ನವದೆಹಲಿ: ದೀಪಾವಳಿ (Deepavali) ಹಬ್ಬವೆಂದರೆ ಸಿಹಿ ಇಲ್ಲದೆ ಪೂರ್ತಿಯಾಗುವುದಿಲ್ಲ. ಈ ಹಬ್ಬದ ವೇಳೆ ಸೋನ್ ಪಾಪ್ಡಿ (Soan Papdi) ಬೇಡಿಕೆ ಹೆಚ್ಚಾಗಿದ್ದರೂ ಸಾಕಷ್ಟು ಮಂದಿ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಾರೆ. ಇದೀಗ ಆನ್ಲೈನ್ ಫುಡ್ ಡೆಲಿವರಿ ಫ್ಲ್ಯಾಟ್ಫಾರ್ಮ್ (online delivery platform) ಸ್ವಿಗ್ಗಿ (Swiggy) ಕೂಡ ಸೋನ್ ಪಾಪ್ಡಿಯನ್ನು ತಿರಸ್ಕರಿಸಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದು ಭಾರಿ ವೈರಲ್ (Viral Video) ಆಗಿದೆ.
ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನವರು ದೇಸಿ ಮಿಠಾಯಿಗಳನ್ನು ಇಷ್ಟ ಪಡುತ್ತಾರೆ. ಅದರಲ್ಲೂ ವಿಶೇಷವಾಗಿ ಕಾಜು ಕಟ್ಲಿ, ತರಹೇವಾರಿ ಲಡ್ಡುಗಳು ಹೆಚ್ಚಿನವರಿಗೆ ಪ್ರಿಯವಾಗುತ್ತದೆ. ಆದರೆ ಸೋನ್ ಪಾಪ್ಡಿ ಇಷ್ಟವಿದ್ದರೂ ದೀಪಾವಳಿ ಸಂದರ್ಭದಲ್ಲಿ ಇದು ಉಡುಗೊರೆಯಾಗಿ ಸಿಗುವುದು ಬೇಡ ಎಂದು ಬಯಸುವವರೇ ಹೆಚ್ಚು. ಯಾಕೆಂದರೆ ಇದು ಸಾಮಾನ್ಯ ಸಿಹಿ, ಬೇರೆ ಸಮಯದಲ್ಲೂ ಇದನ್ನು ತಿನ್ನಬಹುದು ಎನ್ನುವ ಭಾವನೆಯೇ ಮುಖ್ಯ ಕಾರಣ.
ಆನ್ಲೈನ್ ಫುಡ್ ಡೆಲಿವರಿ ಫ್ಲ್ಯಾಟ್ಫಾರ್ಮ್ ಸ್ವಿಗ್ಗಿ ಇತ್ತೀಚೆಗೆ ಬಿಡುಗಡೆ ಮಾಡಿದ ದೀಪಾವಳಿಯ ವಿಡಿಯೋದಲ್ಲಿ ಜನರ ಭಾವನೆಯನ್ನು ಗಮನಿಸಿದೆ. ಇಲ್ಲಿ ಜನರು ಸಾಮಾನ್ಯವಾಗಿ ಸೋನ್ ಪಾಪ್ಡಿ ಬಯಸುವುದಿಲ್ಲ. ಅದರ ಹೊರತಾಗಿಯೂ ದೀಪಾವಳಿಗಾಗಿ ಕೆಲವು ವಸ್ತುಗಳು ಸ್ವಿಗ್ಗಿ ಮೂಲಕ ವಿತರಿಸಲಾಗುತ್ತದೆ ಎಂಬುದನ್ನು ಈ ಮೂಲಕ ಅದು ಹೇಳಿಕೊಂಡಿದೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ದೀಪಾವಳಿ ಹಬ್ಬದ ಸಂಭ್ರಮಾಚರಣೆಯನ್ನು ಗಮನಿಸಬಹುದು. ದೀಪಾವಳಿ ಪಾರ್ಸೆಲ್ಗಳನ್ನು ಸಂಗ್ರಹಿಸುವ ಡೆಲಿವರಿ ಸಿಬ್ಬಂದಿಯಿಬ್ಬರು ಸೋನ್ ಪಾಪ್ಡಿಯನ್ನು ತಿರಸ್ಕರಿಸುತ್ತಾರೆ. ಬಳಿಕ ಅದರಲ್ಲಿ ಹಲ್ವಾ, ಚಕ್ಕುಲಿ, ಲಡ್ಡು, ಡ್ರೈಫ್ರುಟ್ಸ್, ಹಣತೆಗಳು, ರಂಗೋಲಿ ಹುಡಿ, ನಮ್ಕೀನ್, ಪಟಾಕಿಗಳು ಸೇರಿದಂತೆ ಹಲವು ವಸ್ತುಗಳನ್ನು ಮನೆಮನೆಗೆ ತಲುಪಿಸಲಾಗುತ್ತದೆ ಎಂಬುದನ್ನು ಈ ಮೂಲಕ ಅವರು ಹೇಳಿಕೊಂಡಿದ್ದಾರೆ.
ದೀಪಾವಳಿ ಹಬ್ಬದ ವೇಳೆ ಸ್ವಿಗ್ಗಿ ಹಂಚಿಕೊಂಡಿರುವ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಹಲವಾರು ಮಂದಿ ಕಮೆಂಟ್ ಕೂಡ ಮಾಡಿದ್ದಾರೆ. 20 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಕಮೆಂಟ್ ನಲ್ಲಿ ಒಬ್ಬರು, ಇಂತಹ ರೀಲ್ಗಳ ಮೂಲಕ ಸೋನ್ ಪಾಪ್ಡಿಯನ್ನು ಮಾನಹಾನಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಒಬ್ಬರು ಸೋನ್ ಪಾಪ್ಡಿಗಾಗಿ ಜನರು ಒಗ್ಗಟ್ಟಾಗಬೇಕು ಎಂದು ಹೇಳಿದ್ದು, ಸೋನ್ ಪಾಪ್ಡಿಯನ್ನು ನಾನು ತಬ್ಬಿಕೊಳ್ಳುತ್ತೇನೆ, ನನಗದು ಇಷ್ಟ ಎಂದು ತಿಳಿಸಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ, ಸೋನ್ ಪಾಪ್ಡಿಯ ಮಾನಹಾನಿ ಮಾಡುವ ಧೈರ್ಯ ಮಾಡಬೇಡಿ. ಇದು ಸೋನ್ ಪಾಪ್ಡಿ ಮೇಲಿನ ನನ್ನ ಪ್ರೀತಿ ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಈ ಮಾತಿಗೆ ಸಮ್ಮತಿಸಿ, ಓಯೆ ಅಡ್ಮಿನ್, ಸೋನ್ ಪಾಪ್ಡಿಗೆ ಏನೂ ಹೇಳಬೇಡಿ ಎಂದು ಹೇಳಿದ್ದಾರೆ.