Monday, 18th November 2024

Viral News: ಶಾಲಾ ಅಸೆಂಬ್ಲಿಗೆ ತಡವಾಗಿ ಬಂದ 18 ವಿದ್ಯಾರ್ಥಿನಿಯರ ಕೂದಲಿಗೆ ಕತ್ತರಿ; ಶಿಕ್ಷಕಿಯ ಕೃತ್ಯಕ್ಕೆ ಪೋಷಕರು ಕಿಡಿ

Viral News

ಹೈದರಾಬಾದ್‌: ಶಾಲಾ ಪ್ರಾರ್ಥನೆಗೆ ತಡವಾಗಿ ಬಂದರೆಂಬ ಕಾರಣಕ್ಕೆ ಬರೋಬ್ಬರಿ 18 ವಿದ್ಯಾರ್ಥಿಗಳ ಜತೆ ಶಿಕ್ಷಕಿಯೊಬ್ಬರು ಬಹಳ ಅಮಾನುಷವಾಗಿ ನಡೆದುಕೊಂಡ ಘಟನೆ ಆಂ‍ಧ್ರ ಪ್ರದೇಶದಲ್ಲಿ ನಡೆದಿದೆ. ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಬೆಳಗ್ಗೆ ಅಸೆಂಬ್ಲಿಗೆ ತಡವಾಗಿ ಬಂದ ವಿದ್ಯಾರ್ಥಿಗಳ ತಲೆಗೂದಲನ್ನು ಕತ್ತರಿಸಿದ ಆರೋಪ ಕೇಳಿ ಬಂದಿದೆ(Viral News).

ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ, ವಸತಿ ಬಾಲಕಿಯರ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯರ ಸುರಕ್ಷತೆ, ಭದ್ರತೆ ಹಾಗೂ ಯೋಗಕ್ಷೇಮದ ಹೊಣೆ ಹೊತ್ತಿರುವ ಶಿಕ್ಷಕಿಯನ್ನು ಸಾಯಿ ಪ್ರಸನ್ನ ವಿರುದ್ಧ ಈ ಅಮಾನುಷ ಕೃತ್ಯದ ಆರೋಪ ಕೇಳಿಬಂದಿದೆ. ನೀರಿನ ಕೊರತೆಯಿಂದಾಗಿ ಬೆಳಗ್ಗೆ ವಿದ್ಯಾರ್ಥಿಗಳು ಅಸೆಂಬ್ಲಿಗೆ ತಡವಾಗಿ ಬಂದಿದ್ದಾರೆ.

ಇದರಿಂದ ಕೋಪಕೊಂಡ ಶಿಕ್ಷಕಿ ಪ್ರಸನ್ನ 18 ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸಿದ್ದಾರೆ ಎಂದು ವರದಿಯಾಗಿದೆ. ಸಾಲದೆನ್ನುವಂತೆ ನಾಲ್ವರು ವಿದ್ಯಾರ್ಥಿಗಳ ಮೇಲೆ ದೈಹಿಕ ಹಲ್ಲೆ ನಡೆಸಿ, ಬಿಸಿಲಿನಲ್ಲಿ ನಿಲ್ಲುವಂತೆ ಮಾಡಿದ್ದಾರೆ. ವರದಿಗಳ ಪ್ರಕಾರ, ಘಟನೆಯ ಬಗ್ಗೆ ಯಾರೊಂದಿಗೂ ಮಾತನಾಡಬೇಡಿ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಪೋಷಕರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಲು ತಾನು ಈ ಕ್ರಮ ಕೈಗೊಂಡಿದ್ದೇನೆ ಎಂದು ಪ್ರಸನ್ನ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಅವರಿಂದ ವಿವರಣೆ ಕೇಳಲಾಗಿದೆ.

ಉತ್ತರ ಪ್ರದೇಶದ ಅಲಿಗಢದಲ್ಲೂ ಇಂತಹದ್ದೇ ಒಂದು ಭಯಾನಕ ಘಟನೆ ವರದಿಯಾಗಿತ್ತು. ಶಾಲಾ ಚೀಲವನ್ನು ಮರೆತಿದ್ದಕ್ಕಾಗಿ ಪಾಪಿ ಶಿಕ್ಷಕನೋರ್ವ ಅಪ್ರಾಪ್ತ ಬಾಲಕನನ್ನು ವಿವಸ್ತ್ರಗೊಳಿಸಿ, ಕ್ರೂರವಾಗಿ ಥಳಿಸಿ ವಿದ್ಯುತ್ ಶಾಕ್ ನೀಡಿದ ಆಘಾತಕಾರಿ ಘಟನೆ ನಡೆದಿತ್ತು.

ಏಳು ವರ್ಷದ ಬಾಲಕ ಅಳುತ್ತಾ ಮನೆಗೆ ಬಂದು ಘಟನೆಯ ಬಗ್ಗೆ ತಾಯಿಗೆ ತಿಳಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದ್ದು, ಪೋಷಕರು ಶಿಕ್ಷಕನ ವಿರುದ್ಧ ಪೊಲೀಸರು ದೂರು ನೀಡಿದ್ದಾರೆ. ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಯುಕೆಜಿ ವಿದ್ಯಾರ್ಥಿ ಮನೆಯಲ್ಲಿ ತನ್ನ ಶಾಲಾ ಚೀಲವನ್ನು ಮರೆತಿದ್ದಾನೆ ಎಂದು ಶಿಕ್ಷಕ ಅವನನ್ನು ನಿರ್ದಯವಾಗಿ ಥಳಿಸಿ ಕರೆಂಟ್‌ ಶಾಕ್‌ ನೀಡಿದ್ದಾನೆ ಎಂದು ಪೋಷಕರು ದೂರಿದ್ದಾರೆ.

ಬಾಲಕನ್ನು ವಿವಸ್ತ್ರಗೊಳಿಸಿ ಶಿಕ್ಷಕ ಮನಸ್ಸೋಇಚ್ಛೆ ಥಳಿಸಿದ್ದು ಮಾತ್ರವಲ್ಲದೇ ವಿದ್ಯುತ್‌ ಶಾಕ್‌ ಕೂಡ ನೀಡಿದ್ದಾರೆ. ಇದರಿಂದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಪೋಷಕರು ಶಾಲಾ ಆವರಣಕ್ಕೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಪೋಷಕರ ಆರೋಪವನ್ನು ಶಾಲಾ ಪ್ರಾಂಶುಪಾಲರು ತಿರಸ್ಕರಿಸಿದ್ದಾರೆ. ಇದು ಸುಳ್ಳು ಆರೋಪ, ಅದಕ್ಕೆ ಯಾವುದೇ ಆಧಾರ ಇಲ್ಲ. ಅಲ್ಲದೇ ಅಗತ್ಯವಿದ್ದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವುದಾಗಿ ಪ್ರಾಂಶುಪಾಲರು ಪೊಲೀಸರಿಗೆ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Bangladesh Unrest: ಉಗ್ರ ಸಂಘಟನೆ ಮುಖಂಡನ ಜತೆ ಯೂನಸ್‌ ಫೊಟೋ ವೈರಲ್‌-ಭಾರೀ ವಿವಾದ