ರಾಯ್ಪುರ: ಪ್ರೀತಿ (Love Story) ಕುರುಡು ಅಂತಾರೆ.. ಇದಕ್ಕೆ ಸಾಕ್ಷಿಯಾಗಿರುವ ಹಲವಾರು ನಿದರ್ಶನಗಳೂ ಇವೆ. ಈಗ ಇಂತಹದ್ದೇ ಒಂದು ಪ್ರೇಮ ಕಥೆ ಹುಟ್ಟಿದೆ. ಗಡಿಯನ್ನು ಮೀರಿ ಬೆಳೆದ ಈ ಪ್ರೀತಿ ಈಗ ಪ್ರಪಂಚದಾದ್ಯಂತ ಸುದ್ದಿ (Viral News) ಮಾಡಿದೆ. 51 ವರ್ಷದ ಬ್ರೆಜಿಲಿಯನ್ ಮಹಿಳೆ (Brazilian Woman) ಛತ್ತೀಸ್ಗಢದ (Chhattisgarh) ಭಿಂಡ್ನ 30 ವರ್ಷದ ವ್ಯಕ್ತಿಯೊಂದಿಗೆ ಬಾಳಲು ಹಲವಾರು ದೇಶಗಳನ್ನು ಸುತ್ತಿ ಬಂದಿದ್ದಾರೆ. ಇದಕ್ಕಾಗಿ ಅವರು ಅನುಭವಿಸಿದ ಸವಾಲುಗಳೆಷ್ಟೋ..
ಏನಿದು ಲವ್ ಸ್ಟೋರಿ?
ಬ್ರೆಜಿಲ್ನ ಮೂಲದ ರೋಸಿ ನೈದ್ ಶಿಕೇರಾ ಅವರು ಕಳೆದ ವರ್ಷ ಕಚ್ಗೆ ಭೇಟಿ ನೀಡಿದಾಗ ಭದ್ರತಾ ಸಿಬ್ಬಂದಿ ಪವನ್ ಗೋಯಲ್ ಅವರನ್ನು ಭೇಟಿಯಾಗಿದ್ದರು. ಮೊದಲ ನೋಟಕ್ಕೆ ಪವನ್ಗೆ ರೋಸಿ ಮನ ಸೋತಿದ್ದರು. ವಯಸ್ಸಿನ ವ್ಯತ್ಯಾಸ, ಭಾಷೆಯ ಸಮಸ್ಯೆ ಇದ್ದರೂ ಇವರಿಬ್ಬರ ಮಧ್ಯೆ ಸ್ನೇಹ ಹುಟ್ಟಿ ಬಳಿಕ ಪ್ರೀತಿ ಅರಳಿದೆ. ಸಾಮಾಜಿಕ ಮಾಧ್ಯಮದ ಮೂಲಕ ಸಂವಹನ ನಡೆಸುತ್ತಿದ್ದ ರೋಸಿ ಮತ್ತು ಪವನ್ ಅವರ ಪ್ರೀತಿ ಭಾಷೆ, ವಯಸ್ಸಿನ ವ್ಯತ್ಯಾಸಗಳನ್ನು ಮೀರಿ ಬೆಳೆಯಿತು.
ಬ್ರೆಜಿಲ್ನಲ್ಲಿ ಪತಿ ಮತ್ತು 32 ವರ್ಷದ ಮಗನೊಂದಿಗೆ ವಾಸಿಸುತ್ತಿದ್ದ ರೋಸಿ ಪವನ್ಗಾಗಿ ಅವರನ್ನು ಬಿಡುವ ನಿರ್ಧಾರ ಕೈಗೊಂಡರು. ಸುಂದರವಾದ ಜೀವನವನ್ನು ತೊರೆದು ಹೊಸ ಪ್ರೀತಿಯೊಂದಿಗೆ ಬಾಳಲು ನಿರ್ಧರಿಸಿದರು. ಪವನ್ಗಾಗಿ ಭಾರತಕ್ಕೆ ಬಂದ ರೋಸಿ ದೆಹಲಿಯಲ್ಲಿ ಪವನ್ ಕುಟುಂಬವನ್ನು ಭೇಟಿ ಮಾಡಿದರು. ಪವನ್ ಜೊತೆ ಮದುವೆಯಾಗುವ ನಿರ್ಧಾರವನ್ನು ತಿಳಿಸಿದರು. ಎಲ್ಲರ ಒಪ್ಪಿಗೆ ಮೇರೆಗೆ ರೋಸಿ ಮತ್ತು ಪವನ್ ಮದುವೆಯಾಗುತ್ತಿರುವುದಾಗಿ ಘೋಷಿಸಿದರು.
ದಂಪತಿ ತಮ್ಮ ವಿವಾಹದ ಆಮಂತ್ರಣವನ್ನು ಸ್ಥಳೀಯ ಜಿಲ್ಲಾಧಿಕಾರಿಗೆ ನೀಡಿದ್ದು, ಈ ವೇಳೆ ರೋಸಿ ತಮ್ಮ ಮದುವೆಯ ಅನಂತರ ಭಾರತದಲ್ಲಿ ಶಾಶ್ವತವಾಗಿ ನೆಲೆಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಹೊಸ ಜೀವನ ಮತ್ತು ಪ್ರೀತಿಯನ್ನು ಸಂಪೂರ್ಣವಾಗಿ ಸ್ವೀಕರಿಸಿರುವುದಾಗಿ ಹೇಳಿದ್ದಾರೆ.