Friday, 22nd November 2024

Viral Video: ನಗರಕ್ಕೆ ನುಗ್ಗಿದ ವ್ಯಾಘ್ರ! ಕಲ್ಲು, ಇಟ್ಟಿಗೆಯಿಂದ ಹೊಡೆದ ಜನ… ತಲೆಗೆ ಏಟು ಬಿದ್ದು ದೃಷ್ಟಿ ಕಳೆದುಕೊಂಡ ಹುಲಿ

Viral Video

ಗುವಾಹಟಿ: ಹುಲಿಯನ್ನು ಕಂಡು ಭಯಭೀತರಾದ ಜನರು ಅದರ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ತೂರಿದ ಪರಿಣಾಮ ಹುಲಿಯೊಂದು ತೀವ್ರವಾಗಿ ಗಾಯಗೊಂಡಿದೆ. ಚೂಪಾದ ಕಲ್ಲುಗಳು ತಗುಲಿದ್ದು, ಹುಲಿಯ ಮೆದುಳಿಗೆ ಗಾಯವಾಗಿದೆ. ಅಷ್ಟೇ ಅಲ್ಲದೆ ಮೂಗಿನಿಂದ ರಕ್ತಸ್ರಾವವಾಗಿದ್ದು, ಒಂದು ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡಿದೆ. ಅಸ್ಸಾಂನ ಕಲಿಯಾಬೋರ್‌ ನಲ್ಲಿ ಈ ಆಘಾತಕಾರಿ ಘಟನೆಯು ವರದಿಯಾಗಿದೆ. ಆ ಕುರಿತ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಸಾಕಷ್ಟು ಮಂದಿ ಮರುಕ ತೋರಿದ್ದಾರೆ. ಅಮಾಯಕ ಪ್ರಾಣಿಯ ಮೇಲೆ ಜನರು ಎಸಗಿದ ಅಮಾನವೀಯ ಕೃತ್ಯಕ್ಕೆ ಹಲವರು ಸಿಟ್ಟಿಗೆದ್ದಿದ್ದಾರೆ (Viral Video).

ಅಸ್ಸಾಂ ನ ಅರಣ್ಯ ಪ್ರದೇಶದ ಪೊದೆಗಳಲ್ಲಿ ಬಹಿರಂಗವಾಗಿ ತಿರುಗಾಡುತ್ತಿದ್ದ ಹುಲಿಯ ಮೇಲೆ ಅಲ್ಲಿನ ಸ್ಥಳೀಯರು ದಾಳಿ ನಡೆಸಿದ್ದಾರೆ. ಹುಲಿಯನ್ನು ಕಂಡ ಜನರು ದಿಗಿಲುಗೊಂಡು ಅದರ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದಿದ್ದಾರೆ. ನಿರಂತರವಾಗಿ ಚೂಪಾದ ವಸ್ತುಗಳನ್ನು ಎಸೆದ ಪರಿಣಾಮ ಹುಲಿಯು ತೀವ್ರವಾಗಿ ಗಾಯಗೊಂಡಿದೆ. ಮೆದುಳಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಮೂಗಿನಲ್ಲಿ ರಕ್ತಸ್ರಾವವಾಗಿದೆ. ಕಣ್ಣಿಗೂ ಕಲ್ಲು ತಗುಲಿ ದೃಷ್ಟಿ ಹೋಗಿದೆ. ಹುಲಿಯನ್ನು ಹೆಣ್ಣು ಎಂದು ಗುರುತಿಸಲಾಗಿದ್ದು,ಈಗ ಅದರ ಸ್ಥಿತಿ ತೀರಾ ಗಂಭೀರವಾಗಿದೆ ಎಂಬ ಮಾಹಿತಿ ದೊರೆತಿದೆ.

ಸ್ಥಳೀಯರು ಭಯಗೊಂಡು ಹುಲಿಯ ಮೇಲೆ ದಾಳಿ ಮಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೀಲ್ಸ್‌ ಶೋಕಿಗೆ ಜಿಂಕೆಗಳ ಹಿಂಡನ್ನು ಹೆದರಿಸಿದ ಪುಂಡರು

ತಮಿಳುನಾಡಿನ ಮುದುಮಲೈನಲ್ಲೂ ಕೆಲವು ದಿನಗಳ ಹಿಂದೆ ಇಂತಹದ್ದೇ ಒಂದು ಘಟನೆ ನಡೆದಿದೆ. ಹುಲಿ ಮೀಸಲು ಪ್ರದೇಶದಲ್ಲಿ ಆಂಧ್ರಪ್ರದೇಶದ ಮೂವರು ಯುವಕರು ಜಿಂಕೆ ಹಿಂಡಿಗೆ ತೊಂದರೆ ನೀಡಿದ್ದು, ಇದನ್ನು ಪ್ರವಾಸಿಗರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಈಗ ವೈರಲ್(Viral Video) ಆಗಿದೆ. ರೀಲ್ಸ್‌ ಕ್ರೇಜಿಗಾಗಿ ಯುವಕರು ಜಿಂಕೆಗಳಿಗೆ ಹೆದರಿಸಿದ್ದಕ್ಕಾಗಿ ಅರಣ್ಯ ಇಲಾಖೆ ಯುವಕರಿಗೆ 15,000 ರೂ.ಗಳ ದಂಡ ವಿಧಿಸಿದೆ.

ವಿಡಿಯೊದಲ್ಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ರೀಲ್ಸ್‌ ಮಾಡುವ ಉದ್ದೇಶದಿಂದ ಮೂವರು ಯುವಕರು ಜಿಂಕೆಗಳ ಹಿಂಡನ್ನು ನೋಡಿ ಅವುಗಳತ್ತ ಓಡಿ ಹೋಗಿದ್ದಾರೆ. ಹುಡುಗರನ್ನು ನೋಡಿ ಹೆದರಿದ ಜಿಂಕೆಗಳು ಕೂಡ ದಿಕ್ಕಾಪಾಲಾಗಿ ಓಡಿಹೋಗಿದ್ದಾವೆ.

ಈ ಘಟನೆಯ ವಿಡಿಯೊವನ್ನು ‘ಕರ್ನಾಟಕ ಪೋರ್ಟ್‌ಫೋಲಿಯೋ’ ಎಂಬ ಎಕ್ಸ್ ಪೇಜ್‍ನಲ್ಲಿ ವರದಿ ಮಾಡಿದೆ. ಮುದುಮಲೈ ಹುಲಿ ಮೀಸಲು ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ, ಅಲ್ಲಿ ಯುವಕನೊಬ್ಬ ನೋಂದಣಿ ಸಂಖ್ಯೆ AP16CV0001 ಹೊಂದಿರುವ ಕಾರಿನಿಂದ ಇಳಿದು ಅರಣ್ಯ ಪ್ರದೇಶದೊಳಗೆ ಜಿಂಕೆಗಳ ಹಿಂಡನ್ನು ಬೆನ್ನಟ್ಟುವುದು ಮತ್ತು ತೊಂದರೆ ನೀಡುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ಈ ಸುದ್ದಿಯನ್ನೂ ಓದಿ: Viral Video: ಮತಾಂತರಕ್ಕೆ ಯತ್ನಿಸುತ್ತಿದ್ದಾನೆ… ತರಗತಿಗೆ ನಾನ್‌ವೆಜ್‌ ಊಟ ತಂದ ವಿದ್ಯಾರ್ಥಿ ಡಿಬಾರ್‌-ಪ್ರಿನ್ಸಿಪಾಲ್‌ ವಿಡಿಯೋ ವೈರಲ್‌