Sunday, 1st December 2024

Viral Video: ಪ್ರಿಯಕರನನ್ನು ಪೆಟ್ಟಿಗೆಯಲ್ಲಿ ಅಡಗಿಸಿಟ್ಟ ಪ್ರಿಯತಮೆ; ಮುಂದೇನಾಯ್ತು ನೋಡಿ!

Viral Video

ಪ್ರೀತಿ ಒಂದು ಅದ್ಭುತವಾದ ಶಕ್ತಿ. ಈ ಪ್ರೀತಿಯ ಬಲೆಗೆ ಬಿದ್ದವರು ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಹುಡುಗಿಯೊಬ್ಬಳು ತನ್ನನ್ನು ಭೇಟಿಯಾಗಲು ಬಂದ ಪ್ರೇಮಿಯನ್ನು ಮನೆಯವರ ಕಣ್ಣಿಗೆ ಬೀಳದಂತೆ ಕಾಪಾಡಲು ಸಿನಿಮೀಯ ಶೈಲಿಯಂತೆ ಪೆಟ್ಟಿಗೆಯಲ್ಲಿ ಅಡಗಿಸಿಟ್ಟ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್ (Viral Video) ಆಗಿದೆ.

ಪ್ರೀತಿ, ಪ್ರೇಮದ ಬಲೆಗೆ ಬಿದ್ದವರು, ಪಾರ್ಕ್‌ನಲ್ಲಿ, ಸಿನಿಮಾ ಥೀಯೇಟರ್‌ನಲ್ಲಿ, ಹೋಟೆಲ್‌ನಲ್ಲಿ ಭೇಟಿಯಾಗುವುದು ಸಹಜ. ಆದರೆ ಕೆಲವೊಮ್ಮೆ ಮನೆಯವರೆಗೂ ಇವರ ಭೇಟಿ ಕಾರ್ಯಕ್ರಮಗಳು ಇರುತ್ತವೆ. ಇಲ್ಲೂ ಕೂಡ ಅಂತಹದ್ದೇ ಒಂದು ಘಟನೆ ನಡೆದಿದೆ. ತನ್ನ ಹುಡಗಿಯನ್ನು ಭೇಟಿಯಾಗಲು ಮನೆಗೆ ಬಂದ ಪ್ರಿಯಕರನನ್ನು ಹುಡುಗಿಯು ಯಾರಿಗೂ ಗೊತ್ತಾಗಬಾರದು ಎಂದು ಮನೆಯ ಪೆಟ್ಟಿಗೆಯೊಳಗೆ ಬಚ್ಚಿಟ್ಟು ಹೊರಗಿನಿಂದ ಲಾಕ್‌ ಮಾಡಿದ್ದಳು.

ಮನೆಯವರಿಗೆ ಹುಡುಗಿಯ ಮೇಲೆ ಯಾಕೋ ಅನುಮಾನ ಬಂದು ಅವಳ ಕೋಣೆಯನ್ನು ನೋಡಿದಾಗ ಅಲ್ಲಿ ಬಟ್ಟೆಗಳೆಲ್ಲಾ ಅಸ್ತವ್ಯಸ್ತವಾಗಿ ಬಿದ್ದಿತ್ತು. ಇದರಿಂದ ಅವರ ಅನುಮಾನ ಹೆಚ್ಚಾಗಿ ಅಲ್ಲಿಯೇ ಇದ್ದ ಪೆಟ್ಟಿಗೆಯನ್ನು ತೆರೆಯಲು ಅವಳ ಬಳಿ ಹೇಳಿದ್ದಾರೆ. ಅದಕ್ಕವಳು ನಿರಾಕರಿಸಿದಾಗ ಅನುಮಾನ ಮತ್ತಷ್ಟೂ ಗಟ್ಟಿಯಾಗಿ ಪೆಟ್ಟಿಗೆಯನ್ನು ತೆರೆಯಲು ಒತ್ತಾಯಿಸಿದ್ದಾರೆ. ಹುಡುಗಿ ಪೆಟ್ಟಿಗೆ ತೆರೆದಾಗ ಪ್ರಿಯಕರ ಅದರಿಂದ ಹೊರ ಬಂದಿದ್ದಾನೆ. ಇದನ್ನು ನೋಡಿದ ಕುಟುಂಬದ ಸದಸ್ಯರು ಶಾಕ್‌ ಆಗಿದ್ದಾರೆ. ಅಷ್ಟು ಸಣ್ಣ ಪೆಟ್ಟಿಗೆಯಲ್ಲಿ ಆತ ಅದು ಹೇಗೆ ಅಡಗಿ ಕುಳಿತ ಎನ್ನುವುದೇ ಎಲ್ಲರಿಗೂ ಆಶ್ಚರ್ಯಕರವಾಗಿತ್ತು.

ಇದನ್ನೂ ಓದಿ: ನವವಧು ಕಾಲಿನ ಮೂಲಕವೇ ಪತಿಗೆ ಆಹಾರ ತಿನ್ನಿಸುವುದು ಇಲ್ಲಿನ ಸಂಪ್ರದಾಯ; ಎಲ್ಲಿ ಇದು?

ಈ ವಿಡಿಯೊವನ್ನು @Viralvibes07 ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದಕ್ಕೆ ಲಕ್ಷಾಂತರ ಲೈಕ್ಸ್ ಮತ್ತು ವೀಕ್ಷಣೆಗಳು ಬಂದಿದೆ. ಅಲ್ಲದೇ ಇದು ನೆಟ್ಟಿಗರಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪ್ರೇಮಿಗಳು ಪ್ರೀತಿಗಾಗಿ ಏನು ಬೇಕಾದರೂ ಮಾಡಬಹುದು ಎಂಬುದನ್ನು ಈ ವಿಡಿಯೊ ತೋರಿಸುತ್ತದೆ.