Thursday, 21st November 2024

Viral Video: ಇದ್ದಕ್ಕಿದ್ದಂತೆ ವಾಲಿದ ಐದು ಅಂತಸ್ತಿನ ಕಟ್ಟಡ; ವಿಡಿಯೊ ನೋಡಿ

Viral Video

ಹೈದರಾಬಾದ್‍: ಹೈದರಾಬಾದ್‍ನಲ್ಲಿ  ಐದು ಅಂತಸ್ತಿನ ಕಟ್ಟಡವೊಂದು ಅಪಾಯಕಾರಿಯಾಗಿ ಬದಿಗೆ ವಾಲಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಅಲ್ಲಿನ ನಿವಾಸಿಗಳಿಗೆ ಕಟ್ಟಡ ಕುಸಿಯುವ ಭೀತಿ ಎದುರಾಗಿತ್ತು. ಇತ್ತೀಚೆಗೆ ರಾತ್ರಿಯ ವೇಳೆ ಕಟ್ಟಡವು ಇದ್ದಕ್ಕಿದ್ದಂತೆ ಎಡಕ್ಕೆ ವಾಲಿದ್ದು, ನಿವಾಸಿಗಳಲ್ಲಿ ಭೀತಿಯನ್ನು ಹುಟ್ಟುಹಾಕಿತ್ತು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈ ದೃಶ್ಯ ಈಗ ಎಲ್ಲೆಡೆ ವೈರಲ್ (Viral Video) ಆಗಿದೆ.

ಹ್ಯಾಪಿ ರೆಸಿಡೆನ್ಸಿ ಎಬ ಹೆಸರಿನ ಈ ಕಟ್ಟಡವನ್ನು ಕೇವಲ ಎರಡು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಹೈದರಾಬಾದ್‍ನ ಗಚಿಬೌಲಿ ಪ್ರದೇಶದ ಸಿದ್ದಿಕ್ ನಗರದಲ್ಲಿರುವ ಈ ಕಟ್ಟಡ ಹಲವಾರು ಕುಟುಂಬಗಳಿಗೆ ನೆಲೆಯಾಗಿತ್ತು.  ಈ ಕಟ್ಟಡದಲ್ಲಿ ಒಟ್ಟು 12 ಅಪಾರ್ಟ್‌ಮೆಂಟ್‌ಗಳಿವೆ.

ರಾತ್ರಿ ಕಟ್ಟಡ ಇದ್ದಕ್ಕಿದ್ದಂತೆ ಒಂದು ಬದಿ ವಾಲಿದ್ದು,  ಅದರಲ್ಲಿದ್ದ ನಿವಾಸಿಗಳು ಭಯಭೀತರಾಗಿದ್ದಾರೆ.  ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ಗಾಬರಿಯಿಂದ ಮೂರನೇ ಮಹಡಿಯಿಂದ ಜಿಗಿದಿದ್ದಾನೆ. ಉಳಿದ ಜನರು ಕಟ್ಟಡದಿಂದ ಹೊರಬಂದು ರಾತ್ರಿಯಿಡೀ ಬಯಲಿನಲ್ಲಿ ಕಳೆಯಬೇಕಾಯಿತು. ಈ ಘಟನೆಯಲ್ಲಿ ಕೆಲವು ನಿವಾಸಿಗಳು ಗಾಯಗೊಂಡಿದ್ದು, ಮೂರನೇ ಮಹಡಿಯಿಂದ ಜಿಗಿದ ವ್ಯಕ್ತಿಗೆ ಬೆನ್ನಿಗೆ ಗಂಭೀರ ಗಾಯಗಳಾಗಿವೆ ಮತ್ತು ಕಾಲು ಮುರಿದಿದೆಯಂತೆ.

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ರಾತ್ರಿ 50ಕ್ಕೂ ಹೆಚ್ಚು ನಿವಾಸಿಗಳನ್ನು ಈ ಕಟ್ಟಡದಿಂದ ಸ್ಥಳಾಂತರಿಸಿದೆ. ಮರುದಿನ ಸಂಜೆಯ ವೇಳೆಗೆ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮಗೊಳಿಸುವ ಕಾರ್ಯ ಪೂರ್ಣಗೊಳಿಸಿದೆ.

ವರದಿ ಪ್ರಕಾರ, ರಾತ್ರಿ 7.30ರ ಸುಮಾರಿಗೆ ಕಟ್ಟಡವು ನಡುಗಲು ಶುರುವಾಗಿ  ಬಿರುಕುಗಳು ಕಾಣಿಸಿಕೊಂಡವು. ರಾತ್ರಿ 8:30ರ ವೇಳೆಗೆ ಪೊಲೀಸರು ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಪಕ್ಕದ ಪ್ಲಾಟ್‍ನಲ್ಲಿ ಜಾಗದಲ್ಲಿ ಅಗೆಯುವ ಕೆಲಸ ನಡೆಯುತ್ತಿದ್ದರಿಂದ ಹ್ಯಾಪಿ ರೆಸಿಡೆನ್ಸಿಯ ಅಡಿಪಾಯ ದುರ್ಬಲವಾಗಿ ಈ ಘಟನೆ ಸಂಭವಿಸಿದೆ  ಎಂದು ನಗರ ಯೋಜನಾ ಇಲಾಖೆ ಹೇಳಿದೆ.

ಇದನ್ನೂ ಓದಿ:ಸಾಕು ನಾಯಿಯನ್ನು ಕ್ರೂರವಾಗಿ ಥಳಿಸಿದ ಮಹಿಳೆ; ಬೆಚ್ಚಿ ಬೀಳಿಸುವ ವಿಡಿಯೊ

ಪಕ್ಕದ ಪ್ಲಾಟ್‍ನಲ್ಲಿ ಅಗೆಯುವ  ಕೆಲಸ ಮಾಡಿದ ಬಿಲ್ಡರ್ ನಷ್ಟಕ್ಕೆ ಪರಿಹಾರವನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ ನಿರ್ಲಕ್ಷ್ಯ, ವೈಯಕ್ತಿಕ ಸುರಕ್ಷತೆಗೆ ಅಪಾಯ (ಸೆಕ್ಷನ್ 125) ಮತ್ತು ಹಾನಿ (ಸೆಕ್ಷನ್ 324) ಸೇರಿದಂತೆ ವಿವಿಧ ಆರೋಪಗಳೊಂದಿಗೆ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.