಬಹುಮತ ಗಳಿಸುವ ನಿರೀಕ್ಷೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.

ವಾರಣಾಸಿಯಿಂದ ಸತತ ಮೂರನೇ ಬಾರಿಗೆ ನಿಂತಿರುವ ಪ್ರಧಾನಿ ಮೋದಿ ಅವರಿಗೆ ಆರಂಭಿಕ ಮತ ಎಣಿಕೆಯ ವೇಳೆ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅಜಯ್‌ ರಾವ್‌ ಅವರ ಎದುರು ಹಿನ್ನಡೆ ಕಂಡುಬಂತು. ನಂತರ ಅವರು ಮುನ್ನಡೆ ಸಾಧಿಸಿದರು. ಲಖನೌದಿಂದ ಹ್ಯಾಟ್ರಿಕ್‌ಗಾಗಿ ಸ್ಪರ್ಧಿಸುತ್ತಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಪೈಪೋಟಿ ಎದುರಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿಯವರ ಹಿಂದಿನ ಕ್ಷೇತ್ರವಾದ ರಾಯ್ ಬರೇಲಿಯಲ್ಲಿ ನಿಂತಿದ್ದಾರೆ. 2004ರಿಂದ ಮೂರು ಬಾರಿ ಅಮೇಥಿಯನ್ನು ಪ್ರತಿನಿಧಿಸಿರುವ ರಾಹುಲ್, 2019ರಲ್ಲಿ ಅಲ್ಲಿ ಸ್ಮೃತಿ ಇರಾನಿ ಎದುರು ಸೋತಿದ್ದರು.

ಸಮಾಜವಾದಿ ಪಕ್ಷದ ಯಾದವ್ ಕುಟುಂಬವು ಅಸಾಧಾರಣ ಮುನ್ನಡೆ ತೋರಿಸಿದೆ. ಯಾದವ್‌ ಕುಟುಂಬದ ಐದು ಸದಸ್ಯರು ಲೋಕಸಭೆ ಸ್ಥಾನಗಳಿಗೆ ಸ್ಪರ್ಧಿಸಿದ್ದಾರೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಡಿಂಪಲ್ ಯಾದವ್, ಧರ್ಮೇಂದ್ರ ಯಾದವ್, ಅಕ್ಷಯ ಯಾದವ್ ಮತ್ತು ಆದಿತ್ಯ ಯಾದವ್ ವಿವಿಧ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.