Friday, 22nd November 2024

ಈ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ: ಫೆ.15ರ ನಂತರ ದಿನಾಂಕ ಘೋಷಣೆ?

ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ ವಿಧಾನ ಸಭೆ ಚುನಾವಣೆಗೆ ಇದೇ ತಿಂಗಳ 15ರ ನಂತರ ದಿನಾಂಕ ಘೋಷಣೆಯಾಗಲಿದೆ.

ಚುನಾವಣಾ ಆಯೋಗ, ದಕ್ಷಿಣ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರವಾಸದಲ್ಲಿದ್ದು, ಚುನಾವಣೆ ಸಿದ್ಧತೆಯ ಕುರಿತು ಪರಿಶೀಲನೆ ನಡೆಸುತ್ತಿದೆ. ಫೆ.15ರಂದು ಈ ಪ್ರವಾಸ ಕೊನೆಯಾಗಲಿದ್ದು, ನಾಲ್ಕು ರಾಜ್ಯಗಳು ಹಾಗು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣೆ ದಿನಾಂಕ ಘೋಷಣೆ ಮಾಡಲಾಗುವುದು ಎಂದು ತಿಳಿದುಬಂದಿದೆ.

ತಮಿಳುನಾಡು, ಕೇರಳ ಹಾಗೂ ಪುದುಚೆರಿಯಲ್ಲಿ ಏಕ ಹಂತ ಹಾಗೂ ಪಶ್ಚಿಮ ಬಂಗಾಳದಲ್ಲಿ ಆರರಿಂದ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅಸ್ಸಾಂನಲ್ಲಿ ಎರಡರಿಂದ ಮೂರು ಹಂತಗಳ ಚುನಾವಣೆ ನಡೆಯಲಿರುವುದಾಗಿ ತಿಳಿದುಬಂದಿದೆ.

ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರ, ಚುನಾವಣಾ ಆಯುಕ್ತರಾದ ಸುಶಿಲ್ ಚಂದ್ರ ಹಾಗೂ ರಾಜೀವ್ ಕುಮಾರ್, ಹಿರಿಯ ಅಧಿಕಾರಿಗಳು ಫೆಬ್ರುವರಿ 10 ರಿಂದ 15ರವರೆಗೆ ತಮಿಳುನಾಡು, ಕೇರಳ ಹಾಗೂ ಪುದುಚೇರಿಗೆ ಭೇಟಿ ನೀಡಲಿದ್ದಾರೆ.

ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೆರಿಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ಚುನಾವಣಾ ಕಾರ್ಯ ಬಿರುಸು ಪಡೆಯಲಿದೆ.