Friday, 20th September 2024

Vande Bharat Sleeper Coach: ‘ವಂದೇ ಭಾರತ್ ಸ್ಲೀಪರ್ ಕೋಚ್’ ರೈಲು ಅನಾವರಣ; ಪ್ರಯಾಣಿಕರಿಗೆ ಏನೇನು ಸೌಲಭ್ಯವಿದೆ ಗೊತ್ತೇ?

Vande Bharat Sleeper Coach

ನವದೆಹಲಿ :ಭಾರತದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ನಂತರ ಇದೀಗ ಭಾರತೀಯ ರೈಲ್ವೆ ಹೊಸ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಅನಾವರಣಗೊಳಿಸಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ  ವಂದೇ ಭಾರತ್ ಸ್ಲೀಪರ್ ಕೋಚ್‍ನ  (Vande Bharat Sleeper Coach Train)ಮಾದರಿಯನ್ನು ಅನಾವರಣಗೊಳಿಸಿದ್ದಾರೆ. ಮತ್ತು ಅದರ ಜೊತೆಗೆ ವಂದೇ ಭಾರತ್‍ನ ಹೊಸ ರೈಲು  ಹಲವಾರು ರೀತಿಯ ಸೌಲಭ್ಯಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಈ ರೈಲಿನಲ್ಲಿ ಹೆಚ್ಚು ಸ್ಥಳಾವಾಕಾಶವಿದ್ದು, ಪ್ರಯಾಣಿಕರಿಗೆ ಸ್ಲೀಪರ್ ಕೋಚ್‍ಗಳಲ್ಲಿ ಆರಾಮದಾಯಕವಾಗಿ  ಪ್ರಯಾಣಿಸ ಬಹುದು. ಹಾಗೂ  ಸುಸಜ್ಜಿತ ಹಾಗೂ ವಿಶಾಲ ಶೌಚಾಲಯಗಳು, ಉತ್ತಮ ಲೈಟ್ ವ್ಯವಸ್ಥೆ ಕೂಡ ಇದೆ ಎಂಬುದಾಗಿ ಅವರು ತಿಳಿಸಿದ್ದಾರೆ .ಈ ವೇಳೆ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಸಾಥ್ ನೀಡಿದರು.

ಇದು ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಆವೃತ್ತಿಯ ಮಾದರಿಯಾಗಿದ್ದು, ಸ್ವದೇಶಿ ತಂತ್ರಜ್ಞಾನವನ್ನು ಬಳಸಿ  ಪರಿಸರ ಸ್ನೇಹಿಯಾಗಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಹಾಗೂ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಗಳಲ್ಲಿ ವಂದೇ ಭಾರತ್ ರೈಲಿನ ಸ್ಲೀಪರ್ ಕೋಚ್‌ಗಳನ್ನು ತಯಾರಿಸಲಾಗಿದೆ.  ಮುಂದಿನ ಎರಡು ತಿಂಗಳಲ್ಲಿ ಈ ರೈಲಿನ ಕುರಿತು ಕೆಲವು ಟೆಸ್ಟ್ ಗಳನ್ನು ಮಾಡಲಿದ್ದು, ನಂತರ ಡಿಸೆಂಬರ್‌ನಿಂದ ಪ್ರಯಾಣಿಕರು ಪ್ರಯಾಣಿಸಲು ಅನುವು ಮಾಡಿಕೊಡಲಾಗುವುದು ಎಂಬುದಾಗಿ ತಿಳಿದುಬಂದಿದೆ.

ವಂದೇ ಭಾರತ್ ಸ್ಲೀಪರ್ ರೈಲು 16 ಬೋಗಿಗಳನ್ನು ಹೊಂದಿದೆ. 4 ಎಸಿ 2 ಟೈಯರ್ ಕೋಚ್ (188 ಬರ್ತ್), 11 ಎಸಿ 3 ಟೈಯರ್ ಕೋಚ್ (611 ಬರ್ತ್), ಮತ್ತು 1 ಎಸಿ ಫಸ್ಟ್ ಕ್ಲಾಸ್ ಕೋಚ್ (24 ಬರ್ತ್) ಒಳಗೊಂಡಿದೆ. ಒಟ್ಟು 823 ಸೀಟುಗಳ ವ್ಯವಸ್ಥೆ ಇರಲಿದೆ. ಫಸ್ಟ್ ಕ್ಲಾಸ್ ಎಸಿ ಬರ್ತ್‍ನಲ್ಲಿ ಬಿಸಿನೀರಿನ ಶವರ್ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಲ್ಲಿ ಜಿಎಫ್ಆರ್‌ಪಿ ಬಳಸಿ ನಿರ್ಮಿಸಿದ ಆಂತರಿಕ ಫಲಕ, ಪೂರ್ಣ ಪ್ರಮಾಣದ ಸ್ವಯಂ ಚಾಲಿತ ಡೋರ್ ಇರಲಿದ್ದು, ಗಂಟೆಗೆ 160 ಕಿ. ಮೀ ವೇಗದಲ್ಲಿ ಈ ರೈಲು ಚಲಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೇ ಲೋಕೋ ಪೈಲಟ್ ಗಳು, ನಿರ್ವಹಣಾ ಸಿಬ್ಬಂದಿ ಅಥವಾ ಹಾಸಿಗೆ ಮತ್ತು ಆಹಾರವನ್ನು ಪೂರೈಸುವವರು ಸೇರಿದಂತೆ ಸೇವೆಯಲ್ಲಿರುವ ಸಿಬ್ಬಂದಿಯ ಅಗತ್ಯಗಳನ್ನು ಪರಿಗಣಿಸಲಾಗಿದೆ. ಹೊಸ ಸ್ಲೀಪರ್ ಕೋಚ್ ವಂದೇ ಭಾರತ್‍ನ ಪರೀಕ್ಷೆ ಮುಂದಿನ ಒಂದರಿಂದ ಎರಡು ತಿಂಗಳವರೆಗೆ ನಡೆಯುತ್ತದೆ ಮತ್ತು ನಂತರ ಮೂರು ತಿಂಗಳಲ್ಲಿ ಪ್ರಯಾಣಿಕರಿಗೆ ಪ್ರಯಾಣ ಮಾಡಲು ಅನುವು ಮಾಡಿಕೊಡಲಾಗುವುದು ಎಂದು ರೈಲ್ವೆ ಸಚಿವರು ಮಾಹಿತಿ ನೀಡಿದರು.