Saturday, 12th October 2024

Viral Video: ಹೊರಗಡೆ ಜ್ಯೂಸ್‌ ಕುಡಿಯೋ ಮುನ್ನ ಎಚ್ಚರ… ಎಚ್ಚರ! ಮೂತ್ರ ಬೆರೆಸಿ ಸರ್ವ್‌ ಮಾಡ್ತಾರೆ ಕಿಡಿಗೇಡಿಗಳು

Viral video

ಲಕ್ನೋ: ಬಹುತೇಕರಿಗೆ ಬೀದಿಬದಿಯ ತಿಂಡಿ ತಿನಿಸುಗಳೆಂದರೆ ಎಲ್ಲಿಲ್ಲದ ಪ್ರಾಣ. ಶುಚಿತ್ವದ ಬಗ್ಗೆ ನೂರಕ್ಕೆ ನೂರರಷ್ಟು ಗ್ಯಾರಂಟಿ ಇಲ್ಲದಿದ್ದರೂ ರುಚಿಗೇನು ಕಡಿಮೆ ಇಲ್ಲ, ಅಲ್ಲದೇ ರೇಟು ಕಮ್ಮಿ. ಹೀಗೆ ಸ್ಟ್ರೀಟ್‌ ಪುಡ್‌ಗಳ ಬಗ್ಗೆ ಹಲವರಿಗೆ ಒಲವು ಇದ್ದೇ ಇದೆ. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ಕೆಲವು ಕಿಡಿಗೇಡಿ ವ್ಯಾಪಾರಿಗಳು ತಿನ್ನುವ ಪದಾರ್ಥಕ್ಕೆ ಉಗಿಯೋದು, ಮೂತ್ರ ವಿಸರ್ಜಿಸಿ ಗ್ರಾಹರಿಗೆ ಸರ್ವ್‌ ಮಾಡುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಕೃತಿ ಮೆರೆದಿರುವ ಇಬ್ಬರು ವ್ಯಕ್ತಿಗಳಿಗೆ ಜನ ಸೇರಿ ಥಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶ ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಶುಕ್ರವಾರ ಇಬ್ಬರು ಜ್ಯೂಸ್‌ ಶಾಪ್‌ನ ಕೆಲಸಗಾರರನ್ನು ಜನ ಥಳಿಸಿದ್ದಾರೆ. ಜ್ಯೂಸ್‌ ಅಂಗಡಿ ನಡೆಸುತ್ತಿದ್ದ ಅಮಿರ್‌ ಮತ್ತು ಕೈಫ್‌ ಗ್ರಾಹಕರಿಗೆ ಜ್ಯೂಸ್‌ ಜತೆಗೆ ಮೂತ್ರ ಮಿಕ್ಸ್‌ ಮಾಡಿ ಕೊಡುತ್ತಿದ್ದರು ಎಂಬ ಆರೋಪ ಕೇಳಿಬಂದಿತು. ಇವರಿಬ್ಬರು ಖುಷಿ ಮಿಲ್ಕ್‌ ಎಂಡ್‌ ಶೇಖ್‌ ಎಂಬ ಅಂಗಡಿಯನ್ನು ನಡೆಸುತ್ತಿದ್ದರು. ಇವರಿಬ್ಬರ ಈ ಕುಕೃತ್ಯದ ಬಗ್ಗೆ ತಿಳಿಯುತ್ತಿದ್ದಂತೆ ಜನ ಅಂಗಡಿಗೆ ನುಗ್ಗಿ ಇಬ್ಬರು ಸರಿಯಾಗಿ ತದುಕಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ವೀಡಿಯೊ ಕಾಣಿಸಿಕೊಂಡಿತು, ಇದು ಅಂಗಡಿಯಲ್ಲಿ ಕೆಲಸ ಮಾಡುವ ಇಬ್ಬರನ್ನು ಗುಂಪು ಥಳಿಸುವುದನ್ನು ಕಾಣಬಹುದಾಗಿದೆ. ಲೋನಿ ಬಾರ್ಡರ್‌ ಎಂಬ ಪ್ರದೇಶದ ಇಂದಿರಾಪುರಿ ಪೊಲೀಸ್ ಠಾಣೆ ಬಳಿ ಜ್ಯೂಸ್‌ ಅಂಗಡಿ ಇದ್ದು, ಇಲ್ಲಿ ಈ ಇಬ್ಬರು ಕಿಡಿಗೇಡಿಗಳು ಜ್ಯೂಸ್‌ಗೆ ಮೂತ್ರ ಬೆರೆಸಿ ಕೊಡುತ್ತಿದ್ದಾರೆ ಎಂದು ಜನ ಆರೋಪಿಸಿದ್ದಾರೆ.

ಅಂಗಡಿಯಲ್ಲಿ ಪ್ಲಾಸ್ಟಿಕ್ ಟಿನ್ ಕಂಟೇನರ್ ಪತ್ತೆಯಾಗಿದೆ ಮತ್ತು ಕಂಟೇನರ್‌ನಲ್ಲಿ 1 ಲೀಟರ್ ಮೂತ್ರ ಪತ್ತೆಯಾಗಿದೆ ಎಂದು ವರದಿಗಳು ಹೇಳಿವೆ. ಅಂಗಡಿಯಲ್ಲಿ ಕೆಲಸ ಮಾಡುವ ಇಬ್ಬರು ವ್ಯಕ್ತಿಗಳು ಜ್ಯೂಸ್‌ನಲ್ಲಿ ಮೂತ್ರವನ್ನು ಬೆರೆಸುತ್ತಾರೆ ಎಂದು ಒಪ್ಪಿಕೊಂಡಿದ್ದು, ಕ್ಷಮೆಯಾಚಿಸಿದ್ದಾರೆ ಎಂದು ಜನರು ಹೇಳಿದ್ದಾರೆ. ಇನ್ನು ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿ ಇಬ್ಬರು ಆರೋಪಿಗಳನ್ನು ಅರೆಸ್ಟ್‌ ಮಾಡಿದ್ದಾರೆ. ಆರೋಪಿಗಳ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಬೆಂಗಳೂರಿನಲ್ಲಿ ಮಹಿಳೆಯರು ಶಾರ್ಟ್ಸ್‌ ಧರಿಸುವಂತಿಲ್ವಾ? ಭಾರೀ ವೈರಲ್‌ ಆಗ್ತಿದೆ ಈ ವಿಡಿಯೋ