Sunday, 24th November 2024

Viral News: ʻದೃಶ್ಯಂʼ ಸಿನಿಮಾದಂತೆ ಗರ್ಲ್‌ಫ್ರೆಂಡ್‌ನ ಹತ್ಯೆ; ಸೈನಿಕನ ಮರ್ಡರ್‌ ಮಿಸ್ಟ್ರಿ ಕೇಳಿ ದಂಗಾದ ಪೊಲೀಸರು

Viral News

ನಾಗ್ಪುರ: ದೃಶ್ಯಂ ಸಿನಿಮಾ(Drishyam Cinema) ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಮಟ್ಟದಲ್ಲಿ ಹೆಸರು ಮಾಡಿದಂತಹ ಸಿನಿಮಾ. ಮೂಲ ಮಲಯಾಳಂ ಚಿತ್ರವಾಗಿರುವ ಇದು ತಮಿಳು, ಕನ್ನಡ, ತೆಲುಗು, ಹಿಂದಿ ಹೀಗೆ ಹಲವು ಭಾಷೆಗಳಲ್ಲಿ ರಿಮೇಕ್‌ಗೊಂಡು ಮರ್ಡರ್ ಮಿಸ್ಟ್ರಿ ಕಥಾವಸ್ತು ಮೂಲಕ ಪ್ರೇಕ್ಷಕರನ್ನು ರಂಜಿಸಿ ಸಿನಿಮಾ ಇದು. ಈ ಸಿನಿಮಾ ಎಷ್ಟು ಜನಪ್ರಿಯತೆ ಪಡೆಯಿತೋ ಅಷ್ಟೇ ಇದರಿಂದ ಪ್ರೇರಿತಗೊಂಡು ಅಪರಾಧ ಕೃತ್ಯ ಎಸಗಿರುವ ಘಟನೆಗಳ ಸರಮಾಲೆಯೇ ಇದೀಗ ಅಂತಹದ್ದೇ ಒಂದು ಘಟನೆ ನಾಗ್ಪುರದಲ್ಲಿ ನಡೆದಿದೆ. ಯೋಧನೋರ್ವ ದೃಶ್ಯಂ ಸಿನಿಮಾ ಮಾದರಿಯಲ್ಲೇ ತನ್ನ ಪ್ರೇಯಸಿಯನ್ನು ಕೊಂದು ಮೃತದೇಹವನ್ನು ಹೂತು(Viral News) ಹಾಕಿದ್ದಾನೆ.

ಏನಿದು ಘಟನೆ?

ಆರೋಪಿಯನ್ನು ಅಜಯ್ ವಾಂಖೆಡೆ (33) ಎಂದು ಗುರುತಿಸಲಾಗಿದ್ದು, ನಾಗ್ಪುರದ ಕೈಲಾಶ್ ನಗರ ಪ್ರದೇಶದ ನಿವಾಸಿ. ಈತನಿಗೆ ವಿವಾಹ ಪೋರ್ಟಲ್ ಮೂಲಕ ವಿಚ್ಛೇದಿತ ಮಹಿಳೆ ಜ್ಯೋತ್ಸ್ನಾ ಆಕ್ರೆ ಎಂಬಾಕೆಯ ಪರಿಚಯವಾಗಿತ್ತು. ಇವರಿಬ್ಬರ ನಡುವಿನ ಸ್ನೇಹ ನಿಧಾನವಾಗಿ ಪ್ರೇಮಕ್ಕೆ ಅರಳಿತ್ತು. ಅವರಿಬ್ಬರೂ ಮದುವೆಗೆ ನಿರ್ಧರಿಸಿದ್ದರು. ಆದರೆ ಅವರ ಮದುವೆಗೆ ವಾಂಖೆಡೆ ಕುಟುಂಬದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ವಾಂಖೆಡೆ ಮತ್ತೊರ್ವ ಹುಡುಗಿಯನ್ನು ಮದುವೆಯಾಗಿದ್ದ.

ಮದುವೆ ಬಳಿಕ ವಾಂಖೆಡೆ ಸಹಜವಾಗಿಯೇ ಜ್ಯೋತ್ಸ್ನಾಳನ್ನು ಕಡೆಗಣಿಸಲು ಶುರುಮಾಡಿದ್ದ. ಇದರಿಂದ ಬೇಸರಗೊಂಡಿದ್ದ ಜ್ಯೋತ್ಸ್ನಾ ಮತ್ತೆ ಮತ್ತೆ ಆತನಿಗೆ ಕರೆ ಮಾಡುತ್ತಿದ್ದಳು, ತನ್ನನ್ನು ಮದುವೆ ಆಗುವಂತೆ ಒತ್ತಾಯಿಸಿದ್ದಳು. ಇದೆಲ್ಲಾ ವಿಚಾರಗಳಿಂದ ಬೇಸತ್ತಿದ್ದ ವಾಂಖೆಡೆ ಆಕೆಯನ್ನು ತನ್ನ ಜೀವನದಿಂದ ಹೇಗಾದರೂ ಮಾಡಿ ತೊಲಗಿಸಬೇಕೆಂದು ಉದ್ದೇಶಿಸಿದ್ದ. ಕೊನೆಗೆ ಉಪಾಯವಾಗಿ ಆಕೆಯನ್ನು ತನ್ನ ಜಾಗಕ್ಕೆ ಕರೆಸಿಕೊಂಡು ಪಾನೀಯದಲ್ಲಿ ನಿದ್ದೆ ಮಾತ್ರೆ ಬೆರೆಸಿ ಕತ್ತು ಹಿಸುಕಿ ಕೊಂದಿದ್ದಾನೆ. ಇದಾದ ಬಳಿಕ ಆಕೆಯ ದೇಹವನ್ನು ನಾಗ್ಪುರದಲ್ಲಿರುವ ಒಂದು ಏಕಾಂತ ಸ್ಥಳದಲ್ಲಿ ಹಾಕಿದ್ದಾನೆ. ಸಾಲದೆನ್ನುವಂತೆ ಯಾರಿಗೂ ತಿಳಿಯಬಾರದೆಂದು ಆ ಜಾಗವನ್ನು ಸಿಮೆಂಟ್‌ನಿಂದ ಮುಚ್ಚಿದ್ದಾನೆ. ಬಳಿಕ ವಾರ್ಧಾ ರಸ್ತೆಯಲ್ಲಿ ಸಾಗುತ್ತಿದ್ದ ಟ್ರಕ್‌ನಲ್ಲಿ ಆಕ್ರೆ ಅವರ ಮೊಬೈಲ್‌ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತ ಜ್ಯೋತ್ಸ್ನಾಳ ಮನೆಯವರು ಆಕೆ ಮನೆಗೆ ವಾಪಾಸಾಗದ ಕಾರಣ ಹುಡುಕಲು ಪ್ರಾರಂಭಿಸಿದ್ದಾರೆ. ಆಕೆಯ ಮನೆಯವರು ಆಕೆ ಕಾಣೆಯಾಗಿರುವ ಬಗ್ಗೆ ಆಗಸ್ಟ್ 29 ರಂದು ಬೆಲ್ತರೋಡಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭಿಸಿ, ಸೆ.17ರಂದು ಅಪಹರಣ ಪ್ರಕರಣ ದಾಖಲಾಗಿತ್ತು. ತನಿಖೆಯ ಸಮಯದಲ್ಲಿ, ಪೊಲೀಸರು ಕರೆ ವಿವರಗಳ ದಾಖಲೆಗಳನ್ನು ಪರಿಶೀಲಿಸಿದರು. ಕೊನೆಗೆ ವಾಂಖೆಡೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಿಡಿಗೇಡಿ ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ. ನಾಗ್ಪುರದ ವಾರ್ಧಾ ರಸ್ತೆಯಲ್ಲಿರುವ ಡೊಂಗರ್‌ಗಾಂವ್ ಟೋಲ್ ಪ್ಲಾಜಾ ಬಳಿ ಸೋಮವಾರ ಪೊಲೀಸರು ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ತೆರಳಿ ಮೃತದೇಹದ ಭಾಗಗಳನ್ನು ಹೊರತೆಗೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Modi Visit Russia: ಕೃಷ್ಣ ಭಜನೆಯೊಂದಿಗೆ ಮೋದಿಯನ್ನು ಸ್ವಾಗತಿಸಿದ ರಷ್ಯನ್ನರು; ವೈರಲ್‌ ವಿಡಿಯೊ ಇಲ್ಲಿದೆ