Saturday, 16th November 2024

Viral Video: ಬೈಕ್‍ ಮೇಲೆ ಒಂದೇ ಕುಟುಂಬದ 8 ಮಂದಿಯ ಜಾಲಿರೈಡ್‌! ಟ್ರಾಫಿಕ್ ಪೊಲೀಸ್ ಕೈಗೆ ಸಿಕ್ಕಿಬಿದ್ದಾಗ ಆಗಿದ್ದೇನು?

ಉತ್ತರಪ್ರದೇಶ: ರಸ್ತೆಯ ಅಪಘಾತದ ಪ್ರಕರಣ ಹೆಚ್ಚಾಗುತ್ತಿರುವ ಕಾರಣ  ಟ್ರಾಫಿಕ್ ರೂಲ್ಸ್‌ ಸರಿಯಾಗಿ ಪಾಲಿಸುವಂತೆ ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ, ಜನರು ಅದನ್ನು ಲೆಕ್ಕಿಸದೆ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಇದರಿಂದ ಕೊನೆಗೆ ಅನಾಹುತ ಸಂಭವಿಸುತ್ತದೆ. ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಇತ್ತೀಚೆಗೆ  ಒಂದೇ ಕುಟುಂಬದ 8 ಜನರು ಒಂದೇ ಬೈಕ್‍ನಲ್ಲಿ ಪ್ರಯಾಣಿಸಿದ್ದಾರೆ. ಆಗ ಅವರನ್ನು ಟ್ರಾಫಿಕ್ ಪೊಲೀಸ್ ತಡೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ  ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ತನ್ನ ಕುಟುಂಬದ ಇತರ 7 ಸದಸ್ಯರನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಪ್ರಯಾಣಿಸುತ್ತಿದ್ದಾಗ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅವರು ಒಮ್ಮೆಲೆ ಬೈಕ್‍ನಲ್ಲಿದ್ದ ಸದಸ್ಯರನ್ನು ಲೆಕ್ಕ ಹಾಕಿ ಒಟ್ಟು 8 ಜನರಿರುವುದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಜನರ ಗಮನಸೆಳೆದಿದೆ.

ವರದಿ ಪ್ರಕಾರ, ಈ ಘಟನೆ ಶಹಜಹಾನ್ಪುರದ ಮಿರ್ಜಾಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ. ಗಂಡ-ಹೆಂಡತಿ ಮತ್ತು ಅವರ 6 ಮಕ್ಕಳು ಸೇರಿದಂತೆ 8 ಜನರು ಒಂದೇ ಬೈಕ್‍ನಲ್ಲಿ ಪ್ರಯಾಣ ಮಾಡಿದ್ದಾರೆ. ಮೂವರು ಮಕ್ಕಳು ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದ್ದರು. ಅದರ ಜತೆಗೆ ಅವರು ಇತರ ಗೃಹೋಪಯೋಗಿ ವಸ್ತುಗಳನ್ನು ಸಹ ಬೈಕ್‍ಗೆ ಕಟ್ಟಿ ಸಾಗಿಸಿದ್ದಾರಂತೆ. ಇದನ್ನು ನೋಡಿದ ಟ್ರಾಫಿಕ್ ಪೊಲೀಸರು ಬೈಕ್‍ ನಿಲ್ಲಿಸಿ  ಅವರನ್ನು ಪ್ರಶ್ನಿಸಿದ್ದಾರೆ.

ಟ್ರಾಫಿಕ್ ಪೊಲೀಸ್ ಕುಟುಂಬ ಸದಸ್ಯರನ್ನು ಎಣಿಸಿ, “ನೀವು ಸಂಚಾರ ನಿಯಮಗಳನ್ನು ಯಾಕೆ ಪಾಲಿಸುತ್ತಿಲ್ಲ?” ಎಂದು ಕುಟುಂಬವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ನಡುವೆ ಈ ಘಟನೆಯನ್ನು ವಿಡಿಯೊ ಮಾಡಿದ ವ್ಯಕ್ತಿಯೊಬ್ಬರು  ವ್ಯಂಗ್ಯವಾಗಿ “ನಿಮ್ಮ ಬೈಕನ್ನು ಮಾರಾಟ ಮಾಡಿ ಮತ್ತು ಅದರ ಬದಲು ರಿಕ್ಷಾವನ್ನು ಖರೀದಿಸಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೆಂಗಳೂರು ಏರ್‌ಪೋರ್ಟ್‌ ನೋಡಿ ಫುಲ್‌ ಫಿದಾ ಆದ ಜಪಾನಿ ಯುಟ್ಯೂಬರ್! ಭಾರೀ ವೈರಲ್‌ ಆಗ್ತಿದೆ ಆಕೆಯ ವಿಡಿಯೊ

ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಅನೇಕರು ಇದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೊಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಟ್ರಾಫಿಕ್ ಪೊಲೀಸರು ಆ ವ್ಯಕ್ತಿಗೆ ಈ ರೀತಿ ಟ್ರಾಫಿಕ್ ನಿಯಮ ಉಲ್ಲಂಘನೆಯನ್ನು ಮತ್ತೆ ಮಾಡಬಾರದು, ಟ್ರಾಫಿಕ್ ನಿಯಮವನ್ನು ಚಾಚು ತಪ್ಪದೇ ಪಾಲಿಸಬೇಕು ಎಂದು ತಿಳಿ ಹೇಳಿ ನಂತರ ಅವರನ್ನು ಬಿಟ್ಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ.