Sunday, 24th November 2024

Viral News: ಇಂಧನ, ವಿದ್ಯುತ್‌, ಎಂಜಿನ್‌ ಯಾವುದೂ ಇಲ್ಲದೆ ಚಲಿಸುತ್ತೆ ಈ ಬೈಕ್‌; ವಿಡಿಯೊ ನೋಡಿ

Viral News

ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌ನಿಂದ ಓಡುವ ವಾಹನ ಎಲ್ಲಡೆ ಕಂಡು ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳೂ ಜನಪ್ರಿಯವಾಗುತ್ತಿದೆ. ಅಂದರೆ ಸೈಕಲ್‌ ಹೊರತು ಪಡಿಸಿ ಇತರ ವಾಹನ ಚಲಿಸಲು ಇಂಧನ ಅಥವಾ ವಿದ್ಯುಚ್ಛಕ್ತಿ ಬೇಕೇ ಬೇಕು. ಆದರೆ ಇದ್ಯಾವುದೂ ಇಲ್ಲದೆ ಬೈಕ್‌ ಓಡುವಂತಿದ್ದರೆ? ಇಂತಹ ಆಲೋಚನೆಯೇ ರೋಮಾಂಚನ ಉಂಟು ಮಾಡುತ್ತದೆ. ಆದರೆ ಇದೆಲ್ಲ ಕನಸಲ್ಲಿ ಮಾತ್ರ ನಡೆಯಬಹುದು ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಹೌದು, ಇಲ್ಲೊಂದು ಬೈಕ್‌ ಎಂಜಿನ್‌, ಪೆಟ್ರೋಲ್‌ ಟ್ಯಾಂಕ್‌ ಇಲ್ಲದೆ ಓಡುತ್ತದೆ. ಅದು ಹೇಗೆ ಸಾಧ್ಯ? ನಿಮ್ಮ ಪ್ರಶ್ನೆಗೆ ಈ ವೈರಲ್‌ ವಿಡಿಯೊದಲ್ಲಿದೆ ಉತ್ತರ (Viral News).

ಸೋಶಿಯಲ್‌ ಮೀಡಿಯಾದಲ್ಲಿ ಪ್ರತಿದಿನ ಒಂದಲ್ಲ ಒಂದು ವಿಡಿಯೊ ಗಮನ ಸೆಳೆಯುತ್ತದೆ. ಅದರಲ್ಲಿಯೂ ವಿಶೇಷ ಎನಿಸುವ ವಿಡಿಯೊಗಳು ವೈರಲ್‌ ಆಗುತ್ತವೆ. ಸದ್ಯ ವೈರಲ್‌ ಆಗುತ್ತಿರುವ ಈ ವಿಡಿಯೊ ನೋಡಿ ನೆಟ್ಟಿಗರು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ. ಈ ಬೈಕ್‌ ಇಂಧನ ಇಲ್ಲದೆ, ವಿದ್ಯುಚ್ಛಕ್ತಿ ಸಹಾಯವಿಲ್ಲದೆ ಮತ್ತು ಎಂಜಿನ್‌ ಇಲ್ಲದೆ ಚಲಿಸುತ್ತದೆ. ಸದ್ಯ ಈ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗುತ್ತಿದೆ.

ವಿಡಿಯೊದಲ್ಲಿ ಏನಿದೆ?

ರಸ್ತೆಯೊಂದರಲ್ಲಿ ಯುವಕನೊಬ್ಬ ಇಂಧನ ಟ್ಯಾಂಕ್‌, ಎಂಜಿನ್‌ ಇಲ್ಲದ ಬೈಕ್‌ ಚಲಾಯಿಸಿಕೊಂಡು ಹೋಗುತ್ತಾನೆ. ಹಾಗಂತ ಅವನು ಪೆಡಲ್‌ ಅನ್ನೂ ತುಳಿಯುತ್ತಿಲ್ಲ. ಆದರೂ ಈ ಬೈಕ್ ರಸ್ತೆಯಲ್ಲಿ ಗಾಳಿಯ ಸಹಾಯದಿಂದ ಚಲಿಸುತ್ತದೆ. ಅದೇ ಸಮಯದಲ್ಲಿ ಈ ಬೈಕ್ ಸವಾರನ ಪಕ್ಕದಿಂದ ಸಾಗುವ ಮತ್ತೊಬ್ಬ ವಾಹನ ಸವಾರ, “ಇದು ಯಾವ ಬೈಕ್ ಮತ್ತು ಹೇಗೆ ಚಲಿಸುತ್ತಿದೆ?” ಎಂದು ಕೇಳಿದ್ದಾನೆ. ಅದಕ್ಕೆ ಈ ವಿಶೇಷ ಬೈಕ್‌ ಸವಾರ, ʼʼಗಾಳಿಯಿಂದ ಓಡುತ್ತಿದೆʼʼ ಎಂದು ಉತ್ತರಿಸುತ್ತಾನೆ. ಸದ್ಯ ಈ ವಿಡಿಯೊಕ್ಕೆ 75 ಸಾವಿರಕ್ಕಿಂತ ಅಧಿಕ ಲೈಕ್‌ ಸಂದಾಯವಾಗಿದೆ.

ಬೈಕ್‌ ಹೇಗೆ ಚಲಿಸುತ್ತದೆ?

ಇಂಧನ ಇಲ್ಲದೆ ಬೈಕ್‌ ಚಲಿಸುವುದಕ್ಕೆ ಯಾವುದೇ ವೈಜ್ಞಾನಿಕ ಕಾರಣ ವಿವರಿಸಲಾಗಿಲ್ಲ. ಬೈಕ್‌ ಅನ್ನು ಹಿಂದಿನಿಂದ ತಳ್ಳಿ ಬಿಟ್ಟಿದ್ದಾರೆ. ಈ ಫೋರ್ಸ್‌ಗೆ ಚಲಿಸುವ ವೇಳೆ ವಿಡಿಯೊ ಮಾಡಲಾಗಿದೆ ಎಂದು ಹಲವರು ಕಾಮೆಂಟ್‌ ಮೂಲಕ ತಿಳಿಸಿದ್ದಾರೆ.

ನೆಟ್ಟಿಗರು ಏನಂದ್ರು?

ಸದ್ಯ ಈ ವಿಡಿಯೊ ನೋಡಿದ ನೆಟ್ಟಿಗರು ತಹೇವಾರಿ ಕಾಮೆಂಟ್‌ ಮಾಡುತ್ತಿದ್ದಾರೆ. ಹಲವರು ಬೈಕ್‌ ಸವಾರನ ಕಾಲೆಳೆದಿದ್ದಾರೆ. ʼʼಡೇವಿಡ್‌ ಸನ್‌ 2000 ಸಿಸಿʼʼ ಎಂದು ಒಬ್ಬರು ಹೇಳಿದ್ದಾರೆ. ʼʼಇದು ರಾಯಲ್‌ ಇನ್‌ವಿಸಿಬಲ್‌ʼʼ ಎಂದು ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ. ʼʼಹಾಫ್‌ ಬುಲೆಟ್‌ʼʼ ಎನ್ನುವುದು ಮತ್ತೊಬ್ಬರ ಅಭಿಪ್ರಾಯ. ʼʼಏರ್‌ ಬುಲೆಟ್‌ 82 ಪ್ರೊ ಮ್ಯಾಕ್ಸ್‌ʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ʼʼಈಗಾಗಲೇ ಎಲಾನ್‌ ಮಸ್ಕ್‌ 99 ಬಾರಿ ಕಾಲ್‌ ಮಾಡಿದ್ದಾನೆʼʼ ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿದ್ದಾರೆ. ಹಲವರು ನಗುವ ಎಮೋಜಿ ಮೂಲಕ ಮಜವಾಗಿ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಹಲವರ ಗಮನ ಸೆಳೆದಿದೆ.

ಈ ಸುದ್ದಿಯನ್ನೂ ಓದಿ: Viral Video: ಕೋತಿ ಚೇಷ್ಠೆಗೆ ಕಾರಿನ ಸನ್‌​ರೂಫ್ ಗ್ಲಾಸ್‌ ಪುಡಿ ಪುಡಿ! ವಿಡಿಯೊ ನೋಡಿ