Friday, 22nd November 2024

Viral News: ಬಿಜೆಪಿ ಮುಖಂಡನ ಬೆದರಿಕೆ; ಉನ್ನತ ಅಧಿಕಾರಿಗಳ ಮುಂದೆಯೇ ಸಮವಸ್ತ್ರ ಕಳಚಿದ ಎಎಸ್‌ಐ: ವಿಡಿಯೊ ಇಲ್ಲಿದೆ

Viral News

ಭೋಪಾಲ್‌: ಬಿಜೆಪಿ ನಾಯಕರೊಬ್ಬರು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಮೇಲಾಧಿಕಾರಿಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ಮುಂದೆಯೇ ತಮ್ಮ ಸಮವಸ್ತ್ರ ಕಳಚಿದ ಹಳೆಯ ವಿಡಿಯೊ ಇದೀಗ ವೈರಲ್‌ ಆಗಿದೆ (Viral News). ಸದ್ಯ ಈ ವಿಚಾರ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 2ರಂದು ಈ ಘಟನೆ ನಡೆದಿದೆ.

ಸಹಾಯಕ ಸಬ್ ಇನ್ಸ್‌ಪೆಕ್ಟರ್‌ ವಿನೋದ್ ಮಿಶ್ರಾ ತಮ್ಮ ಸಮವಸ್ತ್ರವನ್ನು ಹಿರಿಯ ಅಧಿಕಾರಿಗಳು ಮತ್ತು ಪಾಲಿಕೆ ಅಧಿಕಾರಿಗಳ ಸಮಕ್ಷಮದಲ್ಲಿ ಕಳಚುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಏನಾಗಿತ್ತು?

ಈ ವರ್ಷದ ಫೆಬ್ರವರಿಯಲ್ಲಿ ಕೊಟ್ವಾಲಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಚರಂಡಿ ನಿರ್ಮಿಸುವ ವಿಚಾರದಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ ವಿನೋದ್ ಮಿಶ್ರಾ ಮತ್ತು ಸ್ಥಳೀಯ ನಿವಾಸಿಗಳ ನಡುವೆ ವಿವಾದ ಭುಗಿಲೆದ್ದಿತ್ತು. ವಾಗ್ವಾದದ ನಂತರ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಮತ್ತು ಪೊಲೀಸರು ಸಮಸ್ಯೆಯನ್ನು ಪರಿಹರಿಸಲು ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿದರು.

ಈ ವೇಳೆ ವಾಗ್ವಾದ ನಡೆದು ಸ್ಥಳೀಯ ಕೌನ್ಸಿಲರ್ ಪತಿ, ಬಿಜೆಪಿ ಮುಖಂಡ ಅರ್ಜುನ್ ಗುಪ್ತಾ ಅವರು ವಿನೋದ್ ಮಿಶ್ರಾ ಅವರ ಸಮವಸ್ತ್ರ ಕಳಚಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮಿಶ್ರಾ ಅವರು ಟೌನ್ ಇನ್ಸ್‌ಪೆಕ್ಟರ್‌ ಮತ್ತು ಇತರ ಅಧಿಕಾರಿಗಳು ಸೇರಿದಂತೆ ಎಲ್ಲರ ಮುಂದೆ ತಮ್ಮ ಸಮವಸ್ತ್ರದ ಅಂಗಿಯನ್ನು ಬಿಚ್ಚಿದರು. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಭೆಯಲ್ಲಿ ಹಾಜರಿದ್ದವರು ಮಿಶ್ರಾ ಅವರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದನ್ನು ಕಂಡುಬಂದಿದೆ. ಘಟನೆಯ ನಂತರ ವಿನೋದ್‌ ಮಿಶ್ರಾ ಅವರ ನಡವಳಿಕೆಗಾಗಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ʼʼಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಿಸ್ಟೆಂಟ್‌ ಸಬ್ ಇನ್ಸ್‌ಪೆಕ್ಟರ್ ವಿನೋದ್ ಮಿಶ್ರಾ ಎನ್ನುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಬಿಜೆಪಿಯ ಪಾಲಿಕೆ ಸದಸ್ಯೆಯ ಪತಿಯೊಂದಿಗೆ ವಾಗ್ವಾದ ನಡೆಸಿದ ನಂತರ ಪೊಲೀಸ್‌ ಅಧಿಕಾರಿಯೇ ಸಮವಸ್ತ್ರ ಕಳಚಿದ್ದರು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿವರಣೆ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ. ಕ್ರಮವೂ ಆಗಿದೆʼʼ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ನಿವೇದಿತಾ ಗುಪ್ತಾ ಮಾತನಾಡಿ, ಈ ಬಗ್ಗೆ ತಿಂಗಳುಗಳ ಹಿಂದೆಯೇ ತನಿಖೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. “ವಿನೋದ್ ಮಿಶ್ರಾ ಅವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಮತ್ತು ಕೌನ್ಸಿಲರ್‌ ಜತೆಗೆ ಭೂ ಸಂಬಂಧಿತ ವಿವಾದವಿದೆ ಎನ್ನುವುದು ತನಿಖೆ ವೇಳೆ ಕಂಡುಬಂದಿದೆ” ಎಂದು ಅವರು ಹೇಳಿದ್ದಾರೆ. ಘಟನೆ ನಡೆದು 7 ತಿಂಗಳ ನಂತರ ಸಿಸಿಟಿವಿ ದೃಶ್ಯಾವಳಿಗಳು ಸೋರಿಕೆಯಾದ ಬಗ್ಗೆ ಮತ್ತು ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಪ್ರಸಾರ ಮಾಡಿದ ಬಗ್ಗೆ ಅವರು ತನಿಖೆಗೆ ಆದೇಶಿಸಿದ್ದಾರೆ.

ಕಾಂಗ್ರೆಸ್‌ ವಾಗ್ದಾಳಿ

ಪ್ರತಿಪಕ್ಷ ಕಾಂಗ್ರೆಸ್ ಇದೀಗ ಆಡಳಿತಾರೂಢ ಬಿಜೆಪಿಯನ್ನು ಟೀಕಿಸಲು ಈ ಘಟನೆಯನ್ನು ಬಳಸಿಕೊಂಡಿದೆ. “ಇದು ಅಧಿಕಾರದ ದುರುಪಯೋಗ. ಬಿಜೆಪಿ ಕೌನ್ಸಿಲರ್ ಒಬ್ಬರ ಪತಿ ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಗೆ ಹೇಗೆ ಬೆದರಿಕೆ ಹಾಕಿದ್ದಾರೆ ಮತ್ತು ಸಮವಸ್ತ್ರವನ್ನು ತೆಗೆಯುವಂತೆ ಒತ್ತಾಯಿಸಿದ್ದಾರೆ ಎಂಬುದನ್ನು ನೋಡಿ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಕೆಳಮಟ್ಟದಲ್ಲಿದೆ. ಪೊಲೀಸರು ಅಸಹಾಯಕರಾಗಿದ್ದಾರೆ ಅಥವಾ ರಾಜಕೀಯ ಒತ್ತಡದಲ್ಲಿದ್ದಾರೆʼʼ ಎಂದು ಎಕ್ಸ್‌ (ಹಿಂದಿನ ಟ್ವಿಟ್ಟರ್‌)ನಲ್ಲಿ ಬರೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ: Viral Video: ನಲಿಯುತ್ತಾ ಕಲಿಕೆ, ವೈರಲ್ ವಿಡಿಯೋಗೆ ಸಾಕಷ್ಟು ಮೆಚ್ಚುಗೆ