ಹೊಸದಿಲ್ಲಿ: ಉತ್ತರ ಪ್ರದೇಶದ ಹತ್ರಾಸ್‌ನ 15 ವರ್ಷದ ಬಾಲಕನ ಹೊಟ್ಟೆಯಲ್ಲಿ ವಾಚ್ ಬ್ಯಾಟರಿಗಳು, ಬ್ಲೇಡ್‌ಗಳು, ಚೈನ್, ಉಗುರುಗಳು ಸೇರಿ 56 ವಸ್ತುಗಳು ಕಂಡು ಬಂದಿದ್ದು, ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಇವನ್ನು ಹೊರ ತೆಗೆಯಲಾಗಿದೆ. ಆದರೆ ಈ ಶಸ್ತ್ರಚಿಕಿತ್ಸೆ ನಡೆದ 1 ದಿನದ ಬಳಿಕ ಬಾಲಕ ಮೃತಪಟ್ಟಿದ್ದಾನೆ (Viral News).
9ನೇ ತರಗತಿ ವಿದ್ಯಾರ್ಥಿ ಆದಿತ್ಯ ಶರ್ಮಾ ದೇಹದೊಳಗೆ ಇಷ್ಟೊಂದು ವಸ್ತುಗಳು ಹೇಗೆ ಹೋದವು ಎಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿದ್ದ, ಬಾಲಕನ ತಂದೆ, ಹತ್ರಾಸ್ ಮೂಲದ ವೈದ್ಯಕೀಯ ಪ್ರತಿನಿಧಿ ಸಂಚಿತ್ ಶರ್ಮಾ ಅವರಿಗೆ ಸೇರಿದ ಈ ವಸ್ತುಗಳನ್ನು ಆದಿತ್ಯ ಶರ್ಮಾ ನುಂಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ʼʼದಿಲ್ಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ಒಂದು ದಿನದ ನಂತರ ಬಾಲಕ ಮೃತಪಟ್ಟಿದ್ದಾನೆ. ಹೃದಯ ಬಡಿತ ಹೆಚ್ಚಾಗಿ, ಬಿಪಿ ಗಣನೀಯ ಪ್ರಮಾಣದಲ್ಲಿ ಕುಸಿದು ಆತ ಅಸುನೀಗಿದ್ದಾನೆʼʼ ಎಂದು ಸಂಚಿತ್ ಶರ್ಮಾ ವಿವರಿಸಿದ್ದಾರೆ.
Under the guidance of Dr Sandeep Bansal,Medical Superintendent @SJHDELHI, multiple foreign articles were removed from stomach & intestines by Surgeon Dr Meghraj kundan and team under supervision of Dr Ashok sharma HOU & Dr Rajkumar Chejara HOD with anaesthetic Dr Lokesh & team. pic.twitter.com/FxGRJp1i3l
— VMMC & Safdarjung Hospital (@SJHDELHI) October 30, 2024
ವಿವಿಧ ಕಡೆ ವೈದ್ಯಕಿಯ ಪರೀಕ್ಷೆ
ʼʼಉತ್ತರ ಪ್ರದೇಶ, ಜೈಪುರ ಮತ್ತು ದಿಲ್ಲಿಯ ವಿವಿಧ ಆಸ್ಪತ್ರೆಗಳಲ್ಲಿ ನಡೆಸಿದ ಅನೇಕ ವೈದ್ಯಕೀಯ ತಪಾಸಣೆಯ ವೇಳೆ ಆದಿತ್ಯನ ಹೊಟ್ಟೆಯೊಳಗಿದ್ದ ವಸ್ತುಗಳು ಪತ್ತೆಯಾಗಿದ್ದವುʼʼ ಎಂದು ಸಂಚಿತ್ ಹೇಳಿದ್ದಾರೆ. ʼʼಆದಿತ್ಯ ತೀವ್ರ ಹೊಟ್ಟೆ ನೋವು ಮತ್ತು ಉಸಿರಾಟದ ತೊಂದರೆಗಳ ಬಗ್ಗೆ ತಿಳಿಸಿದ ನಂತರ ನಮಗೆ ಅನುಮಾನ ಮೂಡಿತು. ಆರಂಭದಲ್ಲಿ ಆತನನ್ನು ಹತ್ರಾಸ್‌ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಜೈಪುರ ಆಸ್ಪತ್ರೆಗೆ ಕರೆದೊಯ್ದೆವು. ಚಿಕಿತ್ಸೆ ನೀಡಿದ ಬಳಿಕ ಅಲ್ಲಿಂದ ಡಿಸ್‌ಚಾರ್ಜ್ ಮಾಡಲಾಗಿತ್ತುʼʼ ಎಂದು ಅವರು ಹೇಳಿದ್ದಾರೆ.
ಡಿಸ್‌ಚಾರ್ಜ್ ಆಗಿ ಮನೆಗೆ ಬಂದಾಗ ಪಾಲಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಕೆಲವೇ ಸಮಯದಲ್ಲಿ ಮತ್ತೆ ರೋಗಲಕ್ಷಣಗಳು ಕಾಣಿಸಿಕೊಂಡಾಗ ಕಂಗಾಲಾದ ಕುಟುಂಬ ಆತನನ್ನು ಅಲಿಗಢದ ಆಸ್ಪತ್ರೆಗೆ ದಾಖಲಿಸಿತು. ಅಲ್ಲಿ ಉಸಿರಾಟದ ಸಮಸ್ಯೆಯನ್ನು ನಿವಾರಿಸಲು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅ. 26ರಂದು ಅಲಿಗಢ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರ ನಡೆಸಿದ ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಆದಿತ್ಯನ ದೇಹದೊಳಗೆ ಸುಮಾರು 19 ಲೋಹದ ವಸ್ತುಗಳು ಇರುವುದು ಪತ್ತೆಯಾಗಿತ್ತು. ನಂತರ ವೈದ್ಯರು ಆತನನ್ನು ಹೆಚ್ಚು ಸುಧಾರಿತ ವೈದ್ಯಕೀಯ ಸೌಲಭ್ಯಗಳಿರುವ ನೋಯ್ಡಾದ ಆಸ್ಪತ್ರೆಗೆ ದಾಖಲಿಸುವಂತೆ ಶಿಫಾರಸು ಮಾಡಿದರು.
ಅಲ್ಲಿ ಮತ್ತೊಂದು ಸ್ಕ್ಯಾನ್‌ಗೆ ಒಳಪಡಿಸಲಾಯಿತು. ಈ ವೇಳೆ ದೇಹದೊಳಗೆ ಸುಮಾರು 56 ಲೋಹದ ತುಣುಕುಗಳ ಸೇರಿಕೊಂಡಿರುವುದು ತಿಳಿದು ಬಂತು. ಹೀಗಾಗಿ ಪಾಲಕರು ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ದಿಲ್ಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅ. 27ರಂದು ಅಲ್ಲಿ ಆತನಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು.
“ದಿಲ್ಲಿಯ ಈ ಆಸ್ಪತ್ರೆಯಲ್ಲಿ ನಡೆಸಿದ ಶಸ್ತ್ರಚಿಕಿತ್ಸೆಯ ನಂತರ ಮಗನ ದೇಹದಿಂದ ಸುಮಾರು 56 ಲೋಹದ ವಸ್ತುಗಳನ್ನು ತೆಗೆದುಹಾಕಲಾಗಿದೆ ಎಂದು ವೈದ್ಯರು ಹೇಳಿದರು. ಬಳಿಕ ಇನ್ನೂ ಮೂರು ವಸ್ತುಗಳನ್ನು ಹೊರ ತೆಗೆಯಲಾಯಿತು. ಅದಾಗ್ಯೂ ಆತನ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರುʼʼ ಎಂಬುದಾಗಿ ಸಂಚಿತ್ ಶರ್ಮಾ ಮಾಹಿತಿ ನೀಡಿದ್ದಾರೆ. ತಮ್ಮ ಮಗನಿಗೆ ಮಾನಸಿಕ ಕಾಯಿಲೆ ಇರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಈ ಪ್ರಕರಣ ವೈದ್ಯರನ್ನೇ ಅಚ್ಚರಿಗೆ ತಳ್ಳಿದೆ. ಬಾಲಕ ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ವಸ್ತುಗಳನ್ನು ನುಂಗಿದ್ದಾನೆಯೇ ಎಂಬುದನ್ನು ಸೂಚಿಸಲು ಆತನ ಬಾಯಿ ಅಥವಾ ಗಂಟಲಿನಲ್ಲಿ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ಒಟ್ಟಿನಲ್ಲಿ ಈ ಘಟನೆ ವೈಜ್ಞಾನಿಕ ಲೋಕಕ್ಕೆ ಸವಾಲೊಡ್ಡಿದೆ.
ಈ ಸುದ್ದಿಯನ್ನೂ ಓದಿ: Viral News: ಮಹಿಳೆಯ ‘ಮುತ್ತಿ’ಗೆ ನೋ ಎಂದ ಆಂಧ್ರ ಸಿಎಂ: ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಈ ಒಂದು ವಿಡಿಯೊ