Thursday, 12th December 2024

Viral Video: ಶಾಪಿಂಗ್ ಮಾಡುವಾಗ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ವ್ಯಕ್ತಿ ಸಾವು!

Viral Video

ಹೈದರಾಬಾದ್: ಸಾವು ಯಾರಿಗೆ ಯಾವ ಸಮಯದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈಗ ನೋಡಿದ ವ್ಯಕ್ತಿ ಇನ್ನೊಂದು ಕ್ಷಣದಲ್ಲೇ ನಮ್ಮ ಕಣ್ಣಮುಂದೆಯೇ ಕುಸಿದು ಬಿದ್ದು ಸಾವನಪ್ಪುತ್ತಾರೆ. ಹಾಗಾಗಿ ಜೀವನ ಎನ್ನುವುದು ನೀರ ಮೇಲಿನ ಗುಳ್ಳೆಯಂತೆ, ಯಾವ ಕ್ಷಣದಲ್ಲಾದರೂ ಒಡೆದು ಹೋಗಬಹುದು ಎಂಬ ಮಾತನ್ನು ಕೆಲವರು ಆಗಾಗ ಹೇಳುತ್ತಿರುತ್ತಾರೆ. ಇದೀಗ ಜೀವನ ಕ್ಷಣಿಕ ಎನ್ನುವುದಕ್ಕೆ ಕೆಪಿಹೆಚ್‍ಬಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಗತಿ ನಗರದ ಬಳಿಯ ಜಾಕಿ ಶೋರೂಂನಲ್ಲಿ ನಡೆದ ಘಟನೆಯೇ ಸಾಕ್ಷಿ. ಇಲ್ಲಿ  ಶಾಪಿಂಗ್ ಮಾಡುವಾಗ 37 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್(Viral Video) ಆಗಿದೆ.

ಜಾಕಿ ಶೋರೂಂನಲ್ಲಿ ಬಟ್ಟೆ ಖರೀದಿಸುವಾಗ ಕುಸಿದುಬಿದ್ದ ವ್ಯಕ್ತಿಯನ್ನು 37 ವರ್ಷದ ಕಲಾಲ್ ಪ್ರವೀಣ್ ಗೌಡ್ ಎಂದು ಗುರುತಿಸಲಾಗಿದೆ. ವೈರಲ್ ವಿಡಿಯೊದಲ್ಲಿ ವ್ಯಕ್ತಿ ನಿಂತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಆಗ ಅಲ್ಲಿದ್ದ ಬಟ್ಟೆ ಅಂಗಡಿಯ ಸಿಬ್ಬಂದಿಗಳು ಸೇರಿ ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೃದಯಾಘಾತದಿಂದ ಸಾವನಪ್ಪುತ್ತಿದ್ದಾರೆ. ಈ ಘಟನೆ ಇದೇ ಮೊದಲಲ್ಲಾ ಈ ಹಿಂದೆ ಏಪ್ರಿಲ್‍ನಲ್ಲಿ ಹೈದರಾಬಾದ್‍ನಲ್ಲಿ ಇಸ್ಲಾವತ್ ಸಿದ್ದು ಎಂಬ 20 ವರ್ಷದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ. ಅಷ್ಟೇ ಅಲ್ಲದೇ ಹೆಚ್‍ಸಿಎಲ್‍ನ ಸಾಪ್ಟ್‌ವೇರ್‌ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ 40 ವರ್ಷದ ವ್ಯಕ್ತಿಯೊಬ್ಬರು ತಮ್ಮ ಕಚೇರಿಯ ಶೌಚಾಲಯದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಎರಡು ದಿನಗಳ ಹಿಂದೆ ನಾಗ್ಪುರದಲ್ಲಿ ಈ ದುರಂತ ಸಂಭವಿಸಿದೆ. ಕಳೆದ ವಾರ ಹೆಚ್‍ಡಿಎಫ್‍ಸಿ ಬ್ಯಾಂಕ್ ಉದ್ಯೋಗಿ ಸದಾಫ್ ಫಾತಿಮಾ ಲಕ್ನೋದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ.

ಇದನ್ನೂ ಓದಿ: ಹಸಿವಿನಿಂದ ಸಾಯುವಂತೆ ಮಾಡಿದ ಅಪ್ಪನ ಬಳಿ ಕೊನೇ ಕ್ಷಣದಲ್ಲಿ ಮಗ ಬೇಡಿದ್ದೇನು? ಹೃದಯ ವಿದ್ರಾವಕ ವಿಡಿಯೊ ವೈರಲ್

ಕೆಲವು ವರ್ಷಗಳ ಹಿಂದೆ, 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಹೃದಯಾಘಾತಕ್ಕೆ ಒಳಗಾಗುತ್ತಿದ್ದರು. ಆದರೆ ಕೋವಿಡ್ ಬಂದ ನಂತರ, 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹೃದಯಾಘಾತದಿಂದ ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಮೆರಿಕದಲ್ಲಿ ಸರಾಸರಿ 45 ವರ್ಷ ವಯಸ್ಸಿನವರು ಹೃದಯಾಘಾತದಿಂದ ಬಳಲುತ್ತಿದ್ದರೆ, ಭಾರತದಲ್ಲಿ ಸರಾಸರಿ 35 ವರ್ಷ ವಯಸ್ಸಿನವರು ಹೃದಯಾಘಾತದಿಂದ ಬಳಲುತ್ತಿದ್ದಾರೆ.ಇದಕ್ಕೆ ಅವರ ಕೆಟ್ಟ ಜೀವನಶೈಲಿಯೇ ಕಾರಣ ಎಂಬುದಾಗಿ ಹೃದಯರೋಗ ತಜ್ಞರು ತಿಳಿಸಿದ್ದಾರೆ.