Friday, 20th September 2024

Vinesh Phogat: ಪಿ.ಟಿ. ಉಷಾ ವಿರುದ್ಧ ಗಂಭೀರ ಆರೋಪ ಮಾಡಿದ ವಿನೇಶ್‌

Vinesh Phogat

ನವದೆಹಲಿ: ಇತ್ತೀಚೆಗಷ್ಟೇ ಕಾಂಗ್ರೆಸ್‌(Indian National Congress) ಸೇರ್ಪಡೆಯಾದ ಕುಸ್ತಿಪಟು ವಿನೇಶ್‌ ಫೋಗಟ್‌(Vinesh Phogat) ಹರಿಯಾಣ ವಿಧಾನಸಭೆ(Haryana polls) ಚುನಾವಣೆಯಲ್ಲಿ ಜುಲಾನಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಈಗಾಗಲೇ ಚುನಾವಣ ಪ್ರಚಾರ ಆರಂಭಿಸಿರುವ ವಿನೇಶ್‌, ಐಒಎ ಅಧ್ಯಕ್ಷೆ ಪಿ.ಟಿ. ಉಷಾ(PT Usha) ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ ವೇಳೆ ನಾನು(ವಿನೇಶ್‌) ನಿರ್ಜಲೀಕರಣದಿಂದ ಆಸ್ಪತ್ರೆ ಸೇರಿದ್ದಾಗ ಪಿಟಿ ಉಷಾ ಅವರು ಆರೋಗ್ಯ ವಿಚಾರಿಸುತ್ತಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ರಾಜಕೀಯ ಉದ್ದೇಶಕ್ಕೋಸ್ಕರ ತೆಗೆದ ಫೋಟೊ ಎಂದು ವಿನೇಶ್‌ ಹೇಳಿದ್ದಾರೆ.

ಸ್ಥಳೀಯ ಸುದ್ದಿ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ವಿನೇಶ್‌, “ನನಗೆ ಪ್ಯಾರಿಸ್‌ನಲ್ಲಿ ಯಾವ ಬೆಂಬಲ ಸಿಕ್ಕಿದೆ ಎಂದು ನನಗೆ ತಿಳಿದಿಲ್ಲ. ಪಿಟಿ ಉಷಾ ಮೇಡಂ ನನ್ನನ್ನು ಅಂದು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಒಂದು ಫೋಟೋ ಕ್ಲಿಕ್ಕಿಸಲಾಯಿತು. ಈ ಫೋಟೊವನ್ನು ಉಷಾ ಮೇಡಂ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆದರೆ, ಈ ಫೋಟೊದ ಹಿಂದೆ ರಾಜಕೀಯ ನಟನೆ ಇತ್ತು” ಎಂದು ವಿನೇಶ್‌ ಆರೋಪ ಮಾಡಿದ್ದಾರೆ.

ಅಂದು ವಿನೇಶ್‌ರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ್ದ ಪಿ.ಟಿ. ಉಷಾ, ವಿನೇಶ್‌ಗೆ ಭಾರತೀಯ ಒಲಿಂಪಿಕ್ ಸಂಸ್ಥೆ, ಭಾರತ ಸರ್ಕಾರ ಮತ್ತು ದೇಶದಿಂದ ಸಂಪೂರ್ಣ ಬೆಂಬಲ ಸಿಗಲಿದೆ. ಜತೆಗೆ ಎಲ್ಲಾ ರೀತಿಯ ವೈದ್ಯಕೀಯ ಮತ್ತು ಭಾವನಾತ್ಮಕ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಇದೀಗ ವಿನೇಶ್‌ ಅವರು ಪಿ.ಟಿ. ಉಷಾ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಪಿ.ಟಿ. ಉಷಾ ಬಿಜೆಪಿ ಪಕ್ಷದ ರಾಜ್ಯಸಭಾ ಸದಸ್ಯೆಯಾಗಿದ್ದಾರೆ. ಈ ಕಾರಣಕ್ಕೆ ವಿನೇಶ್‌ ಅವರು ಪಿ.ಟಿ. ಉಷಾ ವಿರುದ್ಧ ಆರೋಪ ಮಾಡಿದಂತಿದೆ.

ವಿನೇಶ್‌ ಪೋಗಟ್‌ ಸ್ಪರ್ಧಿಸುತ್ತಿರುವ ಜುಲಾನ ಕ್ಷೇತ್ರದಲ್ಲಿ ಬಿಜೆಪಿ ಕ್ಯಾ. ಯೋಗೇಶ್‌ ಭೈರಾಗಿ ಅವರನ್ನು ಕಣಕ್ಕಿಳಿಸಿದೆ. ಆ ಮೂಲಕ ಎರಡು ಪಕ್ಷಗಳ ನಡುವೆ ನೆಕ್‌ ಟು ನೆಕ್‌ ಫೈಟ್‌ ಏರ್ಪಡಲಿದೆ. ಇನ್ನು ಯೋಗೇಶ್‌ ಬೈರಾಗಿ ಅವರು ರಾಜ್ಯ ಬಿಜೆಪಿ ಯುವಮೋರ್ಚಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅಲ್ಲದೇ ಪಕ್ಷದ ಹರ್ಯಾಣ ಕ್ರೀಡಾ ಸೆಲ್‌ನ ಉಪಾಧ್ಯಕ್ಷರೂ ಹೌದು.

ಇದನ್ನೂ ಓದಿ Haryana Polls: ಬಿಜೆಪಿ ಎರಡನೇ ಅಭ್ಯರ್ಥಿ ಪಟ್ಟಿ ರಿಲೀಸ್‌; ವಿನೇಶ್‌ ಪೋಗಟ್‌ ವಿರುದ್ಧ ಕಣಕ್ಕಿಳಿಯುವವರು ಇವರೇ ನೋಡಿ

ಅರ್ಹತಾ ಸುತ್ತಿಗೂ ಮುನ್ನ ವಿನೇಶ್‌ ಅವರ ತೂಕವನ್ನು ಲೆಕ್ಕ ಮಾಡಲಾಗಿತ್ತು. ಈ ವೇಳೆ ಅವರು 49.9 ಕೆಜಿ ತೂಕವಿದ್ದರು. 3 ಬೌಟ್‌ಗಳು ಮುಗಿಯುವ ವೇಳೆಗೆ ಶಕ್ತಿ ಕಾಪಾಡಿಕೊಳ್ಳಲು ಹೈ ಎನರ್ಜಿ ಆಹಾರ ಸೇವಿಸಿದ ಕಾರಣ ಅವರ ತೂಕ 2.8 ಕೆಜಿ ಹೆಚ್ಚಳವಾಗಿತ್ತು. ಈ 2.8 ಕೆಜಿಯನ್ನು ಕಡಿಮೆ ಮಾಡಲು ವಿನೇಶ್‌ ರಾತ್ರಿಯಿಡೀ ಯಾವುದೇ ಆಹಾರ ಸೇವಿಸದೇ, ಸೈಕ್ಲಿಂಗ್‌ ನಡೆಸಿ, ಸ್ಕಿಪ್ಪಿಂಗ್‌ ಮಾಡಿದ್ದರು. ತೂಕ ಇಳಿಸಲು ಬೇಕಾಗುವ ಎಲ್ಲ ಕಸರತ್ತುಗಳನ್ನು ಕೈಗೊಂಡಿದ್ದರು. ಈ ಮೂಲಕ ಅವರು ಸಾಕಷ್ಟು ತೂಕ ಇಳಿಸಿದ್ದರು. ಕೊನೆ ಕ್ಷಣದಲ್ಲಿ ಅವರ ಕೂದಲು ಕತ್ತರಿಸಿ, ಬಟ್ಟೆಗಳ ಗಾತ್ರವನ್ನು ಕುಗ್ಗಿಸಿ ಪರೀಕ್ಷೆಗೆ ಕಳುಹಿಸಲಾಯಿತು. ಆದರೂ 100 ಗ್ರಾಂ ಹೆಚ್ಚಿದ್ದ ಕಾರಣ ಅನರ್ಹಗೊಂಡರು. ಅನರ್ಹತೆಯ ವಿರುದ್ಧ ಅವರು ಸಲ್ಲಿದ್ದ ಮನವಿಯನ್ನು ಕೂಡ ಆರ್ಬಿಟ್ರೇಶನ್ ಕೋರ್ಟ್ (CAS) ತಿರಸ್ಕರಿಸಿತ್ತು. ಹೀಗಾಗಿ ಪದಕ ವಂಚಿತರಾದರು.