Monday, 16th December 2024

Viral Video: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪೊಲೀಸ್ ವಾಹನ; ಮುಂದೇನಾಯ್ತು? ವಿಡಿಯೊ ಇದೆ

Viral Video

ಕಾನ್ಪುರ: ರಸ್ತೆಗಳಲ್ಲಿ ಓವರ್‌ಸ್ಫೀಡ್‌ಗೆ ಬ್ರೇಕ್‌ ಹಾಕುವ ಪೊಲೀಸರೇ ವೇಗವಾಗಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣರಾಗಿದ್ದಾರೆ. ಇತ್ತೀಚೆಗೆ ಅತಿವೇಗವಾಗಿ ಬಂದ ಪೊಲೀಸ್ ವಾಹನವೊಂದು ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಪೊಲೀಸ್ ವಾಹನವು ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮದಿಂದಾಗಿ ವ್ಯಕ್ತಿ ಗಾಳಿಯಲ್ಲಿ ಹಾರಿ ಹೋಗಿ ರಸ್ತೆಯ ಇನ್ನೊಂದು ಬದಿಗೆ ಬಿದ್ದಿದ್ದಾನೆ. ಇಷ್ಟಾದರೂ ಕಾರು ನಿಲ್ಲದೇ ಘಟನಾ ಸ್ಥಳದಿಂದ ವೇಗವಾಗಿ ಮುಂದೆ ಹೋಗಿದೆ. ಅಪಘಾತದ ನಂತರ, ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಕಾನ್ಪುರದ ಸಚೇಂಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನವನ್ನು ಚಾಲನೆ ಮಾಡುತ್ತಿದ್ದ ಕಾನ್ಸ್‌ಟೇಬಲ್‌ ಅಪಘಾತದ ನಂತರ ವ್ಯಕ್ತಿಯ ಕುಟುಂಬದೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಪ್ರಕರಣದ ಬಗ್ಗೆ ಮಾತನಾಡಿದ ಕಾನ್ಪುರ ಪೊಲೀಸ್‍ ಹೆಚ್ಚುವರಿ ಡಿಸಿಪಿ ವಿಜೇಂದ್ರ ಕುಮಾರ್ ದ್ವಿವೇದಿ, “ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾರೂ ಕೂಡ ದೂರು ದಾಖಲಿಸಿಲ್ಲ, ಅದಕ್ಕಾಗಿಯೇ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಹೇಳಿದ್ದಾರೆ. ಗಾಯಗೊಂಡ ವ್ಯಕ್ತಿಯ ಕುಟುಂಬವು ಆರೋಪಿ ಚಾಲಕನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಮತ್ತು ಪ್ರಕರಣದಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ: ಬ್ರ್ಯಾಂಡೆಡ್‌ ಶೂಗಳನ್ನು ಕದ್ದು ಮಾರುತ್ತಿದ್ದ ಕಿಲಾಡಿ ಜೋಡಿ! ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಖತರ್ನಾಕ್ ದಂಪತಿ-ವಿಡಿಯೊ ನೋಡಿ

ಈ ವರ್ಷದ ಆಗಸ್ಟ್‌ನಲ್ಲಿ ಕಾನ್ಪುರದಲ್ಲಿ ಅಪ್ರಾಪ್ತ ಬಾಲಕನೊಬ್ಬ ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಅವರ 12 ವರ್ಷದ ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲನೆ ಮಾಡುತ್ತಿದ್ದ  17 ವರ್ಷದ ಬಾಲಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದಲ್ಲದೆ, ಅಪ್ರಾಪ್ತ ಬಾಲಕನ ತಂದೆಯನ್ನು ಸಹ ಕಾನ್ಪುರ ಪೊಲೀಸರು ಬಂಧಿಸಿದ್ದಾರೆ.