Friday, 22nd November 2024

ಮಹಿಳಾ ಸಬಲೀಕರಣ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಯಭಾರಿಯಾಗಿ ವಂದನಾ ಕಟಾರಿಯಾ

ಡೆಹ್ರಾಡೂನ್ : ಒಲಿಂಪಿಕ್ಸ್​ ಹಾಕಿ ತಂಡದ ಸದಸ್ಯೆಯಾಗಿದ್ದ ಹರಿದ್ವಾರ ಮೂಲದ ವಂದನಾ ಕಟಾರಿಯಾ ಅವರನ್ನು ಉತ್ತರಾಖಂಡದ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಯಭಾರಿಯಾಗಿ ನೇಮಿಸಲಾಗಿದೆ. ರಾಜ್ಯದ ಸಿಎಂ ಪುಷ್ಕರ್​ ಸಿಂಗ್ ಧಾಮಿ ಇಂದು ಘೋಷಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಪದಕ ಗೆಲ್ಲದಿದ್ದರೂ, ಸೆಮಿಫೈನಲ್ಸ್​ ತನಕ ಸಾಗಿ ಉತ್ತಮ ಆಟಗಾರಿಕೆ ಪ್ರದರ್ಶಿಸಿದೆ. ಈ ಪಯಣದಲ್ಲಿ ಹಲವು ಬಲಿಷ್ಠ ತಂಡಗಳನ್ನು ಮಣಿಸಿದ ಹಾಕಿ ಆಟಗಾರ್ತಿಯರು ದೇಶದ ಹೆಣ್ಣುಮಕ್ಕಳಿಗೆ ಸಾಧನೆಯ ದಾರಿ ಹಿಡಿಯಲು ಮಾದರಿಯಾಗಿದ್ದಾರೆ.

ವಂದನಾಗೆ ರಾಜ್ಯದ ಪ್ರತಿಷ್ಠಿತ ಪುರಸ್ಕಾರವಾದ ‘ತಿಲು ರೌತೇಲಿ’ ಪ್ರಶಸ್ತಿಯನ್ನು ಪ್ರದಾನಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಈ ಮುನ್ನ, ವಂದನಾ ಕಟಾರಿಯಾ ಅವರಿಗೆ 25 ಲಕ್ಷ ರೂ.ಗಳ ನಗದು ಬಹುಮಾನವನ್ನು ಕೂಡ ಉತ್ತರಾಖಂಡ ಸರ್ಕಾರ ಘೋಷಿಸಿದೆ.