Friday, 22nd November 2024

Vinesh Phogat: ನನ್ನ ಹೆಸರಿನ ಶಕ್ತಿಯಿಂದ ವಿನೇಶ್‌ಗೆ ಗೆಲುವು; ಬ್ರಿಜ್ ಭೂಷಣ್ ತಿರುಗೇಟು

ಗೊಂಡಾ(ಉತ್ತರ ಪ್ರದೇಶ): ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕೇವಲ 100 ಗ್ರಾಂ ಅಧಿಕ ತೂಕದಿಂದ ಫೈನಲ್‌ ಸ್ಪರ್ಧೆಯಿಂದ ವಂಚಿತರಾಗಿ ಪದಕ ಕಳೆದುಕೊಂಡ ಮಾಜಿ ಕುಸ್ತಿಪಟು ವಿನೇಶ್‌ ಫೋಗಟ್‌(Vinesh Phogat) ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮೆರೆದಿದ್ದಾರೆ. ಜುಲಾನಾ ವಿಧಾನಸಭಾ ಕ್ಷೇತ್ರದಿಂದ(Julana Assembly) ಕಣಕ್ಕಿಳಿದ್ದ ಅವರು 65,080 ಮತಗಳನ್ನು ಗಳಿಸಿ 6,105 ಮತಗಳಿಂದ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಯೋಗೇಶ್ ಕುಮಾರ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದರು. ವಿನೇಶ್‌ ಗೆಲುವಿನ ಬಳಿಕ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan), ಆಕೆ ಗೆಲುವು ಸಾಧಿಸಲು ನನ್ನ ಹೆಸರಿನ ಶಕ್ತಿ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿದ್ದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಲೈಂಗಿಕ ಆರೋಪ ಹೊರಿಸಿ ತೀವ್ರ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳ ಪೈಕಿ ವಿನೇಶ್‌ ಪ್ರಮುಖರಾಗಿದ್ದರು. ಗೆಲುವಿನ ಬಳಿಕ ಪ್ರತಿಕ್ರಿಯೆ ನೀಡಿದ್ದ ವಿನೇಶ್‌, ʼಸತ್ಯ ಗೆದ್ದಿದೆʼ ಎಂದು ಹೇಳಿದ್ದರು. ಇದಕ್ಕೆ ಬ್ರಿಜ್ ಭೂಷಣ್ ತಿರುಗೇಟು ನೀಡಿದ್ದಾರೆ.

“ಆಕೆ ನನ್ನ ಹೆಸರನ್ನು ಬಳಸಿಕೊಂಡು ಗೆದ್ದಿದ್ದಾಳೆ. ನಾನೊಬ್ಬ ಮಹಾನ್ ವ್ಯಕ್ತಿ. ಕನಿಷ್ಠ ನನ್ನ ಹೆಸರಿಗಾದರೂ ಆಕೆಯ ರಾಜಕೀಯ ಪ್ರವೇಶಕ್ಕೆ ಸಹಾಯ ಮಾಡುವಷ್ಟು ಶಕ್ತಿ ಇದೆಯಲ್ಲ” ಎಂದು ಬ್ರಿಜ್‌ ಭೂಷಣ್‌ ಹೇಳಿಕೆ ನೀಡಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

“ವಿನೇಶ್ ಫೋಗಾಟ್ ಎಲ್ಲಿಗೆ ಹೋದರೂ, ವಿನಾಶವು ಅವಳನ್ನು ಹಿಂಬಾಲಿಸುತ್ತದೆ, ಮತ್ತು ಭವಿಷ್ಯದಲ್ಲಿ ಅದು ಸಂಭವಿಸುತ್ತದೆ. ಅವಳು ಸ್ವತಃ ಚುನಾವಣೆಯಲ್ಲಿ ಗೆದ್ದಿರಬಹುದು ಆದರೆ ಕಾಂಗ್ರೆಸ್ ಸಂಪೂರ್ಣವಾಗಿ ಅವನತಿ ಹೊಂದುತ್ತದೆ ” ಬ್ರಿಜ್‌ ಭೂಷಣ್‌ ಕಿಡಿ ಕಾರಿದ್ದಾರೆ.

ಇದನ್ನೂ ಓದಿ Haryana Election Result : ರಾಹುಲ್ ಗಾಂಧಿ ಮನೆಗೆ 1 ಕೆ.ಜಿ ಜಿಲೇಬಿ ಕಳುಹಿಸಿಕೊಟ್ಟ ಹರಿಯಾಣ ಬಿಜೆಪಿ

ಬ್ರಿಜ್​ ಭೂಷಣ್​ ವಿರುದ್ಧದ ಪ್ರತಿಭಟನೆ ವೇಳೆ ವಿನೇಶ್​ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಅಲ್ಲದೆ ತಮಗೆ ನೀಡಿದ್ದ ಖೇಲ್​ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ದೆಹಲಿಯ ಕರ್ತವ್ಯ ಪಥದಲ್ಲಿ ತ್ಯಜಿಸುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಜೂನ್​ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ (354, 354 ಎ ಮತ್ತು 354 ಡಿ) ಅಡಿ ಬ್ರಿಜ್‌ ಭೂಷಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದರು. ಪ್ರಕರಣದಲ್ಲಿ ಬ್ರಿಜ್‌ ಭೂಷಣ್‌ ಜಾಮೀನು ಪಡೆದಿದ್ದಾರೆ.