Saturday, 14th December 2024

ನಿಮಗೂ ಹಠಾತ್‌ ತಲೆ ತಿರುಗುವಿಕೆ ಇದೆಯೇ? ಹಾಗಿದ್ದರೆ ಅದು ವರ್ಟಿಗೋ ಆಗಿರಬಹುದು ಎಚ್ಚರ!

ಡಾ ಪಿ.ಆರ್‌. ಕೃಷ್ಣನ್, ಹಿರಿಯ ಸಲಹೆಗಾರರು – ನ್ಯೂರಾಲಜಿ, ಫೋರ್ಟಿಸ್ ಆಸ್ಪತ್ರೆ,

ಕೆಲವರು ಬೆಳಗ್ಗೆ ಎದ್ದ ಕೂಡಲೇ ಅಥವಾ ಕುಳಿತಲ್ಲಿಯೇ ಇದ್ದಕ್ಕಿಂದ್ದಂತೆ ತಲೆತಿರುಗುವಿಕೆಯನ್ನು ಅನುಭವಿಸುತ್ತಾರೆ, ಕೆಲವು ಸೆಕೆಂಡ್‌ಗಳ ವರೆಗೆ ಈ ಅನುಭವವಾಗುತ್ತದೆ ಅಥವಾ ತಾವು ಇರುವ ಜಾಗವೇ ಸುತ್ತುತ್ತಿರುವ ಅನುಭವವೂ ಆಗಬಹುದು. ಇದು ಸಾಮಾನ್ಯವೆಂದು ನೀವು ನಿರ್ಲಕ್ಷ್ಯ ಮಾಡಿದರೆ ಮುಂದೊಂದು ದಿನ ಅಪಾಯಕ್ಕೆ ಗುರಿಯಾಗಬಹುದು, ಹೌದು, ಈ ರೀತಿಯ ಸಡನ್‌ ತಲೆ ತಿರುಗುವಿಕೆ ನಿಮ್ಮನ್ನು ಪದೇ ಪದೇ ಕಾಡುತ್ತಿದ್ದರೆ ಅದು ವರ್ಟಿಗೋ ಸಮಸ್ಯೆ ಆಗಿರಬಹುದು ಎಚ್ಚರ. ಏನಿದು ವರ್ಟಿಗೋ, ಯಾರಲ್ಲಿ ಇದು ಕಂಡು ಬರಲಿದೆ, ಇದಕ್ಕೆ ಪರಿಹಾರವೇನು ಎಂಬುದರ ಕುರಿತು ವೈದ್ಯರು ವಿವರಿಸಿದ್ದಾರೆ.

ಏನಿದು ವರ್ಟಿಗೋ?
ವರ್ಟಿಗೋ ಸಮಸ್ಯೆ ಬಂದರೆ ತಲೆತಿರುಗುವಿಕೆ, ವಾಕರಿಕೆ ಬಂದರೂ, ಈ ಸಮಸ್ಯೆ ಮೂಲ ಕಿವಿ. ಹೌದು, ಸಾಮಾನ್ಯವಾಗಿ ‘ಬಿನೈನ್ ಪ್ಯಾರಾಕ್ಸಿಸ್ಮಲ್ ಪೊಸಿಷನಲ್ ವರ್ಟಿಗೋ(ಬಿಪಿಪಿವಿ)’ ಎಂಬ ಒಳಗಿವಿಯ ಸಮಸ್ಯೆಯಿಂದ ಈ ವರ್ಟಿಗೋ ಸಮಸ್ಯೆ ಕಾಡಲಿದೆ. ಈ ಸಮಸ್ಯೆ ಇದ್ದವರಿಗೆ ಆಗಾಗ್ಗೇ ತಲೆ ತಿರುಗುವಿಕೆ ಅಥವಾ ಅವರು ಇರುವ ಪ್ರದೇಶವೇ ಸುತ್ತುತ್ತಿರುವ ರೀತಿ ಹಾಗೂ ಕೆಲವೊಮ್ಮೆ ವಾಕರಿಕೆಯನ್ನು ಸಹ ಅನುಭವಿಸುತ್ತಾರೆ. ಈ ಅನುಭವ ಸಾಮಾನ್ಯವಾಗಿ ಒಂದು ನಿಮಿಷಕ್ಕಿಂತ ಹೆಚ್ಚು ಕಾಡುವುದಿಲ್ಲ ಮತ್ತು ಹಠಾತ್ ಅಥವಾ ಒಂದು ನಿರ್ದಿಷ್ಟ ಭಂಗಿಯಲ್ಲಿ ತಲೆಯ ಚಲನೆ ವರ್ಟಿಗೋ ವನ್ನುಂಟು ಮಾಡುತ್ತದೆ. ಇದಷ್ಟೇ ಅಲ್ಲದೆ, ಇನ್ನಷ್ಟು ಕಾರಣಗಳಿಂದ ಸಹ ಈ ವರ್ಟಿಗೋ ಸಮಸ್ಯೆ ಕಾಡಬಹುದು. ಈ ವರ್ಟಿಗೋ ಸಮಸ್ಯೆ ಹೆಚ್ಚಾಗಿ ಮಹಿಳೆಯರು ಹಾಗೂ ವಯಸ್ಸಾದವರಲ್ಲಿ ಕಂಡು ಬರಲಿದೆ, ಕೆಲವೊಮ್ಮೆ ವಯಸ್ಕರಲ್ಲೂ ಸಹ ಕಾಣಿಸಬಹುದು.

