Friday, 22nd November 2024

Viral Video: ಸ್ನೇಹಿತನಿಗೆ ಗಿಫ್ಟ್‌ ಕೊಟ್ಟು ವಿಶ್‌ ಮಾಡೋಕೆ ವೇದಿಕೆ ಹತ್ತಿದವ ಕುಸಿದು ಬಿದ್ದು ಸಾವು; ಅಮೆಜಾನ್ ಉದ್ಯೋಗಿಯ ಈ ವಿಡಿಯೊ ವೈರಲ್

Viral Video

ಹೈದರಾಬಾದ್‌: ಜೀವನ ಎನ್ನುವುದು ಕ್ಷಣಿಕವಾದುದು. ಅದು ನೀರ ಮೇಲಿನ ಗುಳ್ಳೆಯಂತೆ ಯಾವಾಗಬೇಕಾದರೂ ಒಡೆದು ಹೋಗಬಹುದು. ರಾತ್ರಿ ಮಲಗಿದವರು ಬೆಳಿಗ್ಗೆ ಏಳುವುದೇ ಇಲ್ಲ, ಎಲ್ಲರ ಜೊತೆಗೆ ಕುಳಿತು ಮಾತನಾಡುತ್ತಿರುವವರು ಸಡನ್ನಾಗಿ ಬಿದ್ದು ಅಲ್ಲಿಯೇ ಜೀವ ಕಳೆದುಕೊಳ್ಳುವುದು ಹೀಗೆ ಸಾವೆಂಬುದು ಹೇಗೆ, ಎಲ್ಲಿಂದ ಬರುತ್ತದೆ ಎಂಬುದೇ ಗೊತ್ತಾಗದಂಥ ಸ್ಥಿತಿ ಇದೆ. ಇದೀಗ ಅಂತಹದೊಂದು ಘಟನೆ ಆಂಧ್ರಪ್ರದೇಶದ ಕರ್ನೂಲ್‍ನಲ್ಲಿ ನಡೆದಿದೆ. ಮದುವೆಯ ವೇದಿಕೆಯ ಮೇಲೆ ವಧು-ವರನಿಗೆ ವಿಶ್ ಮಾಡಲು ಹೋದ ಯುವಕನೊಬ್ಬ ಹೃದಯಾಘಾತದಿಂದ ಅಲ್ಲೆ ಕುಸಿದು ಬಿದ್ದು ಸಾವನಪ್ಪಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.

ಬೆಂಗಳೂರು ಮೂಲದ ಅಮೆಜಾನ್ ಉದ್ಯೋಗಿಯಾಗಿರುವ ವಂಶಿ ತನ್ನ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಪೆನುಮಡ ಗ್ರಾಮಕ್ಕೆ ಹೋಗಿದ್ದಾರಂತೆ. ವೇದಿಕೆಯಲ್ಲಿರುವ  ದಂಪತಿಗೆ ಉಡುಗೊರೆಯನ್ನು ನೀಡುವ ಸಂದರ್ಭದಲ್ಲಿ ವಂಶಿ ಕುಸಿದು ಬಿದ್ದಿದ್ದಾರೆ.

ವರದಿ ಪ್ರಕಾರ, ಕುಸಿದು ಬಿದ್ದ ವಂಶಿ ಅವರನ್ನು ತಕ್ಷಣ ಧೋನ್ ಸಿಟಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರೂ, ಅವರು ಆಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯು ಅನಿರೀಕ್ಷಿತ ಸನ್ನಿವೇಶಗಳಲ್ಲಿ ಹಠಾತ್ ಹೃದಯಾಘಾತದಿಂದ ಯುವ ಜನಾಂಗದವರು ಬಲಿಯಾಗುತ್ತಿರುವ ಬಗ್ಗೆ ಆತಂಕವನ್ನು ಉಂಟುಮಾಡಿದೆ.  ಜಿಮ್‍ಗಳು, ಕೆಲಸದ ಸ್ಥಳಗಳು ಮತ್ತು ಸಾಮಾಜಿಕ ಕೂಟಗಳು ಸೇರಿದಂತೆ ಇಂತಹ ಸಂದರ್ಭದಲ್ಲಿ ಇಂತಹ ಪ್ರಕರಣಗಳು ಹೆಚ್ಚು ನಡೆಯುತ್ತಿರುವುದಾಗಿ ತಜ್ಞರು ತಿಳಿಸಿದ್ದಾರೆ.

ಈ ರೀತಿ ಯುವಕರು ಹೃದಯಾಘಾತದಿಂದ ಸಾವನಪ್ಪಿದ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮಧ್ಯಪ್ರದೇಶದ ರೇವಾದ 31 ವರ್ಷದ ಪ್ರಕಾಶ್ ಸಿಂಗ್ ಬಘೇಲ್ ಸ್ನೇಹಿತರೊಂದಿಗೆ ಮಾತನಾಡುವಾಗ ಹಠಾತ್ ಹೃದಯಾಘಾತಕ್ಕೊಳಗಾಗಿ ಸಾವನಪ್ಪಿದ್ದರು. ಅಕ್ಟೋಬರ್ 20ರಂದು ಸಿರ್ಮೌರ್ ಜಂಕ್ಷನ್‍ನ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಫಿಟ್ ಆಗಿದ್ದು,  ನಿಯಮಿತ ವ್ಯಾಯಾಮ ಮಾಡುತ್ತಿದ್ದ  ಪ್ರಕಾಶ್, ಸ್ನೇಹಿತರ ಜೊತೆ ನಗುತ್ತಾ ಮಾತನಾಡುತ್ತಿದ್ದಾಗ ಒಂದು ಕ್ಷಣದಲ್ಲೇ  ಕುಸಿದು ಬಿದ್ದಿದ್ದಾರೆ.

ಇದನ್ನೂ ಓದಿ:ಪ್ರೀತಿ ತಿರಸ್ಕರಿಸಿದಕ್ಕೆ ಯುವತಿ ಮೇಲೆ ಡೆಡ್ಲಿ ಅಟ್ಯಾಕ್‌! ಪಾಗಲ್ ಪ್ರೇಮಿ ಸಿದ್ದಿಕ್ ರಾಜಾನ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆ

ಗಾಬರಿಗೊಂಡ ಅವರ ಸ್ನೇಹಿತರು ಅವರ ಮುಖದ ಮೇಲೆ ನೀರನ್ನು ಚಿಮುಕಿಸಿ ಮತ್ತು ಎದೆಯ ಭಾಗವನ್ನು ಒತ್ತುವುದರ ಮೂಲಕ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು.  ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ತಕ್ಷಣ ಪ್ರಕಾಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದುರದೃಷ್ಟವಶಾತ್, ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹಾಗೇ ಅವರ ಸಾವಿಗೆ ಹೃದಯಾಘಾತವೇ ಕಾರಣ ಎಂದಿದ್ದಾರೆ. ಪ್ರಕಾಶ್ ಅವರಿಗೆ ಯಾವುದೇ ರೀತಿಯ ದೀರ್ಘಕಾಲದ ಅನಾರೋಗ್ಯದ ಸಮಸ್ಯೆ ಇರಲಿಲ್ಲ. ಅವರು ಶಿಸ್ತುಬದ್ಧ ಆಹಾರವನ್ನು ಅನುಸರಿಸಿದ್ದರು ಮತ್ತು ಉತ್ತಮ ಆರೋಗ್ಯವನ್ನು ಹೊಂದಿದ್ದರು ಎನ್ನಲಾಗಿತ್ತು.