Wednesday, 11th December 2024

ವಿಕಾಸ್‌ ದುಬೆ ಪೊಲೀಸ್ ಎನ್‌ಕೌಂಟರ್‌: ಉ.ಪ್ರದೇಶ ಪೊಲೀಸರಿಗೆ ಕ್ಲೀನ್ ಚಿಟ್

ಲಖನೌ: ಕಳೆದ ವರ್ಷ ಜುಲೈ ತಿಂಗಳಲ್ಲಿ ನಡೆದ ಪಾತಕಿ ವಿಕಾಸ್‌ ದುಬೆ ಪೊಲೀಸ್ ಎನ್‌ಕೌಂಟರ್‌ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ತನಿಖೆ ನಡೆಸುತ್ತಿರುವ ತ್ರಿಸದಸ್ಯರ ತನಿಖಾ ಆಯೋಗ, ಉತ್ತರ ಪ್ರದೇಶದ ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದೆ.

ಲಭ್ಯವಾದ ಸಾಕ್ಷ್ಯಗಳು ವಿಕಾಸ್‌ ದುಬೆಯ ವಿರುದ್ಧ ನಡೆದ ಎನ್‌ಕೌಂಟರ್‌ ಅನ್ನು ಬೆಂಬಲಿಸುತ್ತಿವೆಯೇ ಹೊರತು, ವಿರೋಧಿಸುತ್ತಿಲ್ಲ. ಹಾಗಾಗಿ ಪೊಲೀಸರನ್ನು ಖುಲಾಸೆಗೊಳಿಸಲಾಗಿದೆ ಎಂದು ಆಯೋಗ ಹೇಳಿದೆ.

ನಕಲಿ ಎನ್‌ಕೌಂಟರ್‌’ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳಾದ ಬಿ.ಎಸ್. ಚೌಹಾಣ್, ಎಸ್. ಕೆ. ಅಗರವಾಲ್‌ ಮತ್ತು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಕೆ.ಎಲ್ ಗುಪ್ತಾ ಅವರನ್ನೊಳಗೊಂಡ ತ್ರಿಸದಸ್ಯ ವಿಚಾರಣಾ ಆಯೋಗವನ್ನು ರಚಿಸಲಾಗಿತ್ತು.

ಉತ್ತರ ಪ್ರದೇಶದ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ ಖನ್ನಾ, ತನಿಖಾ ನಿಯೋಗದ ವರದಿಯನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದರು.

ಕಳೆದ ವರ್ಷದ ಜುಲೈ 2 ಮತ್ತು 3ರ ನಡು ರಾತ್ರಿ ಕಾನ್ಪುರ ಜಿಲ್ಲೆಯ ಬಿಕ್ರು ಹಳ್ಳಿಯಲ್ಲಿರುವ ದುಬೆ ಅವರ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದರು. ಈ ದಾಳಿಯಲ್ಲಿ ಡಿಎಸ್‌ಪಿ ಸೇರಿದಂತೆ ಎಂಟು ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೆಯನ್ನು ಬಂಧಿಸಿ, ಉಜ್ಜಯಿನಿಯಿಂದ ಕಾನ್ಪುರಕ್ಕೆ ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ, ಆ ವಾಹನ ಅಪಘಾತಕ್ಕೀಡಾಯಿತು. ಇದೇ ವೇಳೆ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಎನ್‌ಕೌಂಟರ್‌ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಪೊಲೀಸರು ರೂಪಿಸಿದ್ದ ಕಳಪೆ ಯೋಜನೆಯಿಂದಾಗಿ, ಈ ಎನ್‌ಕೌಂಟರ್‌ನಲ್ಲಿ ಎಂಟು ಮಂದಿ ಪೊಲೀಸರು ಕೊಲೆಯಾದರು. ಇದು ಸ್ಥಳೀಯ ಗುಪ್ತಚರ ಇಲಾಖೆಯ ಸೋಲು ಎಂದು ಹೇಳಿದೆ. ದುಬೆ ಎನ್‌ಕೌಂಟರ್ ಪ್ರಕರಣದ ಎಲ್ಲ ಸಾಕ್ಷ್ಯಗಳು ಪೋಲೀಸರು ಹೇಳಿಕೆಯನ್ನೇ ಬೆಂಬಲಿಸುತ್ತವೆ. ಈ ಘಟನೆಯಲ್ಲಿ ಪೋಲಿಸರಿಗೆ ಆಗಿರುವ ಗಾಯಗಳು, ಅವರೇ ಮಾಡಿಕೊಂಡಿರಲು ಸಾಧ್ಯವಿಲ್ಲ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯ ಡಾ. ಆರ್ ಎಸ್ ಮಿಶ್ರಾ ಹೇಳಿದ್ದಾರೆ.

ವಿಕಾಸ್ ದುಬೆ ಪತ್ನಿ ರಿಚಾ ದುಬೆ ಈ ಘಟನೆಯನ್ನು ನಕಲಿ ಎನ್‌ಕೌಂಟರ್‌ ಎಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದರೂ, ಅವರು ಆಯೋಗದ ಮುಂದೆ ಹಾಜರಾಗಲಿಲ್ಲ. ಇಂತಹ ಸಂದರ್ಭದಲ್ಲಿ, ಎನ್‌ಕೌಂಟರ್ ಕುರಿತು ಪೋಲಿಸ್ ಹೇಳಿಕೆ ಬಗ್ಗೆ ಯಾವುದೇ ಶಂಕೆ ಹುಟ್ಟುವುದಿಲ್ಲ’ ಎಂದು ಆಯೋಗ ತಿಳಿಸಿದೆ.