Thursday, 12th December 2024

Vinesh Phogat : ಒಲಿಂಪಿಕ್ಸ್‌ ಹಿನ್ನಡೆ ಬಳಿಕ ಮೋದಿ ಕರೆಯನ್ನೇ ತಿರಸ್ಕರಿಸಿದ್ದ ವಿನೇಶ್‌ ಫೋಗಟ್‌

Vinesh Phogat

ನವದೆಹಲಿ: ಪ್ಯಾರಿಸ್ 2024 ಒಲಿಂಪಿಕ್ಸ್‌ನಿಂದ ತೂಕದ ಹೆಚ್ಚಳದ ಕಾರಣಕ್ಕೆ ಅನರ್ಹಗೊಂಡ ಬಳಿಕ ಪ್ರಧಾನಿ ಮೋದಿ (Narendra Modi) ಜತೆ ಮಾತನಾಡಲು ಮಹಿಳಾ ಕುಸ್ತಿಪಟು ವಿನೇಶ್‌ ಫೋಗಟ್ (Vinesh Phogat) ನಿರಾಕರಿಸಿದ್ದರೆಂಬುದು ಇದೀಗ ಬಹಿರಂಗಗೊಂಡಿದೆ. ಇದೀಗ ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವಿನೇಶ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಜುಲಾನಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಫೋಗಟ್, ತನ್ನ ಭಾವನೆಗಳು ಮತ್ತು ಪ್ರಯತ್ನಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದು ಇಷ್ಟವಿರಲಿಲ್ಲ. ಹೀಗಾಗಿ ಅವರ ಕರೆಯನ್ನು ನಿರಾಕರಿಸಿದ್ದೆ ಎಂದು ಹೇಳಿದ್ದಾರೆ.

ಪ್ರಧಾನಿಯಿಂದ ಕರೆ ಬಂದಿತ್ತು ಆದರೆ ನಾನು ಮಾತನಾಡಲು ನಿರಾಕರಿಸಿದೆ. ಕರೆ ನೇರವಾಗಿ ನನಗೆ ಬರಲಿಲ್ಲ ಆದರೆ ಅಲ್ಲಿದ್ದ ಭಾರತೀಯ ಅಧಿಕಾರಿಗಳು ಮೋದಿ ಮಾತನಾಡಲು ಬಯಸುತ್ತಾರೆ ಎಂದು ನನಗೆ ತಿಳಿಸಿದರು. ನಾನು ಸಿದ್ಧನಾಗಿದ್ದೆ. ಆದರೆ, ಅವರು ಕೆಲವು ಷರತ್ತುಗಳನ್ನು ವಿಧಿಸಿದರು. ನನ್ನ ತಂಡದಿಂದ ಯಾರೂ ಹಾಜರಾಗಬಾರದು. ಅವರ ಕಡೆಯಿಂದ ಇಬ್ಬರು ಸಂಭಾಷಣೆಯನ್ನುಸೋಶಿಯಲ್ ಮಿಡಿಯಾಗಾಗಿ ರೆಕಾರ್ಡ್‌ ಮಾಡುತ್ತಾರೆ ಎಂದರು. ನಾನು ಅದಕ್ಕೆ ನಿರಾಕರಿಸಿದೆ ಎಂದು ವಿನೇಶ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: MS Dhoni: ಧೋನಿ ಐಪಿಎಲ್‌ ಭವಿಷ್ಯದ ಬಗ್ಗೆ ಮಹತ್ವದ ಕೇಳಿಕೆ ಕೊಟ್ಟ ಫ್ರಾಂಚೈಸಿ ಸಿಇಒ

ನನ್ನ ಭಾವನೆಗಳು ಮತ್ತು ಕಠಿಣ ಪರಿಶ್ರಮವನ್ನು ಸಾಮಾಜಿಕ ಮಾಧ್ಯಮದಲ್ಲಿ ಗೇಲಿ ಮಾಡುವುದು ನನಗೆ ಇಷ್ಟವಿರಲಿಲ್ಲ. ಸಂಭಾಷಣೆಯನ್ನು ಪ್ರಚಾರ ಮಾಡುವ ಷರತ್ತು ಇಲ್ಲದೆ ಪ್ರಧಾನಿಯವರ ನಿಜವಾಗಿಯೂ ಕರೆ ಮಾಡಿದ್ದರೆ ನಾನು ಮಾತನಾಡುತ್ತಿದ್ದೆ ಎಂದು ಫೋಗಟ್ ಹೇಳಿದ್ದಾರೆ.

ನಿಜವಾಗಿಯೂ ಕ್ರೀಡಾಪಟುಗಳ ಬಗ್ಗೆ ಕಾಳಜಿ ಹೊಂದಿದ್ದರೆ, ಅವರು ಅದನ್ನು ರೆಕಾರ್ಡ್ ಮಾಡದೆ ಕರೆ ಮಾಡಬಹುದಿತ್ತು, ಮತ್ತು ನಾನು ಕೃತಜ್ಞನಾಗಿರುತ್ತಿದ್ದೆ ಎಂದು ಅವರು ಹೇಳಿದರು, ನಿರೂಪಣೆಯನ್ನು ನಿಯಂತ್ರಿಸಲು ಮೋದಿಯವರ ಕಚೇರಿ ಷರತ್ತುಗಳನ್ನು ವಿಧಿಸಿದೆ ಹೇಳಿದರು.

ಹಳೆಯದನ್ನು ಕೆದಕುವ ಭಯ

ನನ್ನೊಂದಿಗೆ ಮಾತನಾಡಿದರೆ ಕಳೆದ ಎರಡು ವರ್ಷಗಳ ಹಿಂದಿನ ವಿಷಯ ಕೇಳುತ್ತೇನೆ ಎಂಬ ಭಯ ಅವರಿಗೆ ಇತ್ತು. ಅದಕ್ಕಾಗಿಯೇ ರೆಕಾರ್ಡ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅದನ್ನು ಬಳಿಕ ಎಡಿಟ್ ಮಾಡಿ ಬಿಡುವ ಉದ್ದೇಶ ಅವರದ್ದಾಗಿತ್ತು ಎಂದು ಫೋಗಟ್ ಹೇಳಿದ್ದಾರೆ.

ಕೇವಲ 100 ಗ್ರಾಂ ತೂಕ ಹೆಚ್ಚಿದ್ದಕ್ಕಾಗಿ ಒಲಿಂಪಿಕ್ಸ್‌ನಲ್ಲಿ 50 ಕೆ.ಜಿ ಕುಸ್ತಿ ಫೈನಲ್‌ನಿಂದ ಅನರ್ಹಗೊಂಡ ಫೋಗಟ್, ಆಗಿನ ಕುಸ್ತಿ ಫೆಡರೇಶನ್ ಮುಖ್ಯಸ್ಥ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ಬಗ್ಗೆ ಮೋದಿಯವರ ಮೌನದ ಬಗ್ಗೆ ಪ್ರಶ್ನಿಸಿದ್ದಾರೆ. ವಿನೇಶ್ ಮತ್ತು ಒಲಿಂಪಿಕ್ ಕಂಚಿನ ಪದಕ ವಿಜೇತ ಸಾಕ್ಷಿ ಮಲಿಕ್ ಸೇರಿದಂತೆ ಇತರ ಕುಸ್ತಿಪಟುಗಳು ಬ್ರಿಜ್‌ಭೂಷಣ್‌ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ್ದರು.