Friday, 22nd November 2024

V Senthil Balaji: ಉದ್ಯೋಗಕ್ಕಾಗಿ ಲಂಚ ಹಗರಣ; ಮಾಜಿ ಸಚಿವ ಸೆಂಥಿಲ್‌ ಬಾಲಾಜಿಗೆ ಜಾಮೀನು

V Senthil Balaji

ನವದೆಹಲಿ: ‘ಉದ್ಯೋಗಕ್ಕಾಗಿ ಲಂಚ’ (Cash-for-jobs) ಹಗರಣದ ಸಂಬಂಧ 2023ರ ಜೂನ್‌ನಲ್ಲಿ ಬಂಧನಕ್ಕೊಳಗಾದ ತಮಿಳುನಾಡಿನ ಮಾಜಿ ಸಚಿವ ವಿ.ಸೆಂಥಿಲ್‌ ಬಾಲಾಜಿ (V Senthil Balaji) ಅವರಿಗೆ ಸುಪ್ರೀಂ ಕೋರ್ಟ್‌ (Supreme Court) ಗುರುವಾರ (ಸೆಪ್ಟೆಂಬರ್‌ 26) ಜಾಮೀನು ಮಂಜೂರು ಮಾಡಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ನೇತೃತ್ವದ ಎಐಡಿಎಂಕೆ ಸರ್ಕಾರದಲ್ಲಿ ಸೆಂಥಿಲ್‌ ಬಾಲಾಜಿ ಸಾರಿಗೆ ಸಚಿವರಾಗಿದ್ದರು. ಸಾರಿಗೆ ಸಚಿವರಾಗಿರುವ ಸಮಯದಲ್ಲಿ ಅಂದರೆ 2011-2015ರ ನಡುವೆ ಉದ್ಯೋಗ ಕೊಡಿಸುವ ನೆಪದಲ್ಲಿ ಹಣ ಪಡೆದಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಅವರನ್ನು ಕಳೆದ ವರ್ಷ ಬಂಧಿಸಿತ್ತು. ಪಕ್ಷವಿರೋಧಿ ಚಟುವಟಿಕೆ ನಡೆಸಿದ ಟಿಟಿವಿ ದಿನಕರನ್​ಗೆ ಬೆಂಬಲ ನೀಡಿದ್ದಕ್ಕೆ ಸೆಂಥಿಲ್​ ಅವರನ್ನು ಎಐಎಡಿಎಂಕೆಯಿಂದ ಉಚ್ಚಾಟಿಸಲಾಗಿತ್ತು. ಬಳಿಕ ಅವರು 2018ರಲ್ಲಿ ಆಡಳಿತರೂಢ ಡಿಎಂಕೆಗೆ ಸೇರ್ಪಡೆಯಾಗಿದ್ದರು. ಸಿಎಂ ಎಂ.ಕೆ.ಸ್ಟಾಲಿನ್‌ ನೇತೃತ್ಬದ ಸರ್ಕಾರದಲ್ಲಿ ಅವರು ಇಂಧನ ಸಚಿವರಾಗಿದ್ದರು. ಈ ವೇಳೆ ಅವರನ್ನು ಬಂಧಿಸಲಾಗಿತ್ತು.

ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಹ್ ಅವರನ್ನೊಳಗೊಂಡ ನ್ಯಾಯಪೀಠವು ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಜಾರಿ ನಿರ್ದೇಶನಾಲಯ (ED)ದ ಪ್ರತಿನಿಧಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಸೆಂಥಿಲ್ ಬಾಲಾಜಿ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಮತ್ತು ಸಿದ್ಧಾರ್ಥ್ ಲೂತ್ರಾ ಅವರ ವಾದವನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಆಗಸ್ಟ್ 12ಕ್ಕೆ ತೀರ್ಪನ್ನು ಕಾಯ್ದಿರಿಸಿದೆ.

ಕೆಲವು ಷರತ್ತುಗಳ ಮೇಲೆ ಜಾಮೀನು ನೀಡಲಾಗಿದೆ – ಅವರು ವಾರಕ್ಕೆ ಎರಡು ಬಾರಿ ಅಧಿಕಾರಿಗಳ ಮುಂದೆ ಹಾಜರಾಗಬೇಕು. ಸಾಕ್ಷ್ಯಗಳು ಅಥವಾ ಸಾಕ್ಷಿಗಳನ್ನು ಹಾಳು ಮಾಡಬಾರದು ಮತ್ತು ಪಾಸ್‌ಪೋರ್ಟ್‌ಗಳನ್ನು ಒಪ್ಪಿಸಬೇಕು ಎಂದು ಕೋರ್ಟ್‌ ಸೂಚಿಸಿದೆ.

ಹೈಡ್ರಾಮಾ

ಹಲವು ಗಂಟೆಗಳ ವಿಚಾರಣೆಯ ನಂತರ ಮತ್ತು ಹೈಡ್ರಾಮಾದ ನಡುವೆ ಸೆಂಥಿಲ್ ಬಾಲಾಜಿ ಅವರನ್ನು 2023ರ ಜೂನ್‌ 14ರಂದು ಬಂಧಿಸಲಾಗಿತ್ತು. ಜಾರಿ ನಿರ್ದೇಶನಾಲಯವು ವಶಕ್ಕೆ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಅವರು ಎದೆ ನೋವು ಕಾಣಿಸಿಕೊಂಡಿರುವುದಾಗಿ ತಿಳಿಸಿದ್ದರು. ನಂತರ ಚೆನ್ನೈ ಆಸ್ಪತ್ರೆಯಲ್ಲಿ ಆಂಜಿಯೋಗ್ರಾಮ್‌ಗೆ ಒಳಗಾಗಿದ್ದರು.

ಆಸ್ಪತ್ರೆಗೆ ಹೋಗುವಾಗ ಬಾಲಾಜಿ ಕುಸಿದುಬಿದ್ದು ಅಳುವ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಜತೆಗೆ ಆ್ಯಂಬಬುಲೆನ್ಸ್‌ನಲ್ಲಿ ಮತ್ತು ನಂತರ ಆಸ್ಪತ್ರೆಯಲ್ಲಿ ರೋಧಿಸುತ್ತಿರುವ ದೃಶ್ಯಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿದ್ದವು. ಇದರ ಬೆನ್ನಲ್ಲೇ ಡಿಎಂಕೆ ನಾಯಕರು ಇಡಿ ವಿರುದ್ಧ, ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದರು. ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ಬಿಜೆಪಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ದೂರಿದ್ದರು.

ಈ ಸುದ್ದಿಯನ್ನೂ ಓದಿ: Supreme Court: ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ, ಡೌನ್ಲೋಡ್‌ ಶಿಕ್ಷಾರ್ಹ ಅಪರಾಧ; ಸುಪ್ರೀಂ ಖಡಕ್‌ ಆದೇಶ

ಕಳೆದ ವರ್ಷದ ಆಗಸ್ಟ್‌ 12ರಂದು ಇಡಿ ಬಾಲಾಜಿ ವಿರುದ್ದ 3,000 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದೆ. ಅಕ್ಟೋಬರ್‌ 19ರಂದು ಹೈಕೋರ್ಟ್‌ ಬಾಲಾಜಿ ಅವರ ಮೊದಲ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅಲ್ಲದೆ ಸ್ಥಳೀಯ ಕೋರ್ಟ್‌ 3 ಬಾರಿ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿತ್ತು.