Tuesday, 22nd October 2024

Viral News: ಒಂದೇ ವೇದಿಕೆ ಮೇಲೆ ಮಿಂಚಿದ ಆರು ತಲೆಮಾರಿನ 141 ಕುಟುಂಬದ 411 ಸದಸ್ಯರು!

Viral News

ಹಿಂದಿನ ಕಾಲದಲ್ಲಿ ಎಲ್ಲಾ ತಲೆಮಾರಿನ ಜನ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಎಲ್ಲರ ಮನೆಯಲ್ಲೂ ಜನ ತುಂಬಿ ತುಳುಕುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಹಣಕ್ಕಾಗಿ, ಆಸ್ತಿಗಾಗಿ ಜನ ಕಿತ್ತಾಡಿಕೊಂಡು ಬೇರೆ ಬೇರೆಯಾಗುತ್ತಿದ್ದಾರೆ. ಹಾಗಾಗಿ ಒಂದೇ ಮನೆಯಲ್ಲಿ ಇರುವುದು ಬಿಡಿ, ಕೆಲವೊಮ್ಮೆ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಲೂ ಇಷ್ಟಪಡುವುದಿಲ್ಲ. ಅದರಲ್ಲೂ ಈ ಮೊಬೈಲ್ ಪೋನ್‍ಗಳು ಬಂದ ಮೇಲೆ ಹತ್ತಿರದ ಸಂಬಂಧಿಕರು ಸಹ ಪರಸ್ಪರ ಪರಿಚಯ ಮಾಡಿಕೊಳ್ಳುವಂತಹ ದುಃಸ್ಥಿತಿಗೆ ಬಂದು ಬಿಟ್ಟಿದೆ. ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ  ಆರು ತಲೆಮಾರುಗಳ 141 ಕುಟುಂಬಗಳ 411 ಸದಸ್ಯರು ಒಂದೇ ವೇದಿಕೆಯಲ್ಲಿ ಒಟ್ಟಾಗಿ  ಸಂತೋಷದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.

ಸೂರ್ಯಪೇಟ್ ಜಿಲ್ಲೆಯ ವೀರಯ್ಯ ಮತ್ತು ಲಕ್ಷ್ಮಮ್ಮ ದಂಪತಿಗೆ ಮೂವರು ಪುತ್ರರು, ನಾಲ್ವರು ಪುತ್ರಿಯರಿದ್ದಾರೆ. ವೀರಯ್ಯ ಮತ್ತು ಲಕ್ಷ್ಮಮ್ಮ ದಿನಸಿ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತ ತಮ್ಮ  ಎಲ್ಲಾ ಮಕ್ಕಳಿಗೆ ಮದುವೆ ಮಾಡಿಸಿದ್ದರು. ಇದೀಗ ಈ ಕುಟುಂಬದಲ್ಲಿ ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಸೇರಿ ಒಟ್ಟು 411 ಸದಸ್ಯರಿದ್ದಾರೆ. ಅವರಲ್ಲಿ ಹೆಚ್ಚಿನವರು ವ್ಯಾಪಾರ ಮಾಡುತ್ತಿದ್ದರೆ, ಅನೇಕರು ಉದ್ಯೋಗಕ್ಕಾಗಿ ವಿದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದಾರೆ.

ರಾಚಕೊಂಡ ವೀರಯ್ಯ ಮತ್ತು ಲಕ್ಷ್ಮಮ್ಮ ಏಳು ವರ್ಷಗಳ ಹಿಂದೆ ನಿಧನರಾದರು. ಅವರ ನೆನಪಿಗಾಗಿ ಕುಟುಂಬದವರೆಲ್ಲಾ ಸೇರಿ ಮತ್ತಪಲ್ಲಿಯಲ್ಲಿ ಭಾವಪೂರ್ಣ ಶೃದ್ಧಾಂಜಲಿಯ ಸಮಾರಂಭ ನಡೆಸಿದ್ದಾರೆ.

ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡ ಯುವಕ; ವಿಡಿಯೊ ವೈರಲ್

ಈ ಕುಟುಂಬದ 367 ಜನರು ಅಗಲಿದ ದಂಪತಿಗೆ ಗೌರವ ಸಲ್ಲಿಸುವ ಮೂಲಕ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಕುಟುಂಬಕ್ಕೆ ಸೇರಿದ ರಾಚಕೊಂಡ ಶ್ರೀನಿವಾಸ ರಾವ್ ಅವರು, ಕಳೆದ ಮೂರು ತಿಂಗಳಿನಿಂದ ಎಲ್ಲರಿಗೂ ಆಹ್ವಾನ ನೀಡಿ  ಅಗತ್ಯ ವ್ಯವಸ್ಥೆಗಳನ್ನು ಮಾಡಿ ಮತ್ತು ಈ ಸಮಾರಂಭವನ್ನು ಭವ್ಯವಾಗಿ ಆಚರಿಸಿದ್ದಾರೆ.