ಮಕ್ಕಳು (Vaccine for children) ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾದರೆ ಪೋಷಕರು ಆತಂಕಗೊಳ್ಳುವುದು ಸಹಜ. ಆರೋಗ್ಯ ಹದಗೆಡಲು ಕಾರಣವೇನು ಮತ್ತು ಎಲ್ಲಿಂದ ಸಮಸ್ಯೆ ಎದುರಾಯ್ತು ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಯಾಕೆಂದರೆ ಸಾಂಕ್ರಾಮಿಕ ರೋಗಗಳು, ವೈರಲ್ ಸೋಂಕುಗಳು ಬಹು ಬೇಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಎಲ್ಲಿಂದ ಹೇಗೆ ಬಂತು ಎಂದು ಬಹು ಬೇಗ ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ.
ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಅನಾರೋಗ್ಯ ಸಮಸ್ಯೆಗಳು ಬೇಗನೆ ಕಂಡುಬರುತ್ತವೆ. ಅವುಗಳಲ್ಲಿ ಹೆಚ್ಚಾಗಿ ದಡಾರ, ಜ್ವರ, ಚಿಕುನ್‌ಗುನ್ಯಾ, ಮಂಕಿಫಾಕ್ಸ್ ಸೇರಿದಂತೆ ವಿವಿಧ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಒಂದು ವೇಳೆ ಈ ಸೋಂಕುಗಳ ತೀವ್ರತೆ ಹೆಚ್ಚಾಗಿದ್ದಲ್ಲಿ ಅವುಗಳ ಪರಿಣಾಮ ಕೂಡ ವಿಭಿನ್ನವಾಗಿರುತ್ತದೆ. ಹೀಗಾಗಿ ಮಗು ಅನಾರೋಗ್ಯಕ್ಕೆ ತುತ್ತಾದ ಬಳಿಕ ಆತಂಕಕ್ಕೆ ಒಳಪಡುವ ಬದಲು ರೋಗ ತಡೆಗಟ್ಟುವಿಕೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯಕ.
ಈ ಪ್ರಕ್ರಿಯೆಯಲ್ಲಿ ಚುಚ್ಚುಮದ್ದುಗಳು ಅಥವಾ ಲಸಿಕೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಅಶೋಕ್ ಎಂ.ವಿ. ಹೇಳಿದ್ದಾರೆ.
ಮಕ್ಕಳಲ್ಲಿ ಕಂಡುಬರುವ ವೈರಸ್ ಸೋಂಕುಗಳು
ಸಾಮಾನ್ಯವಾಗಿ ಮಗು ಅನಾರೋಗ್ಯಕ್ಕೆ ತುತ್ತಾಗಿದ್ದರೆ ಜ್ವರ, ನಿಶ್ಯಕ್ತಿ, ಕೆಮ್ಮು ಸೇರಿದಂತೆ ಉಸಿರಾಟದ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳುವುದರಿಂದ ಸೈನಸ್ ಸೋಂಕುಗಳು, ನ್ಯುಮೋನಿಯಾ ಹಂತಕ್ಕೂ ತಲುಪಬಹುದು. ರೋಗದ ತೀವ್ರತೆ ಹೆಚ್ಚಾಗಿದ್ದಲ್ಲಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭವೂ ಎದರಾದೀತು. ಮಕ್ಕಳಲ್ಲಿ ಇತರೆ ಯಾವೆಲ್ಲ ವೈರಲ್ ಸೋಂಕುಗಳು ಕಂಡುಬರಲಿವೆ ಮತ್ತು ಅದರ ಲಕ್ಷಣಗಳೇನು ಎಂಬುದರ ಮಾಹಿತಿ ಹೀಗಿದೆ.
ದಡಾರ
ಇದೊಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಜ್ವರ, ಚರ್ಮದ ಮೇಲೆ ದದ್ದುಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ರೋಗವು ತೀವ್ರ ಹಂತಕ್ಕೆ ತಲುಪಿದಾಗ ಎನ್ಸಿಫಾಲಿಟಿಸ್ ಮತ್ತು ನ್ಯುಮೋನಿಯಾದಂತಹ ಮಾರಕ ಸಮಸ್ಯೆಗೆ ತುತ್ತಾಗಬಹುದು.
ಚಿಕನ್ ಪಾಕ್ಸ್ (ವೆರಿಸೆಲ್ಲಾ)
ಈ ಸಮಸ್ಯೆಯು ಜ್ವರ ಮತ್ತು ತುರಿಕೆಯುಳ್ಳ ದದ್ದುಗಳಿಂದ ಕೂಡಿರುತ್ತದೆ. ಚಿಕನ್ ಪಾಕ್ಸ್ ಸಮಸ್ಯೆಯು ತೀವ್ರ ಹಂತಕ್ಕೆ ತಲುಪಿದಾಗ ಎನ್ಸಿಫಾಲಿಟಿಸ್, ನ್ಯುಮೋನಿಯಾ ಮತ್ತು ಚರ್ಮದ ಸೋಂಕುಗಳಂತಹ ರೋಗಗಳಿಗೆ ದಾರಿಮಾಡಿಕೊಡುತ್ತದೆ.
ಮಂಪ್ಸ್
ಈ ಸೋಂಕಿನ ಲಕ್ಷಣವು ಲಾಲಾರಸ ಗ್ರಂಥಿಗಳಲ್ಲಿ ಹಿಗ್ಗುವಿಕೆ ರೂಪದಲ್ಲಿ ಕಂಡುಬರಲಿದೆ. ಮೆನಿಂಜೈಟಿಸ್ ಮತ್ತು ಪುರುಷರಲ್ಲಿ ವೃಷಣದ ಉರಿಯೂತಕ್ಕೆ ಕಾರಣವಾಗಲಿದೆ. ಗರ್ಭಿಣಿ ಮಹಿಳೆಯರು ರುಬೆಲ್ಲಾ (ಜರ್ಮನ್ ದಡಾರ) ಸೋಂಕನ್ನು ಹೊಂದಿದ್ದರೆ ರೋಗಲಕ್ಷಣವು ಸಾಮಾನ್ಯವಾಗಿ ಕಂಡುಬಂದರೂ ಸಹ ಮಗುವಿನ ಬೆಳವಣಿಗೆಯಲ್ಲಿ ವಿವಿಧ ರೀತಿಯ ಅಪಾಯಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ
ಪೋಲಿಯೊ
ಪೋಲಿಯೋ ಆರೋಗ್ಯ ಸಮಸ್ಯೆಯು ವೈರಸ್ ನಿಂದಾಗಿ ಕಂಡುಬರಲಿದ್ದು, ಪಾರ್ಶ್ವವಾಯು ಮತ್ತು ಜೀವಕ್ಕೆ ಮಾರಕವಾಗಿರುತ್ತವೆ. ಕೆಲವೊಮ್ಮೆ ಚುಚ್ಚುಮದ್ದು, ಲಸಿಕೆಯ ಪ್ರಮಾಣ ಕಡಿಮೆಯಿದ್ದರೂ ಸಹ ಮಕ್ಕಳಲ್ಲಿರುವ ರೋಗನಿರೋಧಕ ಶಕ್ತಿಯಿಂದಾಗಿ ವೈರಸ್ ಅನ್ನು ತಡೆಗಟ್ಟುವ ಸಾಧ್ಯತೆ ಇದೆ. ಆದರೂ ಸಹ ಈ ಆರೋಗ್ಯ ಸಮಸ್ಯೆಯು ಹೆಚ್ಚು ಕಳವಳವನ್ನುಂಟು ಮಾಡುವಂತದ್ದಾಗಿದ್ದು, ಲಸಿಕೆಯ ಅಗತ್ಯವೂ ಹೆಚ್ಚಾಗಿದೆ.
ರೋಟವೈರಸ್
ಇದೊಂದು ಅಪಾಯಕಾರಿ ವೈರಲ್ ಆಗಿದ್ದು, ಮಕ್ಕಳಲ್ಲಿ ತೀವ್ರವಾದ ಅತಿಸಾರ ಮತ್ತು ಡಿಹೈಡ್ರೇಟ್ ಕಂಡುಬಂದಲ್ಲಿ ಆಸ್ಪತ್ರೆಗೆ ದಾಖಲಾಗಬೇಕಾದ ಅನಿವಾರ್ಯತೆ ಎದುರಾಗಬಹುದು.
ವೈರಲ್ ಸೋಂಕಿಗೆ ಚುಚ್ಚುಮದ್ದುಗಳು
ಅನಾರೋಗ್ಯ ಸಮಸ್ಯೆ ವಿರುದ್ಧ ಹೋರಾಡಲು ಮಕ್ಕಳ ದೇಹಕ್ಕೆ ಅಗತ್ಯವಿರುವ ಪ್ರತಿರಕ್ಷಣಾ ಉತ್ಪಾದನೆಯನ್ನು ಉತ್ತೇಜಿಸುವ ಕಾರ್ಯವನ್ನು ಲಸಿಕೆಗಳು ಮಾಡುತ್ತವೆ. ಈ ಪ್ರಕ್ರಿಯೆಯಲ್ಲಿ ವೆರಿಸೆಲ್ಲಾ ಮತ್ತು ಎಂಎಂಆರ್ ( ದಡಾರ, ಮಂಪ್ಸ್, ರುಬೆಲ್ಲಾ) ಲಸಿಕೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಮೂಲಕ ಅನಾರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಜೊತೆಗೆ ಎದುರಾಗುವ ಅಪಾಯದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಅದಲ್ಲದೆ ಈ ರೀತಿಯ ಲಸಿಕೆಗಳನ್ನು ತೆಗೆದುಕೊಳ್ಳುವುದರಿಂದ ಪ್ರತ್ಯೇಕ ವೈದ್ಯಕೀಯ ಸಮಸ್ಯೆಯನ್ನು ಎದುರಿಸುತ್ತಿರುವ ಮಕ್ಕಳಲ್ಲಿ ಮುಂಬರುವ ಆರೋಗ್ಯ ಸಮಸ್ಯೆಯನ್ನು ತಡೆಗಟ್ಟಲು ನೆರವಾಗಲಿದೆ ಎನ್ನುತ್ತಾರೆ ವಾಸವಿ ಆಸ್ಪತ್ರೆಯ ತಜ್ಞರಾದ ಡಾ. ಅಶೋಕ್ ಎಂ.ವಿ.
ಮಕ್ಕಳಿಗೆ ಯಾವಾಗ ಲಸಿಕೆ ನೀಡುವುದು ಒಳಿತು!
ಲಸಿಕೆಗಳು ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕಾರಿಯಾಗಿವೆ. ಹುಟ್ಟಿದ ಮಗುವಿಗೆ 6 ತಿಂಗಳ ಅನಂತರ ಲಸಿಕೆಯನ್ನು ಕೊಡಿಸಬಹುದಾಗಿದ್ದು, ವಾರ್ಷಿಕವಾಗಿ ಲಸಿಕೆಯನ್ನು ನೀಡಬಹುದು. 12 ರಿಂದ 15 ತಿಂಗಳೊಳಗಿನ ಮಕ್ಕಳಿಗೆ ಎಂಎಂಆರ್ ಮತ್ತು ವರ್ಸೆಲ್ಲಾ ಲಸಿಕೆಯನ್ನು ಹೆಪಟಿಟಿಸ್ ಎ ಜೊತೆಗೆ ನೀಡಬಹುದು.
ನಾಲ್ಕರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಟೈಫಾಯಿಡ್ ಲಸಿಕೆಯನ್ನು, ಎಂಎಂಆರ್, ವೆರಿಸೆಲ್ಲಾ ಮತ್ತು ಡಿಟಿಪಿ ಬೂಸ್ಟರ್ ಡೋಸ್ ಜೊತೆಗೆ ನೀಡಬಹುದು.
ಮಕ್ಕಳಿಗೆ ಲಸಿಕೆ ಹಾಕಿಸುವಲ್ಲಿ ಅನೇಕ ಪೋಷಕರು ಹಿಂದೇಟು ಹಾಕುತ್ತಾರೆ. ಅದಕ್ಕೆ ಕಾರಣ ಅವರಲ್ಲಿ ಎದುರಾಗುವ ಆತಂಕಗಳು. ಆದರೆ ಪೋಷಕರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಯಾಕೆಂದರೆ ಹಲವು ವರ್ಷಗಳ ನಿರಂತರ ಸಂಶೋಧನೆಯಿಂದಾಗಿ ಈ ಲಸಿಕೆಗಳನ್ನು ಕಂಡುಹಿಡಿಯಲಾಗಿದೆ. ಜೊತೆಗೆ ಯಶಸ್ವಿ ಪ್ರಯೋಗಗಳ ಅನಂತರವೇ ಈ ಲಸಿಕೆಗಳನ್ನು ಮಾರುಕಟ್ಟೆಗೆ ತರಲಾಗಿರುತ್ತದೆ.
Stomach Cancer: ಎಚ್ಚರ! ಹೆಚ್ಚು ಉಪ್ಪು ಸೇವಿಸಿದರೆ ಹೊಟ್ಟೆಯ ಕ್ಯಾನ್ಸರ್!
ಪೋಷಕರು ನೆನಪಿಟ್ಟುಕೊಳ್ಳಬೇಕಾದ ಅಂಶವೆಂದರೆ ನಿಪುಣ ಹಾಗೂ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸುವ ಮೂಲಕ ಮಕ್ಕಳಿಗೆ ಈ ಲಸಿಕೆಗಳನ್ನು ಹಾಕಿಸುವುದು ಮುಖ್ಯವಾಗುತ್ತದೆ ಎಂದು ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಅಶೋಕ್ ಎಂ.ವಿ. ಸಲಹೆ ನೀಡಿದ್ದಾರೆ.