ನವದೆಹಲಿ: ಅಮೆಜಾನ್‌ನ ವಾಯ್ಸ್ ಅಸಿಸ್ಟೆಂಟ್ ಅಲೆಕ್ಸಾ, ಶಾಪಿಂಗ್‌ಗೆ ಸಹಾಯ ಮಾಡುವುದರಿಂದ ಹಿಡಿದು ಸ್ಮಾರ್ಟ್ ಸಾಧನಗಳನ್ನು ನಿಯಂತ್ರಿಸುವವರೆಗೆ ತನ್ನ ಪ್ರಾಯೋಗಿಕ ಸಾಮರ್ಥ್ಯಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದೆ. ಆದರೆ ಇತ್ತೀಚೆಗೆ, ವೈರಲ್(Viral Video) ವೀಡಿಯೊವೊಂದು ಅಲೆಕ್ಸಾದ ಮತ್ತೊಂದು ಮುಖವನ್ನು ತೋರಿಸಿದೆ. ಪುಟ್ಟ ಹುಡುಗಿಯೊಬ್ಬಳ ಕೋರಿಕೆಗೆ ಅಲೆಕ್ಸಾ ನೀಡಿದ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿರುವ ಈ ಕ್ಲಿಪ್‌ನಲ್ಲಿ, ಪುಟ್ಟ ಹುಡುಗಿಯೊಬ್ಬಳು ತನ್ನನ್ನು ಬೈಯುವಂತೆ ಕೇಳಿಕೊಂಡಿದ್ದಾಳೆ ಇದಕ್ಕೆ ಅಲೆಕ್ಸಾ ನೀಡಿರುವ ತಮಾಷೆಯ ಪ್ರತಿಕ್ರಿಯೆಗಳು ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದೆ.
ಒಂದು ಹಾಸ್ಯಮಯ ವಿನಂತಿ
ನವೆಂಬರ್ 30 ರಂದು ಸೈಯದ್ ಸೈಕ್ವಾ ಸಾಲ್ವಿ ಎಂಬ ಬಳಕೆದಾರರು ಇನ್‌ಸ್ಟಾಗ್ರಾಂ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಹುಡುಗಿಯೊಬ್ಬಳು ಅಲೆಕ್ಸಾಗೆ “ಗಾಲಿ ದೋ ನಾ ಯಾರ್” (ಅಲೆಕ್ಸಾ, ನನಗೆ ಬೈದು ಬಿಡು) ಎಂದು ಕೇಳಿದ್ದಾಳೆ. ಇದಕ್ಕೆ ಅಲೆಕ್ಸಾ ಹಾಸ್ಯಮಯ ಉತ್ತರವನ್ನು ನೀಡಿದೆ: “ಗಾಲಿ ತೌಬಾ-ತೌಬಾ!”. ಇದಕ್ಕೆ ನಗುವ ಹುಡುಗಿ ನಿಂದಿಸುವಂತೆ ಕೇಳುತ್ತಲೇ ಇರುತ್ತಾಳೆ. ಆದರೆ ಪ್ರತಿ ಬಾರಿಯೂ, ಅಲೆಕ್ಸಾದ ಪ್ರತಿಕ್ರಿಯೆಗಳು ಸಖತ್ ತಮಾಷೆಯಾಗಿತ್ತು.
ಪದೇ ಪದೆ ಕೇಳಿದಾಗ ಅಲೆಕ್ಸಾ ಹೇಳುತ್ತದೆ, “ಇಲ್ಲ, ನಾನು ಈ ವಿಷಯದಲ್ಲಿ ತುಂಬಾ ಸುಸಂಸ್ಕೃತನಾಗಿದ್ದೇನೆ.” ಮತ್ತೊಂದು ಹಾಸ್ಯಮಯ ಪ್ರತ್ಯುತ್ತರದಲ್ಲಿ, “ಹಾಗಾದರೆ ನಾನು ಶಕ್ತಿಮಾನ್‌ಗೆ ಕ್ಷಮೆಯಾಚಿಸಬೇಕಾಗುತ್ತದೆ” ಎಂದು ಸಮಂಜಸವಲ್ಲದ ಉತ್ತರ ನೀಡುತ್ತದೆ. ಇದಕ್ಕೆ ಉತ್ತರಿಸಿದ ಪುಟ್ಟ ಪೋರಿ ಕ್ಷಮೆ ಮತ್ತೆ ಕೇಳಬಹುದು ಈಗ ನಿಂದಿಸು ಎಂದು ಕೇಳಿಕೊಳ್ಳುತ್ತಾಳೆ. ಸಂಭಾಷಣೆ ಮುಂದುವರಿಯುತ್ತಿದ್ದಂತೆ, ಅಲೆಕ್ಸಾ: “ನಿಂದನೆಗಳನ್ನು ಬಿಡಿ, ಒಂದು ಕಪ್ ಬಿಸಿ ಚಹಾವನ್ನು ಕುಡಿಯಿರಿ”, ಎಂದು ಹೇಳಿದೆ.
ಈ ಸುದ್ದಿಯನ್ನೂ ಓದಿ: 2025 ಹೇಗಿರಲಿದೆ? ಬಾಬಾ ವಂಗಾ ನುಡಿದ ಶಾಕಿಂಗ್ ಭವಿಷ್ಯವಾಣಿಯೇನು?
ಇನ್ಸ್ಟಾಗ್ರಾಮ್ ಒಂದರಲ್ಲೇ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. “ಸುನಿಯೆ ಅಲೆಕ್ಸಾ ಕಾ ಮಜೇದಾರ್ ಜವಾಬ್…” (ಅಲೆಕ್ಸಾದ ತಮಾಷೆಯ ಉತ್ತರವನ್ನು ಕೇಳಿ) ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವೀಡಿಯೊ ಪ್ರಸಾರವಾಗುತ್ತಿದ್ದಂತೆ, ಇದು ಸಾಮಾಜಿಕ ಮಾಧ್ಯಮದಲ್ಲಿ ನಗು ಮತ್ತು ಕುತೂಹಲದ ಅಲೆಯನ್ನು ಹುಟ್ಟುಹಾಕಿದೆ. ಅಲ್ಲದೆ, ಬಳಕೆದಾರರು ಅಲೆಕ್ಸಾದಿಂದ ತಮಗೆ ಸಿಕ್ಕ ಹಾಸ್ಯಕರ ಪ್ರತಿಕ್ರಿಯೆಗಳನ್ನು, ತಮ್ಮದೇ ಅನುಭವಗಳನ್ನು ಹಂಚಿಕೊಂಡಿದ್ದಾರೆ.