ಕಾರಣಗಳೇನು?
ಸಾಮಾನ್ಯವಾಗಿ ಕಿವಿಯಲ್ಲಿನ ದ್ರವದಲ್ಲಿ ಅಸಮತೋಲನ ಕಾಡಿದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅಥವಾ ಕಿವಿಯಲ್ಲಿ ಸೋಂಕು, ಕಿವಿ ನೋವು, ಕಿವಿಸೋರುವಿಕೆಯಿಂದಲೂ ತಲೆತಿರುಗುವಿಕೆ ಕಾಣಿಸಿಕೊಳ್ಳಲಿದೆ. ಇನ್ನೂ ಕೆಲವರಿಗೆ ಮೈಗ್ರೇನ್‌ ಸಮಸ್ಯೆ ಹೆಚ್ಚಿದ್ದಾಗ, ವರ್ಟಿಗೋ ಕಾಣಿಸಬಹುದು, ಮೆದುಳಿನ ಸಮಸ್ಯೆಗಳಾದ ಸೋಂಕು, ಮೆದುಳಿನ ಗಡ್ಡೆ, ಮೆದುಳಿನ ಗಾಯ ಅಥವಾ ಸ್ಟ್ರೋಕ್ ಸಂಭವಿಸಿದಾಗ ಈ ರೀತಿಯ ತಲೆಸುತ್ತು ಕಾಣಿಸಿಕೊಳ್ಳ ಬಹುದು. ದೇಹದಲ್ಲಿನ ರಕ್ತದೊತ್ತಡ ಅತಿಯಾದಾಗ ಅಥವಾ ಲೋ ಬಿಪಿಯಾದಾಗ ತಲೆಸುತ್ತು ಉಂಟಾಗುತ್ತದೆ. ಈ ಎಲ್ಲಾ ಕಾರಣದಿಂದ ತಲೆಸುತ್ತು ಕಾಣಿಸಿಕೊಳ್ಳಬಹುದು, ಇನ್ನೂ ಕೆಲವರಿಗೆ ಇದರಿಂದ ವಾಕರಿಕೆ, ಕಣ್ಣು ಮಂಜಾಗುವ ಸಮಸ್ಯೆಯೂ ಕಾಡಬಹುದು. ಇದಲ್ಲದೆ, ಪಾರ್ಶ್ವವಾಯು, ಗರ್ಭಕಂಠದ ಸ್ಪಾಂಡಿಲೋಸಿಸ್, ಮಲ್ಟಿಪಲ್ ಸ್ಕ್ಲೆರೋಸಿಸ್ ಮುಂತಾದ ನರವೈಜ್ಞಾನಿಕ ಸಮಸ್ಯೆಗಳು ಕೇಂದ್ರೀಯ ವರ್ಟಿಗೋವನ್ನು ಉಂಟು ಮಾಡುತ್ತವೆ.

ವರ್ಟಿಗೋ ತಡೆಗಟ್ಟುವಿಕೆ
ವರ್ಟಿಗೋ ಸಮಸ್ಯೆಯೀಂದ ತಲೆತಿರುಗುವಿಕೆಯನ್ನು ತಡೆಗಟ್ಟಲು ಒಂದಷ್ಟು ಸಲಹೆಯನ್ನು ಪಾಲಿಸುವುದು ಒಳಿತು,
೧. ನಿಮ್ಮ ತಲೆಯನ್ನು ಒಂದು ಕಡೆಯಿಂದ ಮತ್ತೊಂದುಕಡೆಗೆ ಹಠಾತ್ತನೆ ಸರಿಸಬೇಡಿ.
೨. ಕಿವಿ ಶುಚಿಗೊಳಿಸಲು ಚೂಪಾದ ವಸ್ತುಗಳು, ಇಯರ್‌ ಬಡ್ಸ್‌ ಬಳಸಬೇಡಿ, ಯಾವುದೇ ವಸ್ತುವಾಗಲಿ ಕಿವಿಯ ಆಳದವರೆಗೂ ಹಾಕಬೇಡಿ, ಇದರಿಂದ ಕಿವಿಗೆ ಹಾನಿಯಾಗಬಹುದು.
೩. ವೇಗವಾಗಿ ಸುತ್ತುವ ಆಟಗಳನ್ನು ಕಡಿಮೆ ಮಾಡಿ.
೪. ಆಳವಾದ ಡೈವಿಂಗ್ ಅಥವಾ ದೀರ್ಘಕಾಲದವರೆಗೆ ಈಜುವಾಗ ಸದಾ ನಿಮ್ಮ ಕಿವಿಯನ್ನು ಮುಚ್ಚಿಕೊಳ್ಳಿ ಏಕೆಂದರೆ ನೀರಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಒಳಗಿನ ಕಿವಿ ಸೋಂಕಿಗೆ ತುತ್ತಾಗಬಹುದು.
೫. ನೀವು ಗರ್ಭಕಂಠದ ಸ್ಪಾಂಡಿಲೋಸಿಸ್ ಹೊಂದಿದ್ದರೆ ನಿಗದಿತ ಚಿಕಿತ್ಸೆಯನ್ನು ಅನುಸರಿಸುವ ಮೂಲಕ ನಿಮ್ಮ ಗರ್ಭಕಂಠದ ಬೆನ್ನುಮೂಳೆಯ ಬಗ್ಗೆ ಕಾಳಜಿ ವಹಿಸಿ.

ಚಿಕಿತ್ಸೆ ಏನು?
ವರ್ಟಿಗೋದ ಕಾರಣವನ್ನು ನಿರ್ಧರಿಸಲು ರೇಡಿಯೋ ಇಮೇಜಿಂಗ್ ಪರೀಕ್ಷೆಗಳನ್ನು ನಡೆಸಬಹುದು. CT ಸ್ಕ್ಯಾನ್ (ಹೆಡ್), CT ಕುತ್ತಿಗೆ, MRI ಮೆದುಳು, MRI ಗರ್ಭಕಂಠದ ಬೆನ್ನೆಲುಬು ಈ ಪರೀಕ್ಷೆಗಳಿಂದ ಕಾರಣ, ಕಿವಿಯ ಒಳಗಿನ ಸಮಸ್ಯೆಗಳು ಅಥವಾ ಗರ್ಭಕಂಠದ ಸ್ಪಾಂಡಿಲೋಸಿಸ್, ಮೆದುಳಿನ ಗೆಡ್ಡೆ, ಇತ್ಯಾದಿಗಳಂತಹ ಇತರ ತಲೆ ಮತ್ತು ಕತ್ತಿನ ಸಮಸ್ಯೆಗಳು ಏನೆಂದು ತಿಳಿಸಲಿವೆ. ತಲೆ ತಿರುಗುವಿಕೆ ಪ್ರಮಾಣ ಹೆಚ್ಚಿದ್ದರೆ ನಿರ್ಲಕ್ಷಿಸದೇ ಕೂಡಲೇ ವೈದ್ಯ ರನ್ನು ಭೇಟಿ ನೀಡಿ