Sunday, 17th November 2024

Viral News: ಬರೋಬ್ಬರಿ 20 ಲಕ್ಷ ರೂ. ಕದ್ದು ಹಸುವಿನ ಸಗಣಿಯಲ್ಲಿ ಬಚ್ಚಿಟ್ಟ ಖದೀಮ! ನಂತರ ಆಗಿದ್ದೇನು?

Viral News

ಭುವನೇಶ್ವರ: ಆರೋಪಿಯೊಬ್ಬ ತಾನು ಕದ್ದ ಹಣವನ್ನು ಹಸುವಿನ ಸಗಣಿಯಲ್ಲಿ(cow dung) ಬಚ್ಚಿಟ್ಟ ಘಟನೆ ಒಡಿಶಾದ (Odisha) ಬಡಮಂಡರುಣಿ ಗ್ರಾಮದಲ್ಲಿ ನಡೆದಿದೆ. ಹೈದರಾಬಾದ್‌ನಲ್ಲಿ ಕಳ್ಳತನ ಮಾಡಿ ಆ ಹಣವನ್ನು ಹಸುವಿನ ಸಗಣಿ ಅಡಿಯಲ್ಲಿ ಬಚ್ಚಿಟ್ಟಿದ್ದ ಎಂದು ಹೈದರಾಬಾದ್‌ ಹಾಗೂ ಒಡಿಶಾ ಪೊಲೀಸರು ನಡೆಸಿದ ಜಂಟಿ ದಾಳಿಯಲ್ಲಿ ತಿಳಿದು ಬಂದಿದೆ. ಆರೋಪಿಯನ್ನು ಬಾಲಸೋರ್ ಜಿಲ್ಲೆಯ ಗೋಪಾಲ ಎಂದು ಗುರುತಿಸಲಾಗಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ(Viral News).

ಹೈದರಾಬಾದ್‌ನ ಕೃಷಿ ಆಧಾರಿತ ಕಂಪನಿಯ ಮಾಲೀಕನಿಂದ  20 ಲಕ್ಷ ರೂ. ಕಳ್ಳತನ ಮಾಡಿದ್ದ ಗೋಪಾಲ ತನ್ನ ಸೋದರ ಮಾವ ರವೀಂದ್ರ ಬೆಹೆರಾ ಮೂಲಕ ಕದ್ದ ಹಣವನ್ನು ತನ್ನ ಗ್ರಾಮಕ್ಕೆ ವರ್ಗಾಯಿಸಿದ್ದ. ಕದ್ದ ಹಣವನ್ನು ಒಣಗಿದ ಹಸುವಿನ ಸಗಣಿ ಅಡಿಯಲ್ಲಿ ಬಚ್ಚಿಟ್ಟಿದ್ದ ಎಂಬುದು ತಿಳಿದು ಬಂದಿದೆ.

ಪ್ರಕರಣದ ಸಂಬಂಧ ಕಂಪನಿ ಮಾಲೀಕರು ದೂರು ನೀಡಿದ್ದು, ಹೈದರಾಬಾದ್‌ ಪೊಲೀಸರು ತನಿಖೆ ಆರಂಭಿಸಿದ್ದರು. ನಂತರ ಒಡಿಶಾದ ಕಮರ್ದಾ ಪೊಲೀಸರ ನೆರವು ಪಡೆದ ಹೈದರಾಬಾದ್‌ ಪೊಲೀಸರು ಆರೋಪಿಯ ಮನೆ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಬಚ್ಚಿಟ್ಟಿದ್ದ 20 ಲಕ್ಷ ರೂ. ಪತ್ತೆಯಾಗಿದೆ. ಸದ್ಯ ಆರೋಪಿ ಗೋಪಾಲ ಹಾಗೂ ಆತನ ಮಾವ ತಲೆಮರೆಸಿಕೊಂಡಿದ್ದು, ಅವರ ಕುಟುಂಬದ ಓರ್ವ ಸದಸ್ಯನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಮರೆಸಿಕೊಂಡವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಸಿಬಿಐ ಅಧಿಕಾರಿ ಸೋಗಿನಲ್ಲಿ ವೃದ್ಧರೊಬ್ಬರಿಗೆ 41 ಲಕ್ಷ ರೂ ವಂಚನೆ

ಸಿಬಿಐ ಅಧಿಕಾರಿ ಸೋಗಿನಲ್ಲಿ ವೃದ್ಧರೊಬ್ಬರಿಗೆ 41 ಲಕ್ಷ ರೂ. ವಂಚನೆ ಮಾಡಿರುವಂತಹ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಸೆನ್​ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಯುಪಿ ಮೂಲದ ಮೊಹಮ್ಮದ್ ಅಹ್ಮದ್ ಮತ್ತು ಅಭಿಷೇಕ್ ಕುಮಾರ್ ಬಂಧಿತರು. ಸದ್ಯ ಬಂಧಿತ ಆರೋಪಿಗಳಿಂದ 23 ಲಕ್ಷದ 89 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.

ಶಿವಮೊಗ್ಗದ ಗೋಪಾಳ ಬಡಾವಣೆಯ ವೃದ್ಧ ಆನಂದ್ ಎಂಬುವವರು ವಂಚನೆಗೊಳಗಾದವರು. ಸಿಬಿಐ ಅಧಿಕಾರಿ ಸೋಗಿನಲ್ಲಿ ವೃದ್ಧ ಆನಂದ್‌ಗೆ ಕರೆ ಮಾಡಿದ್ದ ಖದೀಮರು, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯಲ್ಲಿ ದೊಡ್ಡಮಟ್ಟದ ಹಣ ವರ್ಗಾವಣೆ ಆಗಿದೆ. ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಮಾಡಿದ್ದೇವೆ ಎಂದಿದ್ದಾರೆ. ನಿಮ್ಮನ್ನು ಅರೆಸ್ಟ್ ಮಾಡಲು ವಾರಂಟ್ ಜಾರಿಯಾಗಿದೆ. ಅರೆಸ್ಟ್ ಮಾಡಲು ಬರುತ್ತಿದ್ದೇವೆ ಎಂಬ ಬಗ್ಗೆ ಭಯ ಹುಟ್ಟಿಸಿದ್ದಾರೆ. . ಆನಂದ್ ಖಾತೆಯಿಂದ 41 ಲಕ್ಷ ರೂ. ಹಣವನ್ನು ಖದೀಮರು ಹಾಕಿಸಿಕೊಂಡಿದ್ದಾರೆ. ಕೆಲ ದಿನಗಳ ಬಳಿಕ ಮೋಸ ಹೋಗಿರುವ ಬಗ್ಗೆ ಆನಂದ್​ಗೆ ಅನುಮಾನ ಮೂಡಿದ್ದು, ಈ ಬಗ್ಗೆ ಶಿವಮೊಗ್ಗದ ಸೆನ್​ ಠಾಣೆಗೆ ದೂರು ನೀಡಿದ್ದಾರೆ. ನಂತರ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ :Zomato Delivery Boy: ಸೂಪರ್‌ ಮಾರ್ಕೆಟ್‌ ಎದುರಿಗಿದ್ದ ಬ್ಯಾಗ್‌ ಎಗರಿಸಿದ ಫುಡ್‌ ಡೆಲಿವರಿ ಬಾಯ್‌! ವಿಡಿಯೊ ವೈರಲ್‌