ಸಾಮಾನ್ಯವಾಗಿ ಜನರು ಮನೆಯಲ್ಲಿ ವಾಸವಾಗಿದ್ದ ಮೇಲೆ ಅಲ್ಲಿ ಅಡುಗೆ ಮಾಡಿ ಊಟ ಮಾಡುವುದು ಸಹಜ. ಇದು ಎಲ್ಲಾ ಕಡೆಗಳಲ್ಲಿಯೂ ನಡೆಯುವ ದೈನಂದಿನ ಕೆಲಸವಾಗಿದೆ. ಕೆಲವೊಮ್ಮೆ ಸಮಾರಂಭಗಳು ಇದ್ದಾಗ ಮಾತ್ರ ಜನರು ಮನೆಯಲ್ಲಿ ಅಡುಗೆ ಮಾಡದೇ ಸಮಾರಂಭದ ಊಟಕ್ಕೆ ಹೋಗುವುದಿದೆ. ಆದರೆ ಮರುದಿನವಾದರೂ ಮನೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡಿಯೇ ಮಾಡುತ್ತಾರೆ. ಆದರೆ ಗುಜರಾತ್‌ನ ಚಾಂದಂಕಿ ಗ್ರಾಮದ ಜನರು ಮಾತ್ರ ತಮ್ಮ ಮನೆಗಳಲ್ಲಿ ಯಾವತ್ತೂ ಅಡುಗೆಯೇ ಮಾಡುವುದಿಲ್ಲವಂತೆ! ಈ ಸುದ್ದಿ ಎಲ್ಲೆಡೆ ವೈರಲ್ (Viral News) ಆಗಿದೆ.
ಇತ್ತೀಚಿನ ದಿನಗಳಲ್ಲಿ ಜನರು ಕೆಲಸಕ್ಕಾಗಿ ಹಾಗೂ ನಗರ ಜೀವನವನ್ನು ಆನಂದಿಸಲು ತಮ್ಮ ಹಳ್ಳಿಗಳನ್ನು ಬಿಟ್ಟು ದೂರದ ನಗರಕ್ಕೆ ಹೋಗುತ್ತಿದ್ದಾರೆ. ಅವರು ಅಲ್ಲಿ ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಾರೆ. ತಮ್ಮ ಹಳ್ಳಿಯನ್ನು ಮರೆತುಬಿಡುತ್ತಾರೆ. ಆದರೆ ಅವರನ್ನು ಸಾಕಿ ಸಲುಹಿದ ತಂದೆ ತಾಯಿ ಮಾತ್ರ ತಮ್ಮ ಹಳ್ಳಿಗಳನ್ನು ಬಿಡಲಾಗದೆ ಇಲ್ಲೇ ಇದ್ದು ತಮ್ಮ ಜೀವನವನ್ನು ಸಾಗಿಸುತ್ತಾರೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಗುಜರಾತ್‌ನ ಈ ಚಾಂದಂಕಿ ಗ್ರಾಮ. ಈ ಗ್ರಾಮದಲ್ಲಿ ಹೆಚ್ಚಿನ ಜನರು ವೃದ್ಧರೇ ಆಗಿದ್ದಾರೆ. ಇಲ್ಲಿನ ಯುವ ಜನರು ಕೆಲಸಕ್ಕಾಗಿ ನಗರಗಳಿಗೆ ಹೋಗಿದ್ದಾರೆ. ಹಾಗಾಗಿ ಇವರಿಗೆ ಅಡುಗೆ ಮಾಡಿಕೊಳ್ಳಲು ಕಷ್ಟವಾಗುತ್ತಿದ್ದ ಕಾರಣ ಇಲ್ಲಿನ ಜನರು ತಿಂಗಳಿಗೆ 2,000 ರೂ. ನೀಡಿ ಎಲ್ಲರೂ ಸೇರಿ ಗ್ರಾಮದ ಸಮುದಾಯದ ಭವನದಲ್ಲಿ ಅಡುಗೆ ಮಾಡಿ ಊಟ ಮಾಡುತ್ತಾರೆ. ಇಲ್ಲಿ ಅಡುಗೆ ಮಾಡಲು ಕೆಲಸದವರನ್ನು ಕೂಡ ನೇಮಿಸಲಾಗಿದೆ.
#DidYouKnow in #Gujarat's Chandanki village, food isn't cooked in individual homes? Instead, the entire village shares meals in a community kitchen. This initiative fosters community and senior care, crucial for the well-being of residents.@GujaratTourism pic.twitter.com/Xzy1LPWVNm
— Dhanraj Nathwani (@DhanrajNathwani) March 10, 2024
ಗ್ರಾಮದ ಸರಪಂಚ್ ಪೂನಂಭಾಯಿ ಪಟೇಲ್ ಈ ಕಾರ್ಯದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ನ್ಯೂಯಾರ್ಕ್‌ನಲ್ಲಿ 20 ವರ್ಷಗಳನ್ನು ಕಳೆದ ನಂತರ, ಪಟೇಲರು ಹಿಂದಿರುಗಿದಾಗ ಚಾಂದಂಕಿ ಗ್ರಾಮದ ವೃದ್ಧರು ದೈನಂದಿನ ಕೆಲಸಗಳನ್ನು ಮಾಡಲು ಕಷ್ಟಪಡುತ್ತಿರುವುದನ್ನು ನೋಡಿದ್ದರು. ಅನೇಕ ಯುವಕರು ನಗರಗಳಿಗೆ ತೆರಳಿದ್ದರಿಂದ ಹಳ್ಳಿಯಲ್ಲಿ ಜನಸಂಖ್ಯೆ 1,100ರಿಂದ ಕೇವಲ 500ಕ್ಕೆ ಇಳಿದಿತ್ತು. ಹಾಗಾಗಿ ಪಟೇಲರು ಈ ಊಟದ ಕ್ರಮವನ್ನು ಪರಿಚಯಿಸಿದ್ದಾರೆ. ಪ್ರತಿ ಹಳ್ಳಿಗರು ತಿಂಗಳಿಗೆ 2,000 ರೂ. ಕೊಡುಗೆ ನೀಡುತ್ತಾರೆ. ಈ ಹಣದಿಂದ ಬಾಣಸಿಗರನ್ನು ನೇಮಿಸಿಕೊಂಡು ಪೌಷ್ಟಿಕವಾದ ಆಹಾರ ತಯಾರಿಸಿ ದಿನಕ್ಕೆ ಎರಡು ಬಾರಿ ಊಟ ನೀಡಲಾಗುತ್ತದೆ. ಊಟವನ್ನು ಗ್ರಾಮದ ಸಮುದಾಯ ಭವನದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಮಾಡುತ್ತಾರೆ. ಇದರಿಂದ ಇಲ್ಲಿ ಹಬ್ಬದ ವಾತಾವರಣದ ಮನೆಮಾಡುತ್ತದೆ. ಇಲ್ಲಿ ಅಡುಗೆಯವರಿಗೆ ತಿಂಗಳಿಗೆ 11,000 ರೂ. ಸಿಗುತ್ತದೆ. ಇದರಿಂದ ಸಾಂಪ್ರದಾಯಿಕ ಗುಜರಾತಿ ಭಕ್ಷ್ಯಗಳನ್ನು ತಯಾರಿಸುತ್ತಾರೆ, ಮತ್ತು ಇಲ್ಲಿನ ಊಟವು ಆರೋಗ್ಯಕರವಾಗಿರುತ್ತದೆ.
ಇದನ್ನೂ ಓದಿ: ಲತಾ ಮಂಗೇಶ್ಕರ್ ಕುರಿತ ಈ ಸಂಗತಿಗಳು ನಿಮಗೆ ಗೊತ್ತೆ?
ಅಲ್ಲದೇ ಚಾಂದಂಕಿಯ ಈ ಕ್ರಮವು ಇತರ ಭಾರತೀಯ ಹಳ್ಳಿಗಳಿಗೆ ಸ್ಫೂರ್ತಿ ನೀಡಿದೆ. ಇಲ್ಲಿನ ನಿವಾಸಿಗಳು ತಮ್ಮ ಪೂರ್ವಜರ ಮನೆಗಳಲ್ಲಿ ವಾಸಿಸುತ್ತಿದ್ದಾರೆ, ಹಳ್ಳಿಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ ಮತ್ತು ಕೃಷಿಯಲ್ಲಿ ತೊಡಗುತ್ತಾರೆ. ಬದಲಾಗುತ್ತಿರುವ ಸಮಾಜದಲ್ಲಿ ಹಳ್ಳಿಗಾಡಿನ ಸೊಬಗು ಇನ್ನೂ ಇಲ್ಲಿ ನೆಲೆಸಿದೆ.