Saturday, 16th November 2024

Viral News: ಎಲ್ಲ ಮೋಜು ಹುಡುಗರಿಗೆ ಮಾತ್ರ ಏಕೆ? ರಾಜಸ್ಥಾನದಲ್ಲಿ ಕುದುರೆ ಸವಾರಿ ಮಾಡುವ ಮೂಲಕ ಸಂಪ್ರದಾಯ ಮುರಿದ ವಧು

Viral News

ರಾಜಸ್ಥಾನ: ಭಾರತದಲ್ಲಿ, ವಿವಾಹದ ಆಚರಣೆಗಳಿಗೆ ತುಂಬಾ ಮಹತ್ವವಿದೆ. ಹಾಗಾಗಿ ವಿವಾಹದ ಆಚರಣೆಗಳನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ. ಅಂದಹಾಗೇ ರಾಜಸ್ಥಾನದಲ್ಲಿ ಕೂಡ ವಿವಾಹ ಆಚರಣೆಗಳನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಅಲ್ಲಿ ಮದುವೆಯ ದಿನ ವರನನ್ನು ರಾಜಕುಮಾರನಂತೆ ಶೃಂಗರಿಸಿ ಕುದುರೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಿಕೊಂಡು ಬರುತ್ತಾರೆ.  ಆದರೆ ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ಮದುವೆಯಲ್ಲಿ ಈ ಆಚರಣೆಯಲ್ಲಿ ಒಂದು ಟ್ವಿಸ್ಟ್‌ ಕಂಡುಬಂದಿದೆ. ಅದು ಈಗ ಎಲ್ಲೆಡೆ ವೈರಲ್‌ (Viral News) ಆಗಿದೆ.

ರಾಜಸ್ಥಾನದಲ್ಲಿ ಮದುವೆಯ ದಿನ ಸಾಮಾನ್ಯವಾಗಿ ವರನು ತನ್ನ ವಧುವನ್ನು ಕರೆದೊಯ್ಯಲು ಸಿದ್ಧನಾಗಿ ಬರಾತ್ ಮೆರವಣಿಗೆಯ ಸಮಯದಲ್ಲಿ ರಾಜಕುಮಾರನಂತೆ ಅಲಂಕಾರ ಮಾಡಿಕೊಂಡು  ಕುದುರೆಯ ಮೇಲೆ ಬರುತ್ತಾನೆ.  ಇದನ್ನು ಬಿಂಡೋರಿ ಎಂದು ಕರೆಯಲಾಗುತ್ತದೆ. ಆದರೆ ಇತ್ತೀಚೆಗೆ ನಡೆದ ಮದುವೆಯೊಂದರಲ್ಲಿ ವರನ ಬದಲು  ವಧು ಕುದುರೆಯ ಮೇಲೆ ಬಂದಿದ್ದಾಳೆ.

ವರದಿ ಪ್ರಕಾರ, ರಾಜಸ್ಥಾನದ ಚುರು ನಗರದ ಕುಟುಂಬವೊಂದು ವರನ ಬದಲು ವಧುವನ್ನು ಕುದುರೆಯ ಮೇಲೆ ಕರೆತಂದಿದ್ದಾರೆ. ಯಾಕೆಂದರೆ ವಧು ಮೋನಿಕಾ ಸೈನಿ ಅವರ ತಂದೆ ಮನೋಜ್ ಕುಮಾರ್ ಸೈನಿ ಅವರು, ವ್ಯಕ್ತಿಯ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂಬ ನಂಬಿಕೆ ಹೊಂದಿದ್ದರಂತೆ. ನ. 16ರಂದು ರತ್ನಗಢದ ಹೇಮಂತ್ ಸೈನಿ ಅವರೊಂದಿಗೆ ಮೋನಿಕಾ ಅವರ ಮದುವೆ ನಿಶ್ಚಯವಾಗಿತ್ತು. ಆ ದಿನದಂದು  ಲಿಂಗ ತಾರತಮ್ಯದ ವಿರುದ್ಧ ಸಮಾಜದಲ್ಲಿ ಬದಲಾವಣೆ ತರುವ ಉದ್ದೇಶದಿಂದ ವರನ ಬದಲಿಗೆ ವಧುವಿನೊಂದಿಗೆ ಬಿಂಡೋರಿ ಅಭ್ಯಾಸವನ್ನು ನಡೆಸಲು ಕುಟುಂಬ ಸದಸ್ಯರು  ಎಲ್ಲರೂ ಮುಂಚಿತವಾಗಿಯೇ ನಿರ್ಧರಿಸಿದ್ದರು ಎನ್ನಲಾಗಿದೆ.

ಸಾಂಪ್ರದಾಯಿಕ ಅಭ್ಯಾಸದಲ್ಲಿ ಈ ರೀತಿಯ ಬದಲಾವಣೆಗೆ ಈ ಪ್ರದೇಶದ ಸ್ಥಳೀಯರು ಮತ್ತು ಅತಿಥಿಗಳು ವಿರೋಧಿಸದೆ ಅದನ್ನು ಸ್ವಾಗತಿಸಿದ್ದಾರೆ. ಮೆರವಣಿಗೆಯು ಹಲವಾರು ಸ್ಥಳಗಳಿಗೆ ತೆರಳಿ ಜನರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಈ ಘಟನೆ  ಜನರಲ್ಲಾಗುವ ಬದಲಾವಣೆಯನ್ನು ಸೂಚಿಸುತ್ತದೆ.

ಇದನ್ನೂ ಓದಿ: ದೆಹಲಿ ಮೆಟ್ರೋದಲ್ಲಿ ಜಡೆ ಜಗಳ: ಯುವತಿಯರಿಬ್ಬರ ಕಿತ್ತಾಟ ನೋಡಿ ಬಿದ್ದು ಬಿದ್ದು ನಕ್ಕ ಜನರು

ವಧು ತನ್ನ ಮದುವೆಗೆ ಕುದುರೆಯ ಮೇಲೆ ಕುಳಿತುಕೊಳ್ಳುವುದು ಇದೇ ಮೊದಲಲ್ಲ. ಈ ಅಭ್ಯಾಸವನ್ನು ಈ ಹಿಂದೆ ಹಲವು ಬಾರಿ ನಡೆಸಲಾಗಿದೆ. ರಾಜಸ್ಥಾನದ ಜುಂಜುನು ಜಿಲ್ಲೆಯ ನವಲ್‍ಗಢದಲ್ಲಿ ವಧು ನೇಹಾ ಖಿಚಾರ್ ಐಐಟಿ ಪದವೀಧರೆಯಾಗಿದ್ದು, ಅವಳ ಮದುವೆಗೆ ಮುಂಚಿತವಾಗಿ, ಅವರ ಕುಟುಂಬವು ಲಿಂಗಗಳ ನಡುವಿನ ಸಮಾನತೆಯ ಸಂದೇಶವನ್ನು ತಿಳಿಸಲು ಆಕೆಯನ್ನು ವರನಂತೆ ಬಂಡೋರಿ ಆಚರಣೆಯನ್ನು ಮಾಡುವಂತೆ ಮಾಡಿತ್ತು.