Tuesday, 19th November 2024

Viral Video: ರಣರಂಗವಾದ ಮದುವೆ ಮಂಟಪ! ಪಟಾಕಿ ಸಿಡಿಸುವ ವಿಚಾರಕ್ಕೆ ದೊಡ್ಡ ಗಲಾಟೆ; ಅತಿಥಿಗಳ ಮೇಲೆ ಕಾರು ಹರಿಸಿದ ಭೂಪ

ಜೈಪುರ: ರಾಜಸ್ಥಾನದ (Rajasthan) ದೌಸಾ (Dausa) ಎಂಬಲ್ಲಿ ಮದುವೆ ಸಂಭ್ರಮದಲ್ಲಿದ್ದ ಮನೆಯೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದುಹೋಗಿದೆ. ಸುಡುಮದ್ದು ಸಿಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆ ಬಳಿಕ ವರನ ಕಡೆಯವನೊಬ್ಬ ಏಳು ಜನರ ಮೇಲೆ ಕಾರು ಹರಿಸಿ ಗಾಯಗೊಳಿಸಿದ ಘಟನೆ ನಡೆದಿದ್ದು ಈ ಘಟನೆಯ ವಿಡಿಯೋ ಸಹ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video) ಆಗಿದೆ.

ಪೊಲೀಸ್‌ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ವರನ ಮೆರವಣಿಗೆ ವಧುವಿನ ಗ್ರಾಮವಾಗಿರುವ ದೌಸಾಗೆ ಆಗಮಿಸಿದ ಸಂದರ್ಭದಲ್ಲಿ, ಕಾರು ಚಲಾಯಿಸುತ್ತಿದ್ದ ಆರೋಪಿಯು, ಮದುವೆ ನಡೆಯುವ ಸ್ಥಳದಲ್ಲಿ ಸುಡುಮದ್ದು ಸಿಡಿಸುವ ವಿಚಾರದಲ್ಲಿ ವಧುವಿನ ಸಂಬಂಧಿಕರೊಂದಿಗೆ ಸುಖಾ ಸುಮ್ಮನೆ ತಗಾದೆ ತೆಗೆದಿದ್ದಾನೆ.

ವಧುವಿನ ಕಡೆಯವರು ಸುಡುಮದ್ದು ಸಿಡಿಸುತ್ತಿದ್ದ ಸ್ಥಳದಲ್ಲಿ ಆರೋಪಿ ತನ್ನ ಕಾರನ್ನು ಪಾರ್ಕಿಂಗ್‌ ಮಾಡಲು ಬಯಸಿದ್ದ. ಆದರೆ ಅದಕ್ಕೆ ಅಲ್ಲಿದ್ದವರು ಒಪ್ಪದೇ ಇದ್ದಾಗ ಆರೋಪಿ ಸಿಟ್ಟುಗೊಂಡಿದ್ದಾನೆ, ಇದಿಷ್ಟು ಗಲಾಟೆ ನಡೆಯಲು ಮೂಲ ಕಾರಣ ಎಂದು ಸ್ಥಳೀಯ ಪೊಲೀಸರು ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Kantara Chapter 1: ರಿಷಬ್‌ ಶೆಟ್ಟಿ ಫ್ಯಾನ್ಸ್‌ಗೆ ಮತ್ತೊಂದು ಸರ್‌ಪ್ರೈಸ್‌ ನೀಡಿದ ಹೊಂಬಾಳೆ ಫಿಲ್ಮ್ಸ್‌; ‘ಕಾಂತಾರ: ಚಾಪ್ಟರ್‌ 1’ ಟೀಸರ್‌ ಔಟ್‌

ಹೀಗೆ ಕಾರು ಪಾರ್ಕಿಂಗ್‌ ವಿಚಾರದಲ್ಲಿ ಎರಡೂ ತಂಡಗಳ ನಡುವೆ ಶುರುವಾದ ಜಗಳ ಸ್ವಲ್ಪ ಹೊತ್ತಿನಲ್ಲೇ ವಿಕೋಪಕ್ಕೆ ತಿರುಗಿದೆ. ಆರೋಪಿ ಕಾರು ಚಾಲಕ ಸಿಟ್ಟಿನ ಭರದಲ್ಲಿ ತನ್ನ ಎದುರಿಗಿದ್ದವರ ಮೇಲೆಯೇ ಕಾರನ್ನು ಚಲಾಯಿಸಿದ್ದಾನೆ.

ಈತನ ಈ ವರ್ತನೆಯಿಂದ ಕಾರಿನ ಎದುರಿಗಿದ್ದ ಏಳು ಜನರು ಗಾಯಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿ ವಿಡಿಯೋ ಒಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಈ ವಿಡಿಯೋದಲ್ಲಿ ದಾಖಲಾಗರುವಂತೆ ಹಲವರು ಗಾಯಗೊಂಡು ಬಿದ್ದಿರುವುದನ್ನು ಕಾಣಬಹುದಾಗಿದೆ.

ಗಾಯಗೊಂಡ ಏಳು ಜನರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಉಳಿದ ಗಾಯಾಳುಗಳಿಗೆ ಜೈಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು, ಹೀಗೆ ಮದುವೆ ಮನೆಯನ್ನು ಮಸಣ ಮಾಡಲು ಹೋಗಿ ಏಳು ಜನ ಗಾಯಗೊಳ್ಳುವಂತೆ ಮಾಡಿದ ಆರೋಪಿ ಚಾಲಕ ಸದ್ಯಕ್ಕೆ ತನ್ನ ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಆದರೆ ಕಾರು ಚಾಲಕ ಪರಾರಿಯಾಗುವ ಭರದಲ್ಲಿ ಆತನ ಕಾರಿನ ನಂಬರ್‌ ಪ್ಲೇಟ್‌ ಕಳಚಿ ಬಿದ್ದಿದ್ದು ಅದು ಪೊಲೀಸರಿಗೆ ಸಿಕ್ಕಿದೆ. ಅದರ ಆಧಾರದಲ್ಲಿ ಈ ಕಾರು ಸವಾಯ್‌ ಮಧೋಪುರ್‌ ಜಿಲ್ಲೆಗೆ ಸೇರಿದ್ದು ಎಂದು ತಿಳಿದುಬಂದಿದೆ.

ಘಟನೆಯ ಬಗ್ಗೆ ಮಾತನಾಡಿರುವ ಲಾಲ್ಸೋಟ್‌ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ʼಆರೋಪಿಯನ್ನು ಶೀಘ್ರ ಬಂಧಿಸುವ ಭರವಸೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಎರಡೂ ಕುಟುಂಬಗಳ ಸೇರುವಿಕೆಯಿಂದ ಸಂತೋಷದ ನೆಲೆಯಾಗಬೇಕಿದ್ದ ಮದುವೆ ಮನೆಯ ಸಂ‍ಭ್ರಮವನ್ನು ವಿಘ್ನಸಂತೋಷಿಯೊಬ್ಬ ತನ್ನ ಸಿಡುಕುತನಕ್ಕೆ ಮಸಣವನ್ನಾಗಿಸಿದ್ದು ಮಾತ್ರ ದುರಂತವೇ ಸರಿ.