Friday, 22nd November 2024

Viral Video : ಊಟ ಕೊಡದ್ದಕ್ಕೆ ಲಾರಿಯನ್ನೇ ಹೋಟೆಲ್‌ಗೆ ನುಗ್ಗಿಸಿದ ಕುಡುಕ ಚಾಲಕ, ಇಲ್ಲಿದೆ ವಿಡಿಯೊ

Viral video

ಪುಣೆ: ಇಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಊಟ ಕೊಡಲು ನಿರಾಕರಿಸಿದ ಹೋಟೆಲ್‌ಗೆ ತನ್ನ ಟ್ರಕ್‌ ಡಿಕ್ಕಿ ಹೊಡೆಸಿದ ಪ್ರಕರಣ ನಡೆದಿದೆ. ಘಟನೆಯಲ್ಲಿ ಹೋಟೆಲ್ ಮುಂದೆ ನಿಲ್ಲಿಸಿದ್ದ ಕಾರುಗಳು ಸ್ಕೂಟರ್‌ಗಳು ಸೇರಿದಂತೆ ಅಪಾರ ಪ್ರಮಾಣದ ಆಸ್ತಿಗೆ ಹಾನಿ ಉಂಟಾಗಿದೆ. ಕುಡಿದ ಮತ್ತಿನಲ್ಲಿ ನಿಯಂತ್ರಣವೇ ಇಲ್ಲದೆ ಚಾಲಕ ಕೃತ್ಯ ಎಸಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪುಣೆ ಜಿಲ್ಲೆಯ ಇಂದ್ರಾಪುರದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಪುಣೆ-ಸೋಲಾಪುರ ಹೆದ್ದಾರಿಯ ಹಿಂಗನ್‌ಗಾವ್‌ನಲ್ಲಿರುವ ಹೋಟೆಲ್ ಮಾಲೀಕರು ಆಹಾರ ನೀಡಲು ನಿರಾಕರಿಸಿದ ನಂತರ ಕುಡುಕ ಚಾಲಕ ಕುಕೃತ್ಯ ಎಸಗಿದ್ದಾನೆ. ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ.

ಕುಡಿದ ಅಮಲಿನಲ್ಲಿ ಚಾಲಕ ಭಾರೀ ಕಂಟೈನರ್ ವಾಹನವನ್ನು ಕಟ್ಟಡದೊಳಗೆ ಓಡಿಸಿದ್ದಾನೆ. ಘಟನೆಯಲ್ಲಿ ಪ್ರಾಣಹಾನಿಯಾಗಿಲ್ಲ ಮತ್ತು ಗಾಯಗೊಂಡಿಲ್ಲ, ಆದರೆ ಹೋಟೆಲ್‌ ಕಟ್ಟಡ ಹಾಗೂ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ಚಾಲಕ ಸೋಲಾಪುರದಿಂದ ಪುಣೆಗೆ ಕಂಟೈನರ್ ಟ್ರಕ್ ನೊಂದಿಗೆ ಪ್ರಯಾಣಿಸುತ್ತಿದ್ದ. ಹೋಟೆಲ್ ಮುಂದೆ ಲಾರಿ ನಿಲ್ಲಿಸಿದ್ದ ಆರೋಪಿ ಚಾಲಕ ಊಟ ಕೊಡುವಂತೆ ಕೇಳಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಆತನನ್ನು ಹೋಟೆಲ್ ಮಾಲೀಕರು ಊಟ ಕೊಡಲು ನಿರಾಕರಿಸಿ ಹೊರಗೆ ಕಳುಹಿಸಿದ್ದರು.

ಆಹಾರವನ್ನು ನಿರಾಕರಿಸಿದಾಗ ಚಾಲಕ ಕೋಪಗೊಂಡು, ಕಂಟೇನರ್ ಟ್ರಕ್ ಅನ್ನು ಸ್ಟಾರ್ಟ್‌ ಮಾಡಿ ನೇರವಾಗಿ ಹೋಟೆಲ್‌ಗೆ ನುಗ್ಗಿಸಲು ಯತ್ನಿಸಿದ್ದ. ಈ ವೇಳೆ ಹೋಟೆಲ್ ಮುಂದಿದ್ದ ಕಾರು ಹಾಗೂ ಇತರ ವಾಹನಗಳಿಗೆ ಹಾನಿಯಾಗಿದೆ. ಅದಕ್ಕೂ ತೃಪ್ತನಾಗದ ಆತ ರಿವರ್ಸ್‌ ತೆಗೆದು ಮತ್ತು ಪಾರ್ಕಿಂಗ್ ಸ್ಥಳದಲ್ಲಿ ಹಲವಾರು ಕಾರುಗಳನ್ನು ಹಾನಿಗೊಳಿಸಿದ್ದಾನೆ. ಸ್ಥಳೀಯರು ಟ್ರಕ್ ಮೇಲೆ ಕಲ್ಲುಗಳನ್ನು ಎಸೆಯುವ ಮೂಲಕ ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಕುಡಿದು ವಾಹನ ಚಲಾಯಿಸಿದ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ಆತನನ್ನು ಘಟನಾ ಸ್ಥಳದಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ: Kargil War : ಕಾರ್ಗಿಲ್ ಯುದ್ಧ ನಮ್ಮದೇ ಕುಕೃತ್ಯ ಎಂದು 25 ವರ್ಷಗಳ ಬಳಿಕಮೊದಲ ಬಾರಿಗೆ ಒಪ್ಪಿಕೊಂಡ ಪಾಕಿಸ್ತಾನ