Friday, 22nd November 2024

Viral News: ನೀವು ತಂದೂರಿ ರೊಟ್ಟಿ ಪ್ರಿಯರೇ? ಈ ಅಸಹ್ಯ ಮೇಕಿಂಗ್‌ ವೀಡಿಯೊ ನೋಡಲೇಬೇಕು

Viral News

ಲಕ್ನೋ: ಆಹಾರ ಮತ್ತು ಆರೋಗ್ಯದ ನಡುವೆ ನೇರ ಸಂಬಂಧವಿದೆ. ಇದೇ ಕಾರಣಕ್ಕೆ ʼಊಟ ಬಲ್ಲವರಿಗೆ ರೋಗವಿಲ್ಲʼ ಎನ್ನುವ ಗಾದೆ ಮಾತು ಹುಟ್ಟಿಕೊಂಡಿದೆ. ನಾವು ಆರೋಗ್ಯವಂತರಾಗಿರಬೇಕಾದರೆ ಸೇವಿಸುವ ಆಹಾರವೂ ಅಷ್ಟೇ ಶುಚಿಯಾಗಿರಬೇಕು. ಇದೇ ಕಾರಣಕ್ಕೆ ಆಹಾರ ಮತ್ತು ಆಹಾರ ತಯಾರಿಸುವ ಸ್ಥಳ ಶುಚಿಯಾಗಿರಬೇಕು ಎನ್ನುತ್ತಾರೆ. ಹೀಗಾಗಿ ಸರ್ಕಾರ ಆಗಾಗ ಹೋಟೆಲ್‌, ಬೇಕರಿಗಳಿಗೆ ದಾಳಿ ಮಾಡಿ ಸ್ಥಳ ಪರಿಶೀಲನೆ ನಡೆಸುತ್ತದೆ. ಅದಾಗ್ಯೂ ಅಧಿಕಾರಿಗಳ ಕಣ್ಣು ತಪ್ಪಿಸಿ‌, ನಿಯಮಗಳನ್ನು ಗಾಳಿಗೆ ತೂರಿ ಈಗಲೂ ಅನೇಕ ಕಡೆ ಬೇಕಾಬಿಟ್ಟಿಯಾಗಿ ಆಹಾರ ತಯಾರಿಸುವವರಿಗೇನೂ ಕಡಿಮೆ ಇಲ್ಲ. ಇಂತಹ ವೀಡಿಯೊ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಅಂತಹದ್ದೇ ವೀಡಿಯೊ ಒಂದು ಈಗ ವೈರಲ್‌ ಆಗಿದೆ. ತಂದೂರಿ ರೊಟ್ಟಿ ಪ್ರಿಯರು ದೃಶ್ಯವನ್ನು ನೋಡಲೇ ಬೇಕು (Viral News).

ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದ ಹೋಟೆಲ್‌ ಒಂದರಲ್ಲಿ ಕಂಡುಬಂದ ಈ ದೃಶ್ಯ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ. ಇಲ್ಲೊಬ್ಬ ತಂದೂರಿ ರೊಟ್ಟಿ ತಯಾರಿಸುವಾಗ ಅದರ ಮೇಲೆ ಎಂಜಲು ಉಗುಳುವುದು ವೀಡಿಯೊದಲ್ಲಿ ಸೆರೆಯಾಗಿದೆ. ಸದ್ಯ ವೀಡಿಯೊ ನೋಡಿದರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವೀಡಿಯೊದಲ್ಲಿ ಏನಿದೆ?

ಗ್ರೇಟರ್‌ ನೋಯ್ಡಾದ ಹೋಟೆಲ್‌ ಒಂದರಲ್ಲಿ ತಂದೂರಿ ರೊಟ್ಟಿ ತಯಾರಿಸುವುದನ್ನು ತೋರಿಸುವ ಮೂಲಕ ವೀಡಿಯೋ ಆರಂಭವಾಗುತ್ತದೆ. ಒಲೆಯ ಮುಂದೆ ನಿಂತು ಯುವಕನೊಬ್ಬ ರೊಟ್ಟಿ ಬೇಯಿಸುತ್ತಿರುತ್ತಾನೆ. ಈ ವೇಳೆ ಆತ ರೊಟ್ಟಿಗೆ ಎಂಜಲನ್ನು ಉಗುಳಿ ಅದನ್ನು ಬೇಯಿಸುವುದು ಕಂಡು ಬಂದಿದೆ. ಸಮೀಪದಲ್ಲಿದ್ದ ಯುವಕನೊಬ್ಬ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಸದ್ಯ ಈ ವೀಡಿಯೊ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ನೆಟ್ಟಿಗರು ಏನಂದ್ರು?

ಈ ವೀಡಿಯೊ ನೋಡಿದ ಹಲವರು ಪೊಲೀಸ್‌ ಕಮೀಷನರ್‌ಗೆ ದೂರು ನೀಡಿ ರೊಟ್ಟಿ ತಯಾರಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ವೀಡಿಯೊ ವೈರಲ್‌ ಆದ ಬಳಿಕ ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕಮೀಷನರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ?

ರಬುಪುರದಲ್ಲಿ ಎ-ಒನ್ ಎಂಬ ಹೋಟೆಲ್‌ನಲ್ಲಿ ಯುವಕನೊಬ್ಬ ರೊಟ್ಟಿ ತಯಾರಿಸುವ ವೇಳೆ ಉಗುಳಿದ್ದಾನೆ. ಆತನ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಮೀಷನರ್‌ಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ಮತ್ತೊರ್ವ ಆಟೋ ಚಾಲಕನ ಪುಂಡಾಟ- ಕುಡಿದ ಮತ್ತಿನಲ್ಲಿ ಯುವತಿಗೆ ಕಿರುಕುಳ; ಟ್ರಾಫಿಕ್‌ ಪೊಲೀಸ್‌ಗೆ ಕಪಾಳಮೋಕ್ಷ-ವಿಡಿಯೋ ಇದೆ

ಕೆಲವು ದಿನಗಳ ಹಿಂದೆ ಮಸಾಜ್‌ ಮಾಡುವಾಗ ಕ್ಷೌರದಂಗಡಿಯವನು ಕ್ರೀಂ, ಲೋಷನ್‌ಗಳನ್ನು ಹಚ್ಚುವ ಬದಲು ಮುಖಕ್ಕೆ ಎಂಜಲು ಉಗಿದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಳಿಕ ಆರೋಪಿ ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿನ ಅಮ್ಜದ್‌ನನ್ನು ಪೊಲೀಸರು ಬಂಧಿಸಿದ್ದರು. ಆ ಘಟನೆ ಮರೆಯಾಗುವ ಮುನ್ನ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.