Sunday, 17th November 2024

Viral News: ಮಧ್ಯಮ ವರ್ಗದವರ ಸಮಸ್ಯೆಗೆ ಪರಿಹಾರ: ಎಕ್ಸ್ ಬಳಕೆದಾರರಿಗೆ ತ್ವರಿತ ಪ್ರತಿಕ್ರಿಯೆ ನೀಡಿದ ನಿರ್ಮಲಾ ಸೀತಾರಾಮನ್‌ಗೆ ಮೆಚ್ಚುಗೆ

Viral News

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರವು ಮಾಧ್ಯಮ ವರ್ಗದವರ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸುವುದಾಗಿ ಕೇಂದ್ರ ಹಣಕಾಸು ಸಚಿವೆ (Union finance minister) ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲ (Viral News) ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಎಕ್ಸ್ ಬಳಕೆದಾರರೊಬ್ಬರ ಮನವಿಗೆ ತ್ವರಿತವಾಗಿ ಸ್ಪಂದಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ಭಾರತದ ಮಧ್ಯಮ ವರ್ಗದವರ ಸಮಸ್ಯೆಯನ್ನು ನಿವಾರಿಸುವ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರವು ಅಂತಹ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತದೆ ಎಂದು ಭರವಸೆ ನೀಡಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರ ತ್ವರಿತ ಪ್ರತಿಕ್ರಿಯೆಗೆ ಎಕ್ಸ್ ಬಳಕೆದಾರರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಧ್ಯಮ ವರ್ಗದವರ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಕೋರಿದರು.

ತುಷಾರ್ ಶರ್ಮಾ ಎಂಬವರು ಸಚಿವೆ ನಿರ್ಮಲಾ ಅವರಿಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ʼʼದೇಶಕ್ಕೆ ನಿಮ್ಮ ಪ್ರಯತ್ನಗಳು ಮತ್ತು ಕೊಡುಗೆಗಳನ್ನು ನಾವು ಶ್ಲಾಘಿಸುತ್ತೇವೆ. ನೀವು ನಮ್ಮ ಅತ್ಯಂತ ಮೆಚ್ಚುಗೆಯನ್ನು ಗಳಿಸಿದ್ದೀರಿ. ಮಧ್ಯಮ ವರ್ಗದವರಿಗೆ ಒಂದಿಷ್ಟು ಪರಿಹಾರ ನೀಡುವ ಬಗ್ಗೆ ಯೋಚಿಸುವಂತೆ ನಾನು ವಿನಮ್ರವಾಗಿ ವಿನಂತಿಸುತ್ತೇನೆʼʼ ಎಂದು ಹೇಳಿದ್ದರು.

ಪೋಸ್ಟ್ ಆದ ಗಂಟೆಗಳ ಅನಂತರ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ʼʼನಿಮ್ಮ ಒಳ್ಳೆಯ ಮಾತುಗಳು ಮತ್ತು ನಿಮ್ಮ ತಿಳುವಳಿಕೆಗೆ ಧನ್ಯವಾದಗಳು. ನಾನು ನಿಮ್ಮ ಕಾಳಜಿಯನ್ನು ಗುರುತಿಸುತ್ತೇನೆ ಮತ್ತು ಪ್ರಶಂಸಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರದ್ದು ಜನರಿಗೆ ಸ್ಪಂದಿಸುವ ಸರ್ಕಾರ. ಜನರ ಧ್ವನಿಯನ್ನು ಆಲಿಸುತ್ತದೆ. ನಿಮ್ಮ ಮಾಹಿತಿ ಮೌಲ್ಯಯುತವಾಗಿದೆʼʼ ಎಂದು ಹೇಳಿದ್ದಾರೆ.

2024ರ ಕೇಂದ್ರ ಬಜೆಟ್ ಮೂಲಕ ಮಧ್ಯಮ ವರ್ಗದವರಿಗೆ ಪರಿಹಾರ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಜುಲೈನಲ್ಲಿ ಹಣಕಾಸು ಸಚಿವರು ಹೇಳಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ʼʼನಾನು ಮಧ್ಯಮ ವರ್ಗದವರ ಸಮಸ್ಯೆಗಳನ್ನು ನಿವಾರಿಸಲು ಬಯಸುತ್ತೇನೆ. ಆದರೆ ನನಗೂ ಮಿತಿಗಳಿವೆ. ತೆರಿಗೆ ದರವನ್ನು ಕಡಿಮೆ ಮಾಡುವ ಮೂಲಕ ಅವರಿಗೆ ಸೂಕ್ತ ಪರಿಹಾರವನ್ನು ನೀಡಲು ಬಯಸುತ್ತೇನೆ. ಅದಕ್ಕಾಗಿಯೇ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50,000 ರೂ.ಯಿಂದ 75,000 ರೂ.ಗೆ ಹೆಚ್ಚಿಸಲಾಗಿದೆ. ಅಲ್ಲದೆ ಹೆಚ್ಚಿನ ಆದಾಯವಿರುವವರ ತೆರಿಗೆ ದರವನ್ನು ಹೆಚ್ಚಿಸಲಾಗಿದೆ. ಹಳೆಯ ಆಡಳಿತಕ್ಕೆ ಹೋಲಿಸಿದರೆ ತೆರಿಗೆ ದರಗಳನ್ನು ಕಡಿಮೆ ಮಾಡುವ ಗುರಿಯೊಂದಿಗೆ ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸಲಾಗಿದೆʼʼ ಎಂದು ಅವರು ತಿಳಿಸಿದ್ದರು.

ʼʼಮಧ್ಯಮ ವರ್ಗದವರು ಎದುರಿಸುತ್ತಿರುವ ಸವಾಲುಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಾನೂ ಮಧ್ಯಮ ವರ್ಗದವಳ ಮತ್ತು ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತೇನೆʼʼ ಎಂದು ಹೇಳಿದ್ದರು.

2024ರ ಬಜೆಟ್ ಹೊಸ ತೆರಿಗೆ ಆಡಳಿತದ ಅಡಿಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳಿಗೆ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. 10 ಲಕ್ಷ ರೂ. ವರೆಗಿನ ಆದಾಯ ಹೊಂದಿರುವವರಿಗೆ ತೆರಿಗೆ ಕಡಿತ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ.

Viral News: ಮಾಜಿ ʼರಾʼ ಅಧಿಕಾರಿ, ಪ್ರಧಾನಿ ಮೋದಿಯ ಸ್ಪೆಷಲ್ ಕಮಾಂಡೋಗೆ ಬಿಗ್‌ ಬಾಸ್‌ 18 ಆಫರ್‌? ಈ ಬಗ್ಗೆ ಅವರು ಹೇಳಿದ್ದೇನು?

ʼʼಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳ ಅಡಿಯಲ್ಲಿ ಮೂಲ ವಿನಾಯಿತಿ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹೊಸ ತೆರಿಗೆ ಪದ್ಧತಿಯಲ್ಲಿ, ತೆರಿಗೆಗೆ ಒಳಪಡುವ ಆದಾಯವು 7 ಲಕ್ಷ ರೂ. ವನ್ನು ಮೀರದಿದ್ದರೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲʼʼ ಎಂದು ಅವರು ತಿಳಿಸಿದ್ದರು.