ರಾಯ್‌ಪುರ: ಮೋಸಗಾರರಿಗೆ ಮೋಸ ಹೋಗುವವರ ವೀಕ್‌ನೆಸ್ಸೇ ಬಂಡವಾಳ. ಇದೇ ಕಾರಣಕ್ಕೆ ಪ್ರತಿದಿನ ನಾವು ಸೈಬರ್ ವಂಚನಾ ಜಾಲದಿಂದ ಮೋಸಹೋದವರ ಬಗ್ಗೆ ಸುದ್ದಿಗಳನ್ನು ಓದುತ್ತಿರುತ್ತೇವೆ. ಇದೀಗ ಇದೊಂದು ರೀತಿಯ ಸ್ಪೆಷಲ್ ವಂಚನಾ ಸುದ್ದಿ ಸಿಕ್ಕಾಪಟ್ಟೆ ವೈರಲ್ (Viral News) ಆಗುತ್ತಿದೆ. ಇಲ್ಲಿ ಅವಿವಾಹಿತರ ವೀಕ್‌ನೆಸ್ ಅನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ನಕಲಿ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ 500ಕ್ಕೂ ಹೆಚ್ಚು ವಿವಾಹಾಕಾಂಕ್ಷಿಗಳಿಗೆ ‘ಉಂಡೆ ನಾಮ’ ತಿಕ್ಕಿದ್ದಾರೆ.
ಈ ವಂಚನೆಗೆ ಸಂಬಂಧಿಸಿದಂತೆ ಭೋಪಾಲ್ ಸೈಬರ್ ಕ್ರೈಂ ಅಧಿಕಾರಿಗಳು ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಈತ ನಕಲಿ ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ದೇಶಾದ್ಯಂತ ಸುಮಾರು 500ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.
ಕೇವಲ 12ನೇ ತರಗತಿ ಪಾಸ್ ಆಗಿರುವ ಈ ಪುಣ್ಯಾತ್ಮ ಸುಮಾರು ಆರಕ್ಕೂ ಹೆಚ್ಚು ಫೇಕ್ ಮ್ಯಾಟ್ರಿಮೋನಿಯಲ್ ಸೈಟ್‌ಗಳ ಮೂಲಕ ಅವಿವಾಹಿತರನ್ನು ಸಂಪರ್ಕಿಸಿ ಅವರಿಗೆ ಒಳ್ಳೆಯ ಸಂಬಂಧವನ್ನು ಕೂಡಿಸಿಕೊಡುವ ಆಮಿಷವೊಡ್ಡಿ ಬೃಹತ್ ವಂಚನೆ ಎಸಗಿದ್ದಾನೆಂದು ತಿಳಿದುಬಂದಿದೆ.
ಇಂಡಿಯನ್ ರಾಯಲ್ ಮ್ಯಾಟ್ರಿಮೋನಿ, ಸರ್ಚ್ ರಿಶ್ತೆ, ಡ್ರೀಂ ಪಾರ್ಟನರ್ ಇಂಡಿಯಾ, 7 ಫೆರೆ ಮ್ಯಾಟ್ರಿಮೋನಿ, ಸಂಗಮ್ ವಿವಾಹ್ ಮತ್ತು ಮೈ ಶಾದಿ ಪ್ಲ್ಯಾನರ್ ಎಂಬ ಫೇಕ್ ವೆಬ್‌ಸೈಟ್‌ಗಳ ಮೂಲಕ ಈ ವಂಚನೆ ನಡೆಯುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಅಲ್ಲದೆ ಈ ವೆಬ್‌ಸೈಟ್‌ಗಳನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಮೂಲಕವೂ ಪ್ರಮೋಟ್ ಮಾಡಲಾಗುತ್ತಿತ್ತು, ಇಲ್ಲಿ ಇಂಟರ್‌ನೆಟ್ ಮುಲಕ ಡೌನ್‌ಲೋಡ್ ಮಾಡಿಕೊಂಡ ಯುವತಿಯರ ಫೋಟೊ ಬಳಸಿಕೊಂಡು ಮದುವೆಯಾಗಲಿರುವ ಯುವಕರನ್ನು ಬುಟ್ಟಿಗೆ ಹಾಕಿಕೊಳ್ಳುವ ಕೆಲಸ ನಡೆಯುತ್ತಿತ್ತು ಎಂದು ಪೊಲೀಸರು ಈ ವಂಚನಾ ಜಾಲದ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯಾಗಿ ಜಾಹೀರಾತಿನ ಮೂಲಕ ವಂಚಕರು ವಿವಾಹಾಕಾಂಕ್ಷಿಗಳನ್ನು ಆಕರ್ಷಿಸುತ್ತಿದ್ದರು. ಬಳಿಕ ಅವರನ್ನು ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸುವ ಕೆಲಸ ನಡೆಯುತ್ತಿತ್ತು. ಇಲ್ಲಿ ಕಾಲ್ ಸೆಂಟರ್ ಮೂಲಕ ಯುವತಿಯರ ಫೇಕ್ ಪ್ರೊಫೈಲ್ ಮತ್ತು ಬಯೋಡಾಟಾವನ್ನು ಹಂಚಿಕೊಳ್ಳಲಾಗುತ್ತಿತ್ತು.
ಈ ಸುದ್ದಿಯನ್ನೂ ಓದಿ: MS Dhoni: ಸಾಂಪ್ರದಾಯಿಕ ಪಹಾಡಿ ಗರ್ವಾಲಿ ನೃತ್ಯ ಮಾಡಿದ ಧೋನಿ; ವಿಡಿಯೊ ವೈರಲ್
ಇಲ್ಲಿ ಕೆಲವೊಮ್ಮೆ ಸಂತ್ರಸ್ತರಿಂದ ಮದುವೆ ಸಂಬಂಧಿತ ವೆಚ್ಚ ಎಂದು ಹೇಳಿ ಒಂದಷ್ಟು ಹಣವನ್ನೂ ಪಿಕಲಾಗುತ್ತಿತ್ತು. ಇದರಲ್ಲಿ ವಕೀಲರ ಶುಲ್ಕ, ಹೊಟೇಲ್ ಬುಕ್ಕಿಮಗ್, ಮಂಗಳಸೂತ್ರ ಸೇರಿದಂತೆ ಆಭರಣ ಖರೀದಿ ಹಾಗೂ ಮದುವೆ ವಿಧಿವಧಾನಗಳ ಸಿದ್ದತೆಗ ಹೆಸರಿನಲ್ಲಿ ಹಣವನ್ನು ಪಡೆಯಲಾಗುತ್ತಿತ್ತು.
ಇದಿಗ ಪೊಲೀಸರ ವಶದಲ್ಲಿರುವ ಆರೊಪಿಯನ್ನು ಹರೀಶ್ ಭಾರದ್ವಾಜ್ ಎಂದು ಗುರುತಿಸಲಾಗಿದೆ. ಈತ ತನ್ನ ಈ ಮೋಸದ ಕಾರ್ಯಾಚರಣೆಯನ್ನು ಬಿಲಾಸ್‌ಪುರ್‌ನಿಂದಲೇ ನಡೆಸುತ್ತಿದ್ದ ಎಂದು ತಿಳಿದುಬಂದಿದ್ದು, ಅಲಿಘಡ್, ವಾರಣಾಶಿ ಮತ್ತು ಬಿಲಾಸ್ ಪುರಗಳಲ್ಲಿ ಈತನ ವಂಚಕ ತಂಡ ಕಾಲ್ ಸೆಂಟರ್‌ಗಳನ್ನು ನಡೆಸಿ ಆ ಮೂಲಕ ವಿವಾಹಾಕಾಂಕ್ಷಿಗಳಿಗೆ ಬಲೆ ಬೀಸಿ ಅವರನ್ನು ಈ ವಂಚನಾ ಜಾಲದಲ್ಲಿ ಕೆಡವುತ್ತಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ.
ಇನ್ನು ಈತನ ಮ್ಯಾಟ್ರಿಮೋನಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಟೆಲಿ ಕಾಲರ್‌ಗಳಿಗೆ ತಿಂಗಳಿಗೆ 8ರಿಂದ 10 ಸಾವಿರ ರೂ.ವರೆಗೂ ಸಂಬಳ ಸಿಗುತ್ತಿತ್ತು. ಇವರನ್ನು ವಧು-ವರರೆಂದು ಪರಿಚಯಿಸಲಾಗುತ್ತಿತ್ತು. ಈ ವಂಚಕರ ಜಾಲ ಸಂತ್ರಸ್ತರಿಂದ 1.5 ಲಕ್ಷ ರೂ.ವರೆಗೂ ಹಣವನ್ನು ಪೀಕಿಸುತ್ತಿದ್ದರು ಎಂಬ ಮಾಹಿತಿಯೂ ಸಿಕ್ಕಿದೆ.
ಇನ್ನು, ಕೆಲವರು ಇವರ ಸೇವೆಯಿಂದ ಸಂತೃಪ್ತರಾಗದೇ ದೂರು ಕೊಡುತ್ತೇನೆಂದು ಬೆದರಿಸಿದರೆ ಆಗ ಈ ವಂಚಕರ ತಂಡ ಅಂತಹ ವ್ಯಕ್ತಿಗಳಿಗೆ ಅವರು ಕೊಟ್ಟ ಹಣದ ಸ್ವಲ್ಪ ಅಂಶವನ್ನು ಹಿಂತಿರುಗಿಸುತ್ತಿದ್ದರು. ಆ ಮೂಲಕ ಈ ವಂಚನಾ ಜಾಲ ಪೊಲೀಸರ ಬಲೆಗೆ ಬೀಳದಂತೆ ಎಚ್ಚರ ವಹಿಸುತ್ತಿತ್ತು.
ಇನ್ನು, ಭೋಪಾಲ್ ಮೂಲದ 47 ವರ್ಷದ ವ್ಯಕ್ತಿಯೊಬ್ಬರು ಇಲ್ಲಿನ ಸೈಬರ್ ಕ್ರೈಂ ಬ್ರ್ಯಾಂಚ್‌ನಲ್ಲಿ ಇವರ ಮೇಲೆ ದೂರು ದಾಖಲಿಸುವ ಮೂಲಕ ಈ ಖದೀಮರ ವಂಚನಾ ಜಾಲ ಬೆಳಕಿಗೆ ಬರುವಂತಾಯಿತು. ಈ ವ್ಯಕ್ತಿ, ಪ್ರಾಡ್ ವೆಬ್ ಸೈಟ್‌ಗಳಲ್ಲಿ ಒಂದಾದ ಸಂಗಮ್ ವಿವಾಹ್ ಮ್ಯಾಟ್ರಿಮನಿ ಮೂಲಕ ಸಂಬಂಧ ಕುದುರಿಸಿಕೊಳ್ಳಲು 1.5 ಲಕ್ಷ ರೂ. ನೀಡಿ ಮೋಸ ಹೋಗಿದ್ದರು.
ಇದಕ್ಕೆ ಸಂಬಂಧಸಿದಂತೆ ಈ ಜಾಲಕ್ಕೆ ಸಂಬಂಧಿಸಿದ್ದ ಬ್ಯಾಂಕ್ ಅಕೌಂಟ್ ಒಂದನ್ನು ಸ್ಥಗಿತಗೊಳಿಸಲಾಗಿತ್ತು, ಇದನ್ನು ಮರುಚಾಲನೆಗೊಳಿಸಲು ಆರೊಪಿ ಭಾರದ್ವಾಜ್ ಭೋಪಾಲ್ ಗೆ ಬಂದಿದ್ದ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ಈತನನ್ನು ತಮ್ಮ ಬಲೆಗೆ ಕೆಡವಿಕೊಂಡಿದ್ದಾರೆ. ಬಳಿಕ ಆರೋಪಿ ಭಾರದ್ವಾಜ್ ತನ್ನ ಮೋಸದ ಜಾಲದ ಬಗ್ಗೆ ಪೊಲೀಸರಿಗೆ ಇಂಚಿಂಚೂ ಮಾಹಿತಿಯನ್ನು ನೀಡಿದ್ದಾನೆ ಆ ಮೂಲಕ ಈ ವಂಚನಾ ಜಾಲದ ಬಗ್ಗೆ ಮಾಹಿತಿ ಬಹಿರಂಗಗೊಳ್ಳುವಂತಾಗಿದೆ.