ಈ ಕಾಲ ಘಟ್ಟವನ್ನು ಮೊಬೈಲ್ ದುನಿಯಾ ಎಂದು ಕರೆದರೂ ತಪ್ಪಾಗಲಾರದು. ಯಾವುದೇ ವಿಷಯದ ಬಗ್ಗೆ ಅನುಮಾನ ಬಂದರೂ ಸರ್ಚ್ ಇಂಜಿನ್ಗಳಿಗೆ ಹೋಗಿ ಪ್ರಶ್ನೆ ಮಾಡಿದರೆ ಉತ್ತರ ಸಿಗುತ್ತದೆ. ಈಗ ಹೆಚ್ಚಿನವರು ಅನಾರೋಗ್ಯಕ್ಕೂ ಮೊಬೈಲ್ ಮಾಹಿತಿಯನ್ನೇ ಆಧರಿಸುತ್ತಾರೆ ಎಷ್ಟರ ಮಟ್ಟಿಗೆ ಎಂದರೆ ವೈದ್ಯರಿಗೇ ಔಷಧದ ಬಗ್ಗೆ ಹೇಳಿಕೊಡುವಷ್ಟು ಆನ್ಲೈನ್ ಜ್ಞಾನ ಅಭಿವೃದ್ಧಿ ಆಗಿದೆ. ಇದೀಗ, ಇಂತದೇ ಘಟನೆಯೊಂದು ನಡೆದಿದ್ದು, ತಮಿಳುನಾಡಿನ ಕುಂದ್ರತ್ತೂರಿನಲ್ಲಿ ದಂಪತಿಗಳು ಇಬ್ಬರು ವಾಟ್ಸಪ್ ಗ್ರೂಪ್ನ ಸಹಾಯದಿಂದ ಹೆರಿಗೆ ನಡೆಸಿರುವಂತಹ ಘಟನೆ ನಡೆದಿದೆ. ಈ ಸುದ್ದಿ ಇದೀಗ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ
ಸುಕನ್ಯಾ – ಮನೋಹರನ್ ಎಂಬ ದಂಪತಿ ಈ ದುಸಾಹಸಕ್ಕೆ ಕೈ ಹಾಕಿದ್ದು, ನವೆಂಬರ್ 17ರಂದು ಸುಕನ್ಯಾಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ವೈದ್ಯರನ್ನು ಸಂಪರ್ಕಿಸದೇ ತಾನೇ ಪತ್ನಿಗೆ ಹೆರಿಗೆ ಮಾಡಲು ಮನೋಹರನ್ ಮುಂದಾಗಿದ್ದು, ವಾಟ್ಸಪ್ ಗ್ರೂಪ್ನಲ್ಲಿ ಬಂದ ಹಂತ-ಹಂತದ ಮಾರ್ಗದರ್ಶನವನ್ನು ಅನುಸರಿಸಿದ್ದಾರೆ. ಹೆರಿಗೆ ಪ್ರಕ್ರಿಯೆಯಲ್ಲಿ ಅವರ ಪತ್ನಿಗೆ ಸಹಾಯ ಮಾಡಲು ಗುಂಪಿನ ಸದಸ್ಯರು ಒದಗಿಸಿದ ಸೂಚನೆಗಳು ಮತ್ತು ವಿವರಣೆಗಳನ್ನು ಬಳಸಿದ್ದಾರೆ ಎಂದು ವರದಿಯಾಗಿದೆ.
ದಂಪತಿ ವಾಟ್ಸಪ್ನ “ಹೋಮ್ ಬರ್ತ್ ಎಕ್ಸ್ಪೀರಿಯನ್ಸ್” ಎಂಬ ಗುಂಪಿನಲ್ಲಿ ಹಂಚಿಕೊಂಡ ಸಲಹೆಯನ್ನು ಅವಲಂಬಿಸಿ ಹೆರಿಗೆಯನ್ನು ನಡೆಸಿದ್ದಾರೆ. ಯಾವುದೇ ವೈದ್ಯಕೀಯ ಪರಿಶೀಲನೆ ಇಲ್ಲದೇ ಅಪಾಯಕಾರಿಯಾಗಿ ಹೆರಿಗೆ ನಡೆಸಿರುವ ಬಗ್ಗೆ ಅಧಿಕಾರಿಗಳು ಈಗ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಹೆರಿಗೆಯ ನಂತರ, ಸುರಕ್ಷತೆಯ ಉಲ್ಲಂಘನೆಯನ್ನು ಉಲ್ಲೇಖಿಸಿ ಸ್ಥಳೀಯ ಸಾರ್ವಜನಿಕ ಆರೋಗ್ಯ ಅಧಿಕಾರಿಯಿಂದ ದೂರು ದಾಖಲಿಸಲಾಗಿದೆ.
ಮಗುವಿನ ಜನನದ ಬಳಿಕ ದಂಪತಿಗಳು ನವಜಾತ ಶಿಶುವಿನೊಂದಿಗೆ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬಳಿಕ ಈ ವಿಚಾರ ಬೆಳಕಿಗೆ ಬಂದಿದ್ದು, ಇದು ಸ್ಥಳೀಯ ಆರೋಗ್ಯ ಅಧಿಕಾರಿಗಳ ಗಮನ ಸೆಳೆಯಿತು. ಇದೀಗ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಇನ್ನು ಇಂತಹ ಸಾಕಷ್ಟು ವಿಚಿತ್ರ ಘಟನೆಗಳು ನಮ್ಮ ಮಧ್ಯೆ ನಡೆಯುತ್ತಲ್ಲೇ ಇರುತ್ತದೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಅಪ್ರಾಪ್ತೆ ಒಬ್ಬಳು ಯೂಟ್ಯೂಬ್ ವಿಡಿಯೋ ನೋಡಿ ಹೆರಿಗೆ ಮಾಡಿಕೊಂಡಿದ್ದಳು. ನಂತರ ಹುಟ್ಟಿದ ಮಗುವನ್ನು ಕಟ್ಟಡದಿಂದ ಎಸೆದು ಕೊಂದಿದ್ದಳು. ಈ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿತ್ತು. ಅಲ್ಲಿನ ಉತ್ತಮ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: Viral News: ಆತ್ಮಹತ್ಯೆಗೆ ಯತ್ನಿಸಿ ಮರುಜೀವ ಪಡೆದವನ ಕಮ್ ಬ್ಯಾಕ್ ಹೇಗಿತ್ತು ಗೊತ್ತಾ? ಬದುಕು ಮಾತ್ರ ಅಲ್ಲ… ಮುಖವೂ ಹೊಸದೇ!
ಜಮ್ಮು ಮತ್ತು ಕಾಶ್ಮೀರದಲ್ಲಿಯೂ ವೈದ್ಯರು ವಾಟ್ಸಾಪ್ ಮೂಲಕವೇ ಹೆರಿಗೆ ಮಾಡಿಸಿದ ಸುದ್ದಿ ಸಖತ್ ವೈರಲ್ ಆಗಿತ್ತು. ಜಮ್ಮು ಮತ್ತು ಕಾಶ್ಮೀರದ ಕೆರನ್ ಎಂಬಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಮೊದಲೇ ಈ ಮಹಿಳೆಗೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಹೇಗಾದರೂ ಮಾಡಿ ಆಸ್ಪತ್ರೆಗೆ ಕರೆದೊಯ್ಯಲೇಬೇಕಾಗಿತ್ತು. ಆದರೆ, ನಿರಂತರ ಹಿಮಪಾತವಾಗುತ್ತಿರುವುದರಿಂದ ಏರ್ ಲಿಫ್ಟ್ ಕೂಡ ಸಾಧ್ಯವಾಗಿರಲಿಲ್ಲ. ಆಗ ನೆರವಾಗಿದ್ದೇ ಈ ವಾಟ್ಸಾಪ್! ತಜ್ಞ ವೈದ್ಯರೊಬ್ಬರು, ಸ್ಥಳೀಯ ವೈದ್ಯರಿಗೆ ವಾಟ್ಸಾಪ್ ಕಾಲ್ ಮೂಲಕ ಸರಿಯಾದ ಸಲಹೆ, ಸೂಚನೆಗಳನ್ನು ನೀಡಿ, ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದರು.