Saturday, 23rd November 2024

Viral Video: ಲಕ್ಕಿ ಕಾರಿಗೆ ಸಮಾಧಿ ಮಾಡಿ ಭಾವನಾತ್ಮಕವಾಗಿ ಬೀಳ್ಕೊಟ್ಟ ಕುಟುಂಬ! ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ

Viral Video

ಗಾಂಧಿನಗರ: ಮನುಷ್ಯರು ಇಲ್ಲ ಪ್ರಾಣಿಗಳು ಸತ್ತಾಗ ಸಮಾಧಿ ಮಾಡುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಕುಟುಂಬ ತಮ್ಮ ಅದೃಷ್ಟದ ಕಾರನ್ನು ಸಮಾಧಿ (burial event) ಮಾಡುವ ಮೂಲಕ ಎಲ್ಲೆಡೆ ಸುದ್ದಿಯಲ್ಲಿದೆ. ಗುಜರಾತ್‌ನ (Gujarat) ಅಮ್ರೇಲಿ ಜಿಲ್ಲೆಯ ರೈತ ಕುಟುಂಬವೊಂದು ತಮ್ಮ ನೆಚ್ಚಿನ ಅದೃಷ್ಟದ ಕಾರನ್ನು ಸಮಾಧಿ ಮಾಡಿ ಬೀಳ್ಕೊಟ್ಟಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ (Viral Video)

ಲಾಠಿ ತಾಲೂಕಿನ ಪಾದರಶಿಂಗ ಗ್ರಾಮದಲ್ಲಿ ಗುರುವಾರ (ನ. 7) ಸಂಜಯ ಪೋಳಾರ ಮತ್ತು ಅವರ ಕುಟುಂಬ ಆಯೋಜಿಸಿದ್ದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಆಧ್ಯಾತ್ಮಿಕ ಮುಖಂಡರು ಸೇರಿದಂತೆ ಸುಮಾರು 1,500 ಜನರು ಭಾಗವಹಿಸಿದ್ದರು.

ಪೊಲಾರಾ ಮತ್ತು ಅವರ ಕುಟುಂಬವು ತಮ್ಮ ಜಮೀನಿನಲ್ಲಿ 12 ವರ್ಷ ಹಳೆಯದಾದ ಕಾರನ್ನು ಧಾರ್ಮಿಕ ವಿದಿವಿಧಾನದಂತೆ ಸಮಾಧಿ ಮಾಡಿದೆ.  ವ್ಯಾಗನ್ ಆರ್‌ (Wagon R) ಕಾರನ್ನು ಸಮಾಧಿ ಮಾಡುವ ಸಲುವಾಗಿ 15 ಅಡಿ ಆಳದ ಹೊಂಡವನ್ನು ಅಗೆಯಲಾಗಿತ್ತು.

ವಿಡಿಯೊದಲ್ಲಿ ಕಾಣಿಸುವಂತೆ ಹೂ ಮಾಲೆಗಳಿಂದ ಅಲಂಕೃತವಾದ ವ್ಯಾಗನ್ ಆರ್‌ ಕಾರನ್ನು ಚಲಾಯಿಸಿಕೊಂಡು ಪೋಲಾರ ಅವರ ಜಮೀನಿಗೆ ತರಲಾಯಿತು. ನಂತರ ಸಮಾಧಿ ಮಾಡುವ ಸ್ಥಳಕ್ಕೆ ಇಳಿಸಲಾಯಿತು. ವಾಹನಕ್ಕೆ ಹಸಿರು ಬಟ್ಟೆಯನ್ನು ಹೊದಿಸಿ, ಪುರೋಹಿತರು ವಿದಿವಿಧಾನ ಕಾರ್ಯಕ್ರಮವನ್ನು ಶುರು ಮಾಡಿದರು. ಕುಟುಂಬಸ್ಥರು ಶ್ರದ್ಧೆಯಿಂದ ಪೂಜೆ ಸಲ್ಲಿಸಿ, ಪುಷ್ಪ ಸಮರ್ಪಣೆ ಮಾಡಿ ಅದ್ಧೂರಿಯಾಗಿ ಬೀಳ್ಕೊಟ್ಟರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಪೋಲಾರಾ, ʼʼನಾನು ಸುಮಾರು 12 ವರ್ಷಗಳ ಹಿಂದೆ ಈ ಕಾರನ್ನು ಖರೀದಿಸಿದ್ದೆ ಮತ್ತು ಇದು ಕುಟುಂಬಕ್ಕೆ ಸಮೃದ್ಧಿಯನ್ನು ತಂದಿದೆ. ವ್ಯಾಪಾರದಲ್ಲಿ ಯಶಸ್ಸನ್ನು ಕಂಡಿದ್ದಲ್ಲದೆ ನನ್ನ ಕುಟುಂಬವು ಗೌರವವನ್ನು ಗಳಿಸಿದೆ. ವಾಹನವು ನನ್ನ ಕುಟುಂಬ ಮತ್ತು ನನಗೆ ಅದೃಷ್ಟವನ್ನು ತಂದಿದೆ. ಅದನ್ನು ಮಾರುವ ಬದಲು ನನ್ನ ಜಮೀನಿನಲ್ಲಿ ಸಮಾಧಿ ಮಾಡಿದ್ದೇನೆʼʼ ಎಂದರು. ಭವಿಷ್ಯದ ಪೀಳಿಗೆ ಅದೃಷ್ಟದ ಕಾರನ್ನು ನೆಪಿಟ್ಟುಕೊಳ್ಳಲು ಈ ರೀತಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಸಮಾಧಿಯ ಮೇಲೆ ಸಸಿ ನೆಟ್ಟಿದ್ದು ಇದರಿಂದ ಕಾರು ಯಾವಾಗಲೂ ನಮ್ಮ ಜತೆಯೇ ಇರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ಪತಿ ಪ್ರಾಣ ಬಿಟ್ಟಿದ್ದ ಹಾಸಿಗೆಯನ್ನು ಗರ್ಭಿಣಿ ಪತ್ನಿಯಿಂದ ಕ್ಲೀನ್‌ ಮಾಡಿಸಿದ ಆಸ್ಪತ್ರೆ ಸಿಬ್ಬಂದಿ; ಶಾಕಿಂಗ್‌ ವಿಡಿಯೋ ವೈರಲ್‌

ಸಮಾರಂಭಕ್ಕೆ ₹ 4 ಲಕ್ಷ  ಖರ್ಚು ಮಾಡಿದ ಪೋಲಾರ ಕುಟುಂಬದ ಹಿಂದೂ ಸಂಪ್ರದಾಯದಂತೆ ಧಾರ್ಮಿಕ ವಿದಿವಿಧಾನಗಳೊಂದಿಗೆ ಕಾರ್ಯಕ್ರಮವನ್ನು ನೆರವೇರಿಸಿದೆ